ದೇಶದಲ್ಲಿ ಪ್ರಧಾನಿ ಮೋದಿ ಅವರ ಭಕ್ತರ ದಂಡೇ ಇದೆ. ಅವರಲ್ಲಿ ಹಲವರು ಅರ್ಧಂಬರ್ಧ ತಿಳಿದವರು, ಜಾಗತಿಕವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ ಹೆಚ್ಚು ತಿಳುವಳಿಕೆ ಇಲ್ಲದವರು ಅಂದರೆ ತಪ್ಪಾಗಲಾರದು. ಅವರೆಲ್ಲರೂ ಮೋದಿ ಪ್ರಧಾನಿಯಾದ ಮೇಲೆಯೇ ದೇಶ ಉಳಿದಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಮೋದಿಯಿಂದಲೇ ಭಾರತ ಸುಭದ್ರವಾಗಿದೆ ಎಂದೆಲ್ಲ ಬಡಬಡಾಯಿಸುತ್ತಾರೆ. ಆದರೆ, ಇದೆಲ್ಲವೂ ನಿಜವಾ? ಭಾರತದ ಶತ್ರು ರಾಷ್ಟ್ರಗಳು ಎಂದು ಹೇಳಲಾಗುತ್ತಿರುವ ಚೀನಾ-ಪಾಕಿಸ್ತಾನಗಳು ಭಾರತದ ವಿಷಯದಲ್ಲಿ ಮೌನವಾಗಿವೆಯಾ? ಖಂಡಿತಾ ಇಲ್ಲ…!
ಅಂದಹಾಗೆ, ಅಮೇರಿಕಾದ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ ಭೂಪ್ರದೇಶವನ್ನು ಚೀನಾ ಹೇಗೆ ಅತಿಕ್ರಮಿಸಿಕೊಂಡಿದೆ ಎಂಬ ಬಗ್ಗೆ ತಿಳಿಸಿದ್ದಾರೆ. ‘ಚೀನಾಗೆ ತಕ್ಕಪಾಠ ಕಲಿಸುವಲ್ಲಿ ಮೋದಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ’ ಎಂದೂ ಆರೋಪಿಸಿದ್ದಾರೆ. ಹಾಗೇ ನೋಡಿದರೆ, ಉಕ್ರೇನ್ ಮತ್ತು ರಷ್ಯಾ ಯುದ್ಧವನ್ನೇ ನಿಲ್ಲಿಸಿಬಿಟ್ಟೆವು ಅಂತ ಹೇಳಿಕೊಳ್ಳುವ ಮೋದಿಗೆ ಚೀನಾವನ್ನ ಎದುರಿಸುವ ಸಾಮರ್ಥ್ಯವಿಲ್ಲವಾ ಎಂಬ ಪ್ರಶ್ನೆ ಕಾಡುತ್ತದೆ.
