ಜಿಲ್ಲೆಯಲ್ಲಿ ಕಳೆದ ಎರಡು ವಾರ ನಿರಂತರವಾಗಿ ಸುರಿದ ಭಾರಿ ಮಳೆಗೆ ರೈತರು ಬೆಳೆದ ಉದ್ದು, ಹೆಸರು, ತೊಗರಿ ಹಾಗೂ ತರಕಾರಿ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ನಾಶವಾಗಿವೆ. ಕೂಡಲೇ ಸರ್ಕಾರ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತ್ರತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ʼಜಿಲ್ಲೆಯ ಮಾರುಕಟ್ಟೆಯಲ್ಲಿ ಮುಂಗಾರಿನ ಬೆಳೆಗಳ ದರ ಕುಸಿತವಾಗಿದೆ. ಹೀಗಾಗಿ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತರಿಗೆ ಅನ್ಯಾಯವಾಗುತ್ತದೆ. ಈಗಾಗಲೇ ತಿಂಗಳಿಂದ ರಾಶಿ ಮಾಡಿದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕಾಟಾಚಾರಕ್ಕೆ ಎಂಬಂತೆ ಓರ್ವ ರೈತರಿಂದ 10 ಕ್ವಿಂಟಲ್ ಕಾಳು ಖರೀದಿ ಮಾಡುತ್ತೇವೆಂದು ಹೇಳಿತ್ತು. ಆದರೆ, ಇಲ್ಲಿಯವರೆಗೆ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲʼ ಎಂದು ದೂರಿದರು.
ʼಈ ಹಿಂದೆ ಒಬ್ಬ ರೈತರಿಂದ 5 ಎಕರೆವರೆಗೆ 20 ಕ್ವಿಂಟಲ್ ಖರೀದಿ ಮಾಡುತ್ತಿತ್ತು, ಅದೇ ರೀತಿ ಎಕರೆಗೆ 20 ಕ್ವಿಂಟಲ್ ಖರೀದಿ ಮಾಡಬೇಕು. ಬೆಳೆ ವಿಮೆ ಕಟ್ಟಿದ ರೈತರಿಗೆ ವಿಮಾ ಹಣ ಪಾವತಿಸಬೇಕು. ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ಕೆಲ ರೈತರಿಗೆ ಇನ್ನು ಕಬ್ಬಿನ ಬಾಕಿ ಹಣ ಪಾವತಿಸಲಿಲ್ಲ. ಅಂತಹ ಕಾರ್ಖಾನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಬಾಕಿ ಉಳಿದ ರೈತರ ಹಣವನ್ನು ಕೂಡಲೇ ಬಡ್ಡಿ ಸಹಿತ ಪಾವತಿಸಬೇಕು ʼಎಂದು ಆಗ್ರಹಿಸಿದರು.
ಸರ್ಕಾರ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದಿಸಿ ಬಗೆಹರಿಸಬೇಕು. ಇಲ್ಲವಾದರೆ ರೈತರು ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಿರಿಯ ಸಾಹಿತಿ, ಪ್ರಾಧ್ಯಾಪಕ ಜಿ.ಬಿ.ವಿಸಾಜಿ ನಿಧನ
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ವಿಠಲರಾವ ಮೇತ್ರೆ, ನಾಗಶೆಟ್ಟೆಪ್ಪ ಲಂಜವಾಡೆ, ಶಿವಕಾಂತ ಖಂಡೆ, ಬಸವರಾಜ ಅಷ್ಟೂರ್, ವಿಠಲರೆಡ್ಡಿ ಆಣದೂರ, ಕಾಶೆಪ್ಪಾ ಹುಡಗಿ ಇದ್ದರು.