ಹಿರಿಯ ಸಾಹಿತಿ, ಕನ್ನಡ ಪ್ರಾಧ್ಯಾಪಕ ಜಿ.ಬಿ.ವಿಸಾಜಿ (82) ಗುರುವಾರ ಬೆಂಗಳೂರಿನಲ್ಲಿ ನಿಧನರಾದರು.
ಭಾಲ್ಕಿಯ ಚನ್ನಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಕಾವ್ಯ, ಸಂಪಾದನೆ, ವಿಮರ್ಶೆ, ಲೇಖನ ಹಾಗೂ ಶರಣ ಸಾಹಿತ್ಯದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸುಮಾರು 4 ದಶಕಗಳಿಗೂ ಅಧಿಕ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ವಿವಿಧ ಸಂಘ-ಸಂಸ್ಥೆಗಳ ಹಾಗೂ ಸರ್ಕಾರದ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಅವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ. ನಾಳೆ (ಸೆ.13) ಮಧ್ಯಾಹ್ನ 2.30ಕ್ಕೆ ಸ್ವಗ್ರಾಮ ಭಾಲ್ಕಿಯ ರೈಲ್ವೆ ನಿಲ್ದಾಣ ಬಳಿಯ ಅವರ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಂತಾಪ :
ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಂತಾಪ ಸೂಚಿಸಿದ್ದಾರೆ.
ʼಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯಿಂದ ಜಿಲ್ಲೆಯ ಸಾಹಿತ್ಯ ಲೋಕವು ಶೂನ್ಯವಾಗಿದ್ದು, ಅವರ ಸ್ಮರಣೆ ಸದಾ ಪ್ರೇರಣೆ ನೀಡುವಂತೆ ಮಾಡುತ್ತದೆ’ ಎಂದು ಸಚಿವ ಖಂಡ್ರೆ ಕಂಬನಿ ಮಿಡಿದಿದ್ದಾರೆ.