ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ಅಂತಿಮ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಮುಡಾ ಹಗರಣ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ಅಂತಿಮ ಹಂತದ ವಿಚಾರಣೆ ಗುರುವಾರ (ಸೆ.12) ಹೈಕೋರ್ಟ್ನಲ್ಲಿ ನಡೆಯಿತು.
ಮುಖ್ಯ ನ್ಯಾಯಮೂರ್ತಿ ಎಂ ನಾಗಪ್ರಸನ್ ಅವರು ಸಿದ್ದರಾಮಯ್ಯ ಅರ್ಜಿ ಕುರಿತ ತೀರ್ಪುನ್ನು ಕಾಯ್ದಿರಿಸಿದರು. ಅರ್ಜಿ ವಿಲೇವಾರಿಯಾಗುವವರೆಗೂ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಹೈಕೋರ್ಟ್ ಹೇಳಿದೆ.
ಇಂದಿನ ವಾದ-ಪ್ರತಿವಾದ ಹೇಗಿತ್ತು?
ಇಂದು (ಸೆ.12) ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. “ಜನಪ್ರತಿನಿಧಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೊಡುವಾಗ ವಾಕ್ ಆ್ಯಂಡ್ ಗೋ ರೀತಿಯಲ್ಲಿ ನಿರ್ಧಾರಗಳು ಆಗಬಾರದು. ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ಮಾತ್ರ ಸಿಮೀತವಾಗಿದೆ” ಎಂದು ಅಭಿಷೇಕ್ ಮನುಸಿಂಘ್ವಿ ವಾದಿಸಿದರು.
“ರಾಜ್ಯಪಾಲರ ಆದೇಶದಲ್ಲಿ ಒಂದೇ ಅಂಶ ಮುಖ್ಯವಾಗಿದೆ. ನಾನು ವಿವೇಚನಾಧಿಕಾರವನ್ನು ಬಳಸುತ್ತಿದ್ದೇನೆ. ಸಚಿವ ಸಂಪುಟದ ಯಾವುದೇ ನಿರ್ಧಾರವನ್ನು ಪರಿಗಣಿಸಿಲ್ಲ ಎಂದಿದೆ. ಆದರೆ ರಾಜ್ಯಪಾಲರಿಗೆ ಸಿಎಂ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಮೇಲ್ನೊಟಕ್ಕೆ ಯಾವುದೇ ಸಾಕ್ಷಿ ಇದೆ ಎಂದು ಉಲ್ಲೇಖಿಸಿಲ್ಲ” ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ಸಂವಿಧಾನಕ್ಕೆ ರಾಜ್ಯಪಾಲರಿಂದ ಅಪಚಾರ
ರಾಜ್ಯಪಾಲರು ವಿವೇಚನೆಯನ್ನು ಹೇಗೆ ಬಳಸಿದೆ ಎಂಬುದನ್ನು ತಿಳಿಸಬೇಕಿತ್ತು. ತಾರತಮ್ಯ ಮಾಡಿಲ್ಲವೆಂಬುದನ್ನು ರಾಜ್ಯಪಾಲರು ವಾದಿಸಬೇಕಿತ್ತು. ಇನ್ನೊಂದು ಪ್ರಮುಖ ಅಂಶವೆಂದರೆ ರಾಜ್ಯಪಾಲರ ಐದಾರು ಪುಟದ ಆದೇಶದಲ್ಲಿ ಬೇರೇನೂ ಹೇಳಿಲ್ಲ. ನಾನು ಸಚಿವ ಸಂಪುಟದ ಆದೇಶ ಪಾಲಿಸಬೇಕಿಲ್ಲವೆಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಸಿಎಂ ಪಾತ್ರ ಇದೆಯೇ ಎಂಬುದನ್ನು ರಾಜ್ಯಪಾಲರು ತಿಳಿಸಿಲ್ಲ. ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ ಹೇಳಿಲ್ಲ. ಹೀಗಾಗಿ ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಯಾವ ಸಂಪುಟ ತಾನೆ ತನ್ನ ನಾಯಕ ವಿರುದ್ಧ ತನಿಖೆಗೆ ನೀಡಿ ಎಂದು ಹೇಳುತ್ತದೆ” ಎಂದು ಪ್ರಶ್ನಿಸಿದರು.
“ರಾಜ್ಯಪಾಲರು ಸಚಿವ ಸಂಪುಟದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಸಿಎಂ ವಿಚಾರ ಎಂಬ ಕಾರಣ ಮಾತ್ರಕ್ಕೆ ಸಚಿವ ಸಂಪುಟದ ತೀರ್ಮಾನ ಕಡೆಗಣಿಸಬಾರದು. ಹಾಗೆ ನೋಡಿದರೆ ರಾಷ್ಟ್ರಪತಿಗಳಿಗಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವಿದೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಅಧಿಕಾರ ರಾಜ್ಯಪಾಲರಿಗೆ ಮಾತ್ರವಿದೆ. ಅವರ ವಿವೇಚನಾಧಿಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿರಬೇಕು” ಎಂದು ಅಭಿಷೇಕ್ ಸಿಂಘ್ವಿ ವಿವರಿಸಿದರು.
