ವಿಶೇಷ ಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್‌ಪಿಡಿ ಟಾಸ್ಕ್ ಪೋರ್ಸ್ ವತಿಯಿಂದ ರಾಯಚೂರು ಅಪರ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಿಗೆ ಯಾವುದೇ ಮಾನದಂಡವಿಲ್ಲದೆ ಅವೈಜ್ಞಾನಿಕವಾಗಿ ರ‍್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ತೆರವುಗೊಳಿಸಿ ಮರು ನಿರ್ಮಾಣ ಮಾಡಬೇಕು ಮತ್ತು ಎಲ್ಲ ಸರ್ಕಾರಿ ಇಲಾಖೆಯಲ್ಲಿ ವೀಲ್ ಚೇರ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ವಿಶೇಷ ಚೇತನರ ಹಕ್ಕುಗಳ ಕಾಯ್ದೆ 2006 ರ ಸೆಕ್ಷನ್ 72 ರ ಅಡಿಯಲ್ಲಿ ರಚನೆಯಾದ ಜಿಲ್ಲಾ ಅನುಷ್ಟಾನ ಸಮಿತಿ ಹಾಗೂ ಜಿಲ್ಲಾ ಮಟ್ಟದವಿಶೇಷ ಚೇತನರ ಕುಂದುಕೊರತೆಗಳ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು. ಪ್ರತಿ ತಾಲೂಕುಗಳಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ವಿಶೇಷ ಚೇತನರ ಕುಂದುಕೊರತೆಗಳ ಸಭೆಗಳನ್ನು ಹಮ್ಮಿಕೊಳ್ಳಲು ಆದೇಶ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ಸ್ವಂತ ನಿಧಿ, ಎಸ್. ಎಫ್. ಸಿ, ಅನುದಾನ ಹಾಗೂ 2002-03ನೇ ಸಾಲಿನಲ್ಲಿ ಬಿಡುಗಡೆಯಾದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ 4 ರ ಅಡಿ ಮಂಜೂರಾದ ಅನುದಾನಗಳಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ಮೀಸಲಿರುವ ಶೇ.5 ರಷ್ಟರ ಅನುದಾನವನ್ನು 2024-25 ನೇ ಸಾಲಿನ ಒಳಗಾಗಿ ಸಂಪೂರ್ಣ ಬಳಕೆಯಾಗಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಉಡುಪಿ | ಲಂಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಆರ್ ಮನೋಹರ್ ಅಭಿವೃದ್ಧಿಪಡಿಸಿದ ಬೈನಾಕ್ಯುಲರ್
ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಗಳಿಗೆ ನಿಗದಿಪಡಿಸಿರುವ ಹಾಗೂ ಸ್ವಂತ ಸಂಪನ್ಮೂಲಗಳಿಂದ ಬರುವ ಅನುದಾನ ಸೇರಿಸಿ ಒಟ್ಟು ಅನುದಾನದಲ್ಲಿ ಶೇ. 5 ರಷ್ಟು ಅನುದಾನ ವನ್ನು ವಿಶೇಷ ಚೇತನರ ಸರ್ವತೋಮುಖ ಅಭಿವೃದ್ಧಿಗಾಗಿ ಬಳಕೆ ಮತ್ತು ವಿವಿಧ ಇಲಾಖೆಗಳ ಹಾಗೂ ಇಲಾಖೇತರರ ಸಮನ್ವಯತೆಯಿಂದ ವಿಶೇಷ ಚೇತನರ ಸಮಗ್ರ ಅಭಿವೃದ್ಧಿಗಾಗಿ ಹೊರಡಿಸಿದ ಸುತ್ತೋಲೆ ಅನುಷ್ಠಾನ ಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂಡಿ ಜಾಫರ್ ಮಾನ್ವಿ, ಪ್ರಧಾನ ಕಾರ್ಯದರ್ಶಿ ಸುರೇಶ ಭಂಡಾರಿ ಮುದಗಲ್, ಮಹಮದ್ ಅನ್ವರ್, ಅಸ್ಕಿಹಾಳ ನಾಗರಾಜ, ಅಜಮಲ್, ಹನುಮೇಶ ಕಾತರಕಿ, ರಾಯಪ್ಪ ಮಸ್ಕಿ, ಗುಂಡಪ್ಪಗೌಡ ಸಿರವಾರ ಸೇರಿದಂತೆ ಅನೇಕರು ಇದ್ದರು.