“ನೆರೆಯ ದೇಶದ ಸೈನಿಕರು ಭಾರತದ 4,000 ಚದರ ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದು ಒಂದು ದುರಂತ. ದೆಹಲಿಯಷ್ಟು ವಿಸ್ತಾರವಾದ ನಮ್ಮ ನೆಲವನ್ನು ಚೀನಾದ ಸೈನಿಕರು ಆಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಬರೆಯಲು ಮಾಧ್ಯಮಗಳಿಗೆ ಇಷ್ಟವಿಲ್ಲ. ನೆರೆಯ ದೇಶವು ನಿಮ್ಮ 4,000 ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡರೆ ಅಮೆರಿಕ ಹೇಗೆ ಪ್ರತಿಕ್ರಿಯಿಸುತ್ತದೆ? ಪರಿಸ್ಥಿತಿಯನ್ನು ತಾನು ಚೆನ್ನಾಗಿ ನಿಭಾಯಿಸಿದ್ದೇನೆ ಎಂದು ಹೇಳಿ ಯಾವುದೇ ಅಧ್ಯಕ್ಷ ಬಚಾವಾಗಲು ಸಾಧ್ಯವೇ? ಹೀಗಾಗಿ, ಮೋದಿ ಅವರು ಚೀನಾ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಚೀನಾದ ಸೈನಿಕರು ನಮ್ಮ ನೆಲದಲ್ಲಿ ಕುಳಿತಿರುವುದಕ್ಕೆ ಕಾರಣಗಳೇ ಇಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂದರೆ, ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಈ ಹಿಂದಿಗಿಂತಲೂ ಈಗ ಹೆಚ್ಚು ಜಟಿಲವಾಗಿದೆ ಎಂಬುದು ಸ್ಪಷ್ಟ. ಭಾರತ ತನ್ನ ನೆರೆಯ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಗಡಿ ವಿವಾದ ಎದುರಿಸುತ್ತಿರುವುದು ಇಂದು ನೆನ್ನೆಯ ವಿಚಾರವಲ್ಲ. ಹಲವು ದಶಕಗಳಿಂದ ಈ ವಿವಾದ ಮುಂದುವರೆದೇ ಇದೆ. ಇತ್ತಿಚೆಗೆ ನೇಪಾಳವೂ ಕೂಡ ಗಡಿ ವಿಚಾರಕ್ಕೆ ಕ್ಯಾತೆ ತೆಗೆದಿತ್ತು. 1914ರಿಂದಲೂ ಚೀನಾ-ಭಾರತ ಗಡಿ ವಿವಾದ ನಡೆಯುತ್ತಲೇ ಇದೆ. ಭಾರತವು ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಚೀನಾ ಜತೆಗೆ ಗಡಿ ಹಂಚಿಕೊಂಡಿದೆ. ಗಡಿ ವಿಚಾರಕ್ಕಾಗಿಯೇ 1962ರಲ್ಲಿ ಯುದ್ಧ ಕೂಡ ನಡೆದಿತ್ತು. ಈ ಯುದ್ಧದ ಬಳಿಕ ಮೂರು ಒಪ್ಪಂದಗಳು ನಡೆದರೂ ಗಡಿ ಸಮಸ್ಯೆ ಬಗೆಹರಿದಿಲ್ಲ.
ಭಾರತದ ಅರುಣಾಚಲ ಪ್ರದೇಶವೂ ತನ್ನದು ಅಂತ ಚೀನಾ ಪ್ರತಿಪಾದಿಸುತ್ತಲೇ ಇದೆ. ಅಲ್ಲದೇ, ಅರುಣಾಚಲ ಪ್ರದೇಶಕ್ಕೆ ಭಾರತದ ರಾಜಕಾರಣಿಗಳು, ರಾಜತಾಂತ್ರಿಕರು ಭೇಟಿ ನೀಡುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ.
ಸ್ವಾತಂತ್ರ್ಯಾನಂತರ ಚೀನಾ-ಭಾರತ ಗಡಿ ರೇಖೆಗಳನ್ನು ಗುರುತು ಮಾಡಲಾಗಿತ್ತು. ಆದರೆ, ಚೀನಾ ಇದನ್ನ ಇನ್ನೂ ಕೂಡ ಒಪ್ಪಿಕೊಂಡಿಲ್ಲ. ಪೂರ್ವ ಲಡಾಖ್‌ನ 60,000 ಚದರ ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶ ತನ್ನದೆಂದು ಚೀನಾ ಪ್ರತಿಪಾದಿಸುತ್ತದೆ. ಸದ್ಯ ಈ ಪ್ರದೇಶದಲ್ಲಿ ಚೀನಾ-ಭಾರತ ಒಪ್ಪಿತ ಅಂತಾರಾಷ್ಟ್ರೀಯ ಗಡಿಯೂ ಇಲ್ಲ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯವರೆಗಿನ ಪ್ರದೇಶವು ಭಾರತ ಸೇನೆಯ ಹಿಡಿತದಲ್ಲಿದೆ. ಸರೋವರದ ಉತ್ತರದ ದಂಡೆಯ ಆಚೆಗಿನ ಪ್ರದೇಶವು ಚೀನಾ ಸೇನೆಯ ಹಿಡಿತದಲ್ಲಿದೆ. ಸರೋವರದ ದಂಡೆಯವರೆಗೆ ಚೀನಾ ಸುಸಜ್ಜಿತ ರಸ್ತೆ ನಿರ್ಮಿಸಿಕೊಂಡಿದೆ. ಇಷ್ಟೇ ಅಲ್ಲದೇ, ಚೀನಾ ಅರುಣಾಚಲ ಪ್ರದೇಶವೂ ತನಗೇ ಸೇರಿದ್ದು ಅಂತ 30ಕ್ಕೂ ಹೆಚ್ಚು ಪ್ರದೇಶಗಳಿಗೆ ಚೀನಿ ಹೆಸರು ಇಡುವ ಮೂಲಕ ಉದ್ಧಟತನ ಮೆರೆದಿದೆ.
ಈ ಸುದ್ದಿ ಓದಿದ್ದೀರಾ? ಪ್ರತ್ಯೇಕ ಬಸ್ ಲೇನ್ ಆಗ್ರಹಿಸಿ ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಅಹವಾಲು ಸಲ್ಲಿಸಿದ ಗ್ರೀನ್‌ಪೀಸ್ ಇಂಡಿಯಾ
ಕೇವಲ ಅರುಣಾಚಲ ಪ್ರದೇಶ ಗಡಿ ವಿವಾದ ಮಾತ್ರವಲ್ಲದೇ, ಚೀನಾ ಇನ್ನೂ ಹಲವು ವಿಷಯಗಳಲ್ಲಿ ಭಾರತದೊಂದಿಗೆ ವಿವಾದಗಳನ್ನು ಹೊಂದಿದೆ. LACಗೆ (ವಾಸ್ತವಿಕ ನಿಯಂತ್ರಣ ರೇಖೆ) ಸಂಬಂಧಿಸಿದ ಗಡಿ ವಿವಾದ, ಗಾಲ್ವನ್ ಕಣಿವೆ ಸಂಘರ್ಷ, ಬುಮ್ಲಾ ಪಾಸ್ ಸಂಘರ್ಷ, ಪ್ಯಾಂಗಾಂಗ್ ಸಂಘರ್ಷ, ಭಾರತದ ನೆಲದಲ್ಲಿ ಹಳ್ಳಿಗಳ ನಿರ್ಮಾಣ, ರಸ್ತೆ–ಹೆದ್ದಾರಿಗಳ ನಿರ್ಮಾಣ, ‘ಅಕ್ಸಾಯ್ ಚಿನ್’ ವಿವಾದ, ಬಫರ್ ಝೋನ್ ವಿವಾದ, ಒನ್ ಚೀನಾ ನಿರ್ಮಾಣ – ಹೀಗೆ ಹಲವು ವಿಷಯಗಳಲ್ಲಿ ಚೀನಾ ಭಾರತವನ್ನು ಗುರಿಯಾಗಿಸುತ್ತಲೇ ಬಂದಿದೆ.
ಇದೆಲ್ಲದರ ನಡುವೆ, ಕಳೆದ ವರ್ಷ ಅರುಣಾಚಲ ಪ್ರದೇಶದ ಕೆಲವು ಭೂಭಾಗಗಳನ್ನು ಚೀನಾ ಅತಿಕ್ರಿಮಿಸಿಕೊಂಡಿದೆ. ತನ್ನ ಸೇನಾ ನೆಲೆಗಳನ್ನೂ ನಿರ್ಮಾಣ ಮಾಡಿದೆ. ಮಾತ್ರವಲ್ಲದೆ, ಇತ್ತೀಚೆಗೆ, ಲಡಾಖ್‌ನ ಭೂಪ್ರದೇಶವನ್ನೂ ಚೀನಾ ಆಕ್ರಮಿಸಿಕೊಂಡಿದೆ. ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಸಮೀಪದಲ್ಲಿ ಚೀನಾ ನಿರ್ಮಾಣ ಕೆಲಸದಲ್ಲಿ ನಿರತವಾಗಿದೆ ಮತ್ತು ಭೂಮಿಯನ್ನು ಅಗೆಯುತ್ತಿದೆ ಅಂತ ಅಮೆರಿಕದ ಉಪಗ್ರಹಗಳಿಂದ ಸೆರೆಹಿಡಿದ ಚಿತ್ರಗಳು ತೋರಿಸಿವೆ.
ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಸುತ್ತಲಿನ ಪ್ರದೇಶದಲ್ಲಿ ಚೀನಾ ಸೇನೆ ದೀರ್ಘಾವಧಿಗಾಗಿ ಆಯುಧಗಳು ಮತ್ತು ಇಂಧನವನ್ನು ಸಂಗ್ರಹಿಸಲು ಭೂಗತ ಬಂಕರ್‌ಗಳನ್ನು ನಿರ್ಮಿಸಿದೆ. ಈ ಪ್ರದೇಶ ಭಾರತದ ಪ್ರಮುಖ ಸೇನಾ ನೆಲೆಯಾಗಿದ್ದು, ಈ ಜಾಗದಲ್ಲಿ ಶಸ್ತ್ರಸಜ್ಜಿತ ವಾಹನಗಳಿಗೆ ಗಟ್ಟಿಯಾದ ಆಶ್ರಯಗಳನ್ನು ಚೀನಾ ನಿರ್ಮಿಸಿಕೊಂಡಿದೆ ಎಂದು ಉಪಗ್ರಹ ಚಿತ್ರಗಳು ವಿವರಿಸಿವೆ.
ಗಮನಾರ್ಹವಾಗಿ, ಈ ಪ್ರದೇಶವು 2020ರ ಜೂನ್‌ನಲ್ಲಿ ಭಾರತೀಯ ಸೈನಿಕರು ಮತ್ತು ಚೀನಾ ಪಡೆಯ ನಡುವೆ ಘರ್ಷಣೆ ನಡೆದ ಸ್ಥಳವಾಗಿದೆ. ಇಲ್ಲಿನ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಸ್ಥಳವನ್ನು ರಕ್ಷಿಸಲಿಕ್ಕಾಗಿ ಅಂದು ಭಾರತೀಯ ಯೋಧರು ಚೀನಾದೊಂದಿಗೆ ಹೋರಾಡಿ, ಹುತಾತ್ಮರಾದರು. ಆದರೆ, ಈಗ ಅಲ್ಲಿ ಚೀನಾ ಬಂಕರ್‌ಗಳನ್ನು ನಿರ್ಮಿಸಿಕೊಂಡಿದೆ.
ಭಾರತದ ನೆಲವನ್ನು ಚೀನಾ ಆಕ್ರಮಿಸಿಕೊಂಡಿರುವ ಚಿತ್ರಗಳು ಬಿಡುಗಡೆಯಾಗಿ ಬರೋಬ್ಬರಿ 66 ದಿನಗಳಾಗಿವೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿ ಅವರೂ ಮೌನವಾಗಿದ್ದಾರೆ.
ಇಷ್ಟೇಲ್ಲಾ ತಿಕ್ಕಾಟ ಇದ್ದರೂ ಕೂಡ ಮೋದಿ ಸರ್ಕಾರ ಯಾವುದೇ ಗಂಭೀರ ಕ್ರಮಗಳನ್ನ ತೆಗೆದುಕೊಂಡಿಲ್ಲ ಅನ್ನೋದು ಗಮನಿಸಬೇಕಾದ ವಿಚಾರ. ಕೇವಲ ವಿಪಕ್ಷಗಳ ವಿರುದ್ಧ ಭಾಷಣಗಳಲ್ಲೇ ಅಬ್ಬರಿಸಿ, ಬೊಬ್ಬಿರಿಯುವ ಮೋದಿ ಅವರು, ಚೀನಾ ಸೇನೆಯನ್ನು ಭಾರತ ಭೂಪ್ರದೇಶದಿಂದ ಹೊರಗಟ್ಟಲಿಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, ದೇಶದ ಜನರ ಬಾಯಿ ಮುಚ್ಚಿಸಲಿಕ್ಕೆ, ಮೊಬೈಲ್ ಫೋನ್‌ಗಳಲ್ಲಿ ಬಳಸುವ 59 ಚೀನಾದ ಆ್ಯಪ್‌ಗಳ ಬ್ಯಾನ್ ಮಾಡಿ, ಅದೇ ತಮ್ಮ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲಿ, ಭಾರತದ 4,000 ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದ್ದರೆ, ಭೂಪ್ರದೇಶ ಬಿಟ್ಟುಕೊಟ್ಟು ಮೌನವಾಗಿರುವ ಮೋದಿ ಆ್ಯಪ್‌ಗಳನ್ನು ನಿಷೇಧಿಸಿ ಸಂಭ್ರಮಿಸುತ್ತಿದ್ದಾರೆ. ಇದು, ದೇಶದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವೇ ಹೊರತು, ಬೇರೇನೂ ಅಲ್ಲ.
ಇನ್ನೊಂದು ವಿಚಾರ ಏನೆಂದ್ರೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಬಾಗ ಮಾಡಿ, ಲಡಾಖ್ಅನ್ನು ಕೇಂದ್ರಾಡಳಿತ ಪ್ರದೇಶ ಅಂತ ಮೋದಿ ಸರ್ಕಾರ ಘೋಷಣೆ ಮಾಡಿತ್ತು. ಲಡಾಖ್ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಿತು. ಹೀಗಾಗಿ, ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರಿಗೆ ರಾಜಕೀಯ ಹಕ್ಕುಗಳನ್ನು ಮರಳಿ ನೀಡಬೇಕು ಅಂತ 2024ರ ಮಾರ್ಚ್ ತಿಂಗಳಿನಲ್ಲಿ 21 ದಿನಗಳ ಕಾಲ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರ ಹೋರಾಟವನ್ನು ಬೆಂಬಲಿಸಿ ಸಾವಿರಾರು ಜನರು ರಸ್ತೆಗಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ, ಮೋದಿ ಸರ್ಕಾರ ಅವರ ಪ್ರತಿಭಟನೆಯನ್ನ ಹತ್ತಿಕ್ಕಲು ಭಾರೀ ಪ್ರಯತ್ನ ಮಾಡಿತು.
ಸರ್ಕಾರದ ಧೋರಣೆಯಿಂದ ಬೇಸತ್ತು ಸೋನಮ್ ಅವರು ಪ್ರತಿಭಟನೆಯನ್ನ ಕೈಬಿಟ್ಟರು. ಆದರೆ, ಇದೇ ಮೋದಿ ಸರ್ಕಾರ, ಚೀನಾವನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಲಡಾಖ್ಅನ್ನು ರಕ್ಷಿಸಿಕೊಳ್ಳಲಾಗದೆ, ಮೌನಕ್ಕೆ ಶರಣಾಗಿದೆ. ಇಂತಹ ಪ್ರಧಾನಿ ಮತ್ತು ಕೇಂದ್ರ ಸರ್ಕಾರದಿಂದ ಅಖಂಡ ಭಾರತ ನಿರ್ಮಾಣ ಸಾಧ್ಯವೇ ಇಲ್ಲ. ಹೀಗಾಗಿಯೇ, ರಾಹುಲ್ ಗಾಂಧಿ ಮೋದಿ ಅವರು ಚೀನಾ ವಿರುದ್ಧದ ಹೋರಾಟದಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಅವರ ಆರೋಪ 100ಕ್ಕೆ 100ರಷ್ಟು ಸತ್ಯ…