ಕುತೂಹಲಕಾರಿ ಬೆಳವಣಿಗೆಗಳ ನಡುವೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಗುರುವಾರ ಮಧ್ಯಾಹ್ನ ಅಂತ್ಯ ಕಂಡಿತು. ದನದಾಹಕ್ಕೆ ಸೋತ ಕಾಂಗ್ರೆಸ್ ಸದಸ್ಯರಿಂದ, ಗರಿಷ್ಠ ಮತ ಪಡೆದ ಬಿಜೆಪಿಯು ‘ಅನಧಿಕೃತ ಜಯ’ವನ್ನು ಸಂಭ್ರಮಿಸಿತು.
ಕಾಂಗ್ರೆಸ್‌ನ 6 ಮಂದಿ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ, ಬಿಜೆಪಿಯ 9 ಮಂದಿ, 3 ಜನ ಪಕ್ಷೇತರರು ಮತ್ತು ಸಂಸದ ಕೆ.ಸುಧಾಕರ್ ಸೇರಿ ಬಿಜೆಪಿಯ ಗಜೇಂದ್ರ ಒಟ್ಟು 19 ಮತಗಳನ್ನು ಪಡೆದರು. ಉಪಾಧ್ಯಕ್ಷ ಜೆ.ನಾಗರಾಜು 20 ಮತಗಳನ್ನು ಪಡೆದರು.
ಜೆಡಿಎಸ್ ಇಬ್ಬರು ಸದಸ್ಯರು, ಒಬ್ಬ ಪಕ್ಷೇತರ ಸದಸ್ಯ, ಕಾಂಗ್ರೆಸ್‌ನ 10 ಮಂದಿ ಸದಸ್ಯರು, ಶಾಸಕ ಪ್ರದೀಪ್ ಈಶ್ವರ್, ಎಂ.ಎಲ್.ಸಿಗಳಾದ ಅನಿಲ್ ಕುಮಾರ್ ಹಾಗೂ ಸೀತಾರಾಮ್ ಸೇರಿ ಕಾಂಗ್ರೆಸ್‌ನ ಅಂಬರೀಶ್ 16 ಮತಗಳನ್ನು ಪಡೆದರು. ಉಪಾದ್ಯಕ್ಷೆ ಮೀನಾಕ್ಷಿ ವೆಂಕಟೇಶ್ 15 ಮತ ಪಡೆದರು.
ಫಲಿತಾಂಶ ಘೋಷಣೆ ಇಲ್ಲ
ಇತ್ತೀಚೆಗಷ್ಟೇ ಮತದಾರರ ಪಟ್ಟಿಗೆ ಸೇರಿರುವ ಎಂ.ಎಲ್.ಸಿಗಳಾದ ಅನಿಲ್ ಕುಮಾರ್ ಹಾಗೂ ಸೀತಾರಾಮ್ ಅವರ ಮತದಾನ ಹಕ್ಕನ್ನು ಪ್ರಶ್ನಿಸಿ ಬಿಜೆಪಿ ಸದಸ್ಯ ಆನಂದ್ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆ ಚುನಾವಣಾ ಫಲಿತಾಂಶ ಘೋಷಣೆಯಾಗಿಲ್ಲ. ಚುನಾವಣೆಯ ಮತದಾನ ಪ್ರಕ್ರಿಯೆಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ಕೋರ್ಟ್ ಅಂತಿಮ ತೀರ್ಪಿನ ಬಳಿಕವಷ್ಟೇ ಫಲಿತಾಂಶ ನಿರ್ಧಾರವಾಗಲಿದೆ ಎಂದು ಚಿಕ್ಕಬಳ್ಳಾಪುರ ನಗರಸಭೆ ಚುನಾವಣಾಧಿಕಾರಿ ಅಶ್ವಿನ್ ತಿಳಿಸಿದ್ದಾರೆ.
ಸಂಸದ ಡಾ.ಕೆ.ಸುಧಾಕರ್ ಕೋವಿಡ್ ಕಳ್ಳ
ನಗರಸಭೆ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ನಗರ ಶಾಸಕ ಪ್ರದೀಪ್ ಈಶ್ವರ್, ನನ್ನನ್ನ ಸುಧಾಕರ್ ಅಷ್ಟೇ ಅಲ್ಲ ಅವರಪ್ಪ ಬಂದ್ರೂ ಏನೂ ಮಾಡೋಕಾಗಲ್ಲ. ಸಂಸದ ಡಾ.ಕೆ.ಸುಧಾಕರ್ ಕೋವಿಡ್ ಕಳ್ಳ. ಆತನನ್ನು ಒಳಗೆ ಕಳಿಸಿಯೇ ತೀರುತ್ತೇನೆ ಎಂದು ಕೆಂಡಾಮಂಡಲರಾದರು.

ಪೊಲೀಸರಿಗೆ ತರಾಟೆ
ಬಿಜೆಪಿ ನಗರಸಭಾ ಸದಸ್ಯರನ್ನು ಹೊತ್ತು ದಾರ್ಜಿಲಿಂಗ್ ಪ್ರವಾಸ ತೆರಳಿದ್ದ ಬಸ್ ಗುರುವಾರ ಮಧ್ಯಾಹ್ನದ ವೇಳೆಗೆ ನಗರಸಭೆ ಕಾರ್ಯಾಲಯ ತಲುಪಿತು. ಈ ವೇಳೆ ನಗರಸಭೆ ಆವರಣದಲ್ಲಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಅವರನ್ನು ಕಂಡ ಸಂಸದ ಡಾ.ಕೆ.ಸುಧಾಕರ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಗರಸಭಾ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೂ ಇರುವಂತಿಲ್ಲ. ನಿಷೇಧ ಹೇರಿದ್ದರೂ ಹೇಗೆ ಬಂದರು. ನಾವು ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಸಿಟ್ಟಾದರು. ಬಳಿಕ ಚುನಾವಣಾಧಿಕಾರಿ ಅಶ್ವಿನ್ ಅವರು 1.20ಗಂಟೆಯೊಳಗೆ ಕೋರಂ ಇಲ್ಲದಿದ್ದರೆ ಚುನಾವಣೆ ಮುಂದೂಡುವುದಾಗಿ ತಿಳಿಸಿದರು. ಆನಂತರ ಬಿಜೆಪಿ ಸದಸ್ಯರು ಒಳಗಡೆ ತೆರಳಿ ಮತದಾನದಲ್ಲಿ ಪಾಲ್ಗೊಂಡರು.
ವಿಪ್ ಅಡ್ಡಿ, ಹೈಡ್ರಾಮ
ನಗರಸಭೆ ಆವರಣಕ್ಕೆ ಬಸ್‌ನಲ್ಲಿ ಬಂದಿಳಿದ ಕಾಂಗ್ರೆಸ್ ಸದಸ್ಯರಿಗೆ ವಿಪ್ ನೀಡಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಂದಾದರು. ಈ ವೇಳೆ ಸಂಸದ ಸುಧಾಕರ್ ಕಾಂಗ್ರೆಸ್ ಮುಖಂಡರು ಇಲ್ಲಿರುವಂತಿಲ್ಲ. ಇದು ಕಾನೂನು ಬಾಹಿರ ಎಂದು ವಿಪ್ ನೀಡಲು ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಈ ವೇಳೆ ಬಿಜೆಪಿ ಸದಸ್ಯರು, ಕಾಂಗ್ರೆಸ್ ಮುಖಂಡರೊಂದಿಗೆ ತಳ್ಳಾಟ ನೂಕಾಟಗಳ ಹೈಡ್ರಾಮವೂ ನಡೆಯಿತು.