ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕಳೆದುಕೊಂಡು ನಿರುದ್ಯೋಗಿಯಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿ ಉಳಿದಿದ್ದಾರೆ. ಇತ್ತೀಚೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, ಕೊಲೆ ಆರೋಪಿಗಳ ಎನ್‌ಕೌಂಟರ್ ಮಾಡುವ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಇದೀಗ, ‘ನಾವು ತಲ್ವಾರ್ ಹಿಡಿಯುತ್ತೇವೆ’ ಎಂದು ಹೇಳುವ ಮೂಲಕ ಮತ್ತೆ ವಿವಾದ ಸೃಷ್ಟಿಸಿ ಸುದ್ದಿಯಾಗಿದ್ದಾರೆ.
ಮುಸ್ಲಿಮರ ವಿರುದ್ಧ ಕೋಮು ಕಿಡಿಕಾರುತ್ತಲೇ ಇರುವ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಮಾತನಾಡಿದ್ದು, “ಮುಸ್ಲಿಮರ ಬಳಿ ಇರುವ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ, ನಾವು ತಲ್ವಾರ್ ಹಿಡಿಯುತ್ತೇವೆ” ಎಂದಿದ್ದಾರೆ.
“ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅದ್ದೂರಿ ಗಣೇಶ ಮೆರವಣಿಗೆಗಳು ನಡೆಯುತ್ತವೆ ಅಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಸ್ಲಿಮರ ಮೇಲೆ ನಿಯಂತ್ರಣ ಹೇರಬೇಕು” ಎಂದಿದ್ದಾರೆ.
ಮಹಿಷ ದಸರಾ ಬಗ್ಗೆ ಮಾತನಾಡಿದ ಮಾಜಿ ಸಂಸದ, “ಚಾಮುಂಡಿಗೆ ಅವಮಾನ ಆಗುವುದಕ್ಕೆ ಬಿಡುವುದಿಲ್ಲ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ಮಾಡಿಕೊಳ್ಳಲಿ” ಎಂದಿದ್ದಾರೆ.
ಮುಡಾ ಮತ್ತು ವಾಲ್ಮೀಕಿ ನಿಮಗದ ಆಪಾದಿತ ಹಗರಣಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆದಂಡ ಖಚಿತ. ಮುಡಾ ಹಗರಣ ವಿಚಾರ ಹೈಕೋರ್ಟ್‌ನಲ್ಲಿದೆ. ಆ ಪ್ರಕರಣದಲ್ಲಿ ಏನೇ ಆದರೂ, ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡುವುದು ನಿಶ್ಚಿತ. ಆರ್ಥಿಕ ಹಗರಣ ಆದಾಗ, ಆರ್ಥಿಕ ಸಚಿವರೇ ಹೊಣೆಗಾರರಾಗಿರುತ್ತಾರೆ. 88 ಕೋಟಿ ರೂಪಾಯಿ ಅವ್ಯವಹಾರ ಆಗಿರುವ ಬಗ್ಗೆ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.