ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐಎಂನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದರಾದ ಕಾಮ್ರೇಡ್ ಸೀತಾರಾಂ ಯೆಚೂರಿಯವರ ಅಗಲಿಕೆ ದೇಶದ ರಾಜಕಾರಣಕ್ಕೆ ಶೋಷಿತ ಸಮುದಾಯಕ್ಕೆ ಮತ್ತು ಮುಖ್ಯವಾಗಿ ದೇಶದ ದುಡಿಯುವ ಜನತೆಯ ಪಕ