ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಸಿಪಿಐಎಂ ನಾಯಕ ಸೀತಾರಾಮ ಯೆಚೂರಿ(72) ಅನಾರೋಗ್ಯ ಹಿನ್ನೆಲೆ ನಿಧನರಾಗಿದ್ದು, ಸಿಪಿಐಎಂ ಮುಖಂಡ ಡಾ.ಅನಿಲ್ ಕುಮಾರ್ ಅವುಲಪ್ಪ ಸಂತಾಪ ಸೂಚಿಸಿದ್ದಾರೆ.
ತಮ್ಮ ರಾಜಕೀಯ ಜೀವನದುದ್ದಕ್ಕೂ ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಂಡು ಬಂದಿದ್ದ ಯೆಚೂರಿ ರಾಜ್ಯಸಭೆಯಲ್ಲಿ ಅತ್ಯಂತ ಆಳವಾದ ಅಧ್ಯಯನದಿಂದ ಭಾಷಣವನ್ನು ಮಾಡುತ್ತಲೇ ದೇಶದ ಗಮನ ಸೆಳೆಯುತ್ತಿದ್ದರು.
ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಸೀತಾರಾಂ ಯೆಚೂರಿ ಅವರು ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಸಮ್ಮಿಶ್ರ ರಾಜಕೀಯಕ್ಕೆ ಅವರ ಕಾರ್ಯತಂತ್ರದ ವಿಧಾನ ಮತ್ತು ಮಾರ್ಕ್ಸ್‌ವಾದದ ತತ್ವಗಳನ್ನು ಅನುಸರಿಸುವ ಮೂಲಕ ಹೆಸರು ಮಾಡಿದ್ದರು.
1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರುವ ಮೂಲಕ ಅವರ ರಾಜಕೀಯ ಜೀವನ ಆರಂಭವಾಯಿತು. ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಎಸ್‌ಎಫ್‌ಐ ಅಖಿಲ ಭಾರತದ ಅಧ್ಯಕ್ಷರಾದರು, 1984 ರಲ್ಲಿ ಅವರು ಸಿಪಿಐ (ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದರು. 1992 ರಿಂದ ಮೂರು ದಶಕಗಳ ಕಾಲ ಪಾಲಿಟ್‌ಬ್ಯೂರೊದ ಸದಸ್ಯರಾಗಿದ್ದರು.ತಮ್ಮ ಜೀವನದ ಕೊನೆಯವರೆಗೂ ಪ್ರಗತಿಪರ ಚಳುವಳಿಯಲ್ಲಿ ಶ್ರಮಿಸಿ ಸಿದ್ದಾಂತವನ್ನೆ ಉಸಿರಾಗಿರಿಸಿಕೊಂಡು ಜೀವಿಸಿದ್ದರು.
ಈ ಸುದ್ದಿ ಓದಿದ್ದೀರಾ? ಆಂಧ್ರಪ್ರದೇಶ | ಭೀಕರ ಅಪಘಾತ: ಕಾರಿನ ಮೇಲೆ ಬಿದ್ದ ಲಾರಿ; ಚಿಕ್ಕಬಳ್ಳಾಪುರದ ಮೂವರು ಸಾವು
ಬಾಗೇಪಲ್ಲಿಗೆ ಬಿಡದ ನಂಟು
ಯೆಚೂರಿ ಅವರಿಗೂ ಜಿ.ವಿ.ಶ್ರೀರಾಮ ರೆಡ್ಡಿಯವರಿಗೂ ಉತ್ತಮ ನಂಟಿತ್ತು. ಅವರಿಗೆ ಬಾಗೇಪಲ್ಲಿ ಎಂದರೆ ಪಂಚ ಪ್ರಾಣ. ಬಾಗೇಪಲ್ಲಿಯ ಯಾವುದೇ ಸಮಸ್ಯೆಗಳಿದ್ದರೂ ಅವರ ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ಅನಿಲ್ ಕುಮಾರ್ ಸ್ಮರಿಸಿದ್ದಾರೆ.

ಇದೇ ವೇಳೆ ಚನ್ನರಾಯಪ್ಪ, ಮುನಿ ವೆಂಕಟಪ್ಪ, ರಘುರಾಮ ರೆಡ್ಡಿ, ವಾಲ್ಮೀಕಿ ಅಶ್ವಥಪ್ಪ, ಸಾವಿತ್ರಮ್ಮ, ಅಬ್ದುಲ್ ಕರೀಂ ಸಾಬ್, ಜಿ.ಕೃಷ್ಣಪ್ಪ ಸೇರಿದಂತೆ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.