ಮುಖ್ಯಮಂತ್ರಿಯನ್ನಾಗಿ ಮಾಡುವುದು ಹೈಕಮಾಂಡಿನದು. ಸಿಎಂ ಬದಲಾವಣೆಯಂಥ ಪ್ರಸಂಗ ಎದುರಾದರೆ ನಾನೂ ಸಿಎಂ ಆಕಾಂಕ್ಷಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಕಾಂಗ್ರೆಸ್ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಎಂಸಿಸಿ ಬಿ ಬ್ಲಾಕ್‌ನಲ್ಲಿನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಗೃಹಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರೇ ಮುಂದುವರಿಯುತ್ತಾರೆ. ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯರ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ಹೈಕಮಾಂಡ್ ಆಶೀರ್ವಾದ ಇರುವವರೆಗೂ ಸಿಎಂ ಸಿದ್ದರಾಮಯ್ಯರು ಮುಖ್ಯಮಂತ್ರಿಯಾಗಿ ಇರುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಶಾಸಕರು ಶಾಸಕಾಂಗ ನಾಯಕನ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂತಿಮ ನಿರ್ಧಾರ ಹೈಕಮಾಂಡಿನದು. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವುದರಲ್ಲಿ ಪ್ರಯೋಜನವಿಲ್ಲ. ನಾನು ಹಿರಿಯನಿದ್ದು, ಸಿಎಂ ಆಗಬೇಕೆಂದು ಹೇಳಿಕೊಂಡು ಓಡಾಡಿದರೆ ಹಗುರ ಆಗ್ತಾರೆ ಅಷ್ಟೇ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹ; ದಸಂಸದಿಂದ ಬೃಹತ್ ತಮಟೆ ಚಳವಳಿ
“ರಾಜಕೀಯದಲ್ಲಿ ಜೂನಿಯರ್, ಸೀನಿಯರ್ ಎಂಬ ಪ್ರಶ್ನೆ ಬರುವುದಿಲ್ಲ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮತ ಹಾಕಿದರೆ ಬಹುಮತ ಪಡೆದವರು ಮುಖ್ಯಮಂತ್ರಿಯಾಗುತ್ತಾರೆ. ಹಾಗಾಗಿ ನಾನೂ ಸಿಎಂ ಹುದ್ದೆ ಬಿಡುವುದಿಲ್ಲ. ನಾನೂ ಸ್ಪರ್ಧೆಯಲ್ಲಿರುತ್ತೇನೆ” ಎಂದು ಸೂಚ್ಯವಾಗಿ ತಿಳಿಸಿದರು.