“ರಾಜ್ಯಪಾಲರು ಸಹಜ ನ್ಯಾಯ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಪ್ರಕರಣದಲ್ಲಿ ಒಬ್ಬರ ದೂರಿನ ಅನುಸಾರ ಶೋಕಾಸ್ ನೋಟಿಸ್ ನೀಡಿದ್ದಾರೆ. ಮತ್ತಿಬ್ಬರ ದೂರಿನ ಬಗ್ಗೆ ಶೋಕಾಸ್ ನೋಟಿಸ್ ಅಗತ್ಯವಿಲ್ಲವೆಂದಿದ್ದಾರೆ. ರಾಜ್ಯಪಾಲರು ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಹೆಚ್ ಡಿ ಕುಮಾರಸ್ವಾಮಿ ಪ್ರಕರಣದಲ್ಲಿ ಅನುಮತಿ ನೀಡಿಲ್ಲ. ಮುಡಾ ಭೂಸ್ವಾಧೀನವಾಗದೇ ಜಮೀನು ಬಳಸಿಕೊಂಡಿದ್ದಕ್ಕೆ ಬದಲಿ ಜಮೀನು ನೀಡಿದೆ” ಎಂದು ಈ ಬಗ್ಗೆ ದಾಖಲೆಗಳನ್ನು ಸಿಂಘ್ವಿ ನ್ಯಾಯಾಲಯಕ್ಕೆ ಸಲ್ಲಿಸಿದರು.
“ಈ ರೀತಿ ಸಂಶಯಾಸ್ಪದ ಹಿನ್ನೆಲೆಯ ವ್ಯಕ್ತಿಗಳ ಮನವಿಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಾರದು. 50- 50 ನಿವೇಶನ ಹಂಚಿಕೆ ಬಿಜೆಪಿ ಸರ್ಕಾರದ ಸಮಯದಲ್ಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲ” ಎಂದು ಅಭಿಷೇಕ್ ಸಿಂಘ್ವಿ ಸಿದ್ದರಾಮಯ್ಯ ಪರ ವಾದ ಮಂಡಿಸಿದರು.
ಸಿಎಂ ಪರ ವಾದ ಮಂಡಿಸಿದ ರವಿವರ್ಮ ಕುಮಾರ್
“ಅಕ್ರಮ ಮತ್ತು ಅಧಿಕಾರ ದುರುಪಯೋಗವಾಗಿರುವ ಸಾಧ್ಯತೆ ಇದೆ ಎಂದು ರಾಜ್ಯಪಾಲರ ಉಲ್ಲೇಖವಿದೆ. ಸಹಿ ಹಾಕಿದ ಬಳಿಕ ಷೋಕಾಸ್ ನೋಟಿಸ್ ನೀಡಿದ್ದಾರೆ. ಆ. 14 ರಂದು ಫೈಲ್ ಪರಿಶೀಲಿಸಿದ್ದೇನೆ, ಡಿಕ್ಟೇಷನ್ ನೀಡಿದ್ದೇನೆ ಎಂದು ಬರೆಯಲಾಗಿದೆ. ಆದರೆ ಟಿ ಜೆ ಅಬ್ರಹಾಂ ನೀಡಿದ ದೂರಿನನ್ವಯ ಜು. 26 ರಂದು 26.07 ರಂದು ಫೈಲ್ ಸಿದ್ದಪಡಿಸಲಾಗಿದೆ. ಜು 5 ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆದರೆ ಕಡತದಲ್ಲಿ ಅದರ ಉಲ್ಲೇಖವಿಲ್ಲ” ಎಂದು ಸಿಎಂ ಪರ ಪ್ರೋ. ರವಿವರ್ಮ ಕುಮಾರ್ ವಾದಿಸಿದರು.
“ರಾಜ್ಯಪಾಲರ ಆದೇಶದಲ್ಲಿ 25 ಸೆಕ್ಷನ್ ಗಳನ್ನು ಉಲ್ಲೇಖಿಸಲಾಗಿದೆ.ಉದಾಹರಣೆಗೆ ಪೋರ್ಜರಿ ಮತ್ತಿತರ ಸೆಕ್ಷನ್ ಉಲ್ಲೇಖಿಸಿದ್ದಾರೆ. ಆದರೆ ಎಲ್ಲಿ ಸಿಎಂ ಪೋರ್ಜರಿ ಮಾಡಿದ್ದಾರಾ ಎಂಬುದಕ್ಕೆ ಉತ್ತರವಿಲ್ಲ. ಜಮೀನು ಸ್ವಾಧೀನವಾದ ಬಳಿಕ ಪರಿಹಾರದ ನೋಟಿಸ್ ವಿಳಂಬವಾಗಿ ತಲುಪಿದೆ. ಮುಡಾ ಜಮೀನನ್ನು ಭೌತಿಕವಾಗಿ ಸ್ವಾಧೀನಕ್ಕೆ ಪಡೆದಿರಲಿಲ್ಲ. ನಂತರ ಸೆ. 48 ಅಡಿ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಮಹಜರ್ ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರಲಿಲ್ಲ. ರಾಜ್ಯಪಾಲರು ಮುಡಾ ಸ್ವಾಧೀನದಲ್ಲಿತ್ತು ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶವೇ ಕಾನೂನುಬಾಹಿರವಾಗಿದೆ” ಎಂದು ರವಿವರ್ಮ ಕುಮಾರ್ ನ್ಯಾಯಾಧೀಶರ ಗಮನಕ್ಕೆ ತಂದರು.
“ಸಿದ್ದರಾಮಯ್ಯ ಮಾತ್ರ ಕಳೆದ ಐವತ್ತು ವರ್ಷಗಳಲ್ಲಿ ಅವಧಿ ಪೂರೈಸಿದ್ದು, ಐದು ವರ್ಷಗಳ ನಂತರವೂ ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಈ ರೀತಿ ಜುಜುಬಿ ಸೈಟ್‌ಗೆ ಸಿಎಂ ಹೀಗೆಲ್ಲಾ ಮಾಡುವ ಅಗತ್ಯವಿರಲಿಲ್ಲ. 60-40ಗೆ ಅವರ ತಕರಾರಿಲ್ಲ, 50- 50 ಅನುಪಾತಕ್ಕೆ ತಕರಾರಿದೆ. ಪರಿಹಾರದ ನಿವೇಶನ ಕೊಟ್ಟಿರುವುದು ಅರ್ಜಿದರರಲ್ಲ ಅಲ್ಲ ಮುಡಾ.ಈ ರೀತಿ ಜನಪ್ರಿಯ ನಾಯಕನ ವಿರುದ್ಧ ರಾಜ್ಯಪಾಲರು ಈ ರೀತಿ ಅನುಮತಿ ನೀಡಿರುವುದು ರಾಜಕೀಯ ದುರುದ್ದೇಶ ಸ್ಪಷ್ಟಪಡಿಸುತ್ತದೆ” ಎಂದು ವಾದಿಸಿದರು.
ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ
“ಯಾವುದೇ ತನಿಖೆಯ ಆಧಾರವಿಲ್ಲದೇ 17 ಎ ಅನುಮತಿಯೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ರಾಜ್ಯಪಾಲರು ಪಾಲಿಸಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿ ಕಾನೂನುಬಾಹಿರ” ಎಂದು ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ದೂರುದಾರ ಟಿ ಜೆ ಅಬ್ರಹಾಂ ಪರ ರಂಗನಾಥ್ ರೆಡ್ಡಿ ವಾದ
“ಒಂದೆಡೆ ಕೃಷಿ ಜಮೀನೆಂದು, ಮತ್ತೊಂದೆಡೆ ಮುಡಾ ಜಮೀನು ಒತ್ತುವರಿ ಮಾಡಿದೆ ಎನ್ನುತ್ತಿದ್ದಾರೆ. ಸಿಎಂ ಪರ ವಕೀಲರು ಎರಡೆರಡು ರೀತಿಯಲ್ಲಿ ವಾದ ಮಂಡಿಸುತ್ತಿದ್ದಾರೆ. ಪ್ರಕ್ರಿಯೆ ಪಾಲಿಸದೇ ಹಣವನ್ನು ಠೇವಣಿ ಇಡುವುದು ಸಾಧ್ಯವಿಲ್ಲ. ಇದು ಹೇಗಾಗಿದೆ ಎಂದರೆ ದೇವನೂರ ಬಡಾವಣೆಯ ಜಮೀನಿಗೆ ವಿಜಯನಗರದಲ್ಲಿ ಬದಲಿ ನಿವೇಶನ. ಚಿಂತಾಮಣಿಯ ಜಮೀನಿಗೆ ಸದಾಶಿವನಗರದಲ್ಲಿ ನಿವೇಶನ ಕೊಟ್ಟಂತಾಗಿದೆ” ಎಂದು ದೂರುದಾರ ಟಿ ಜೆ ಅಬ್ರಹಾಂ ಪರ ರಂಗನಾಥ್ ರೆಡ್ಡಿ ವಾದಿಸಿದರು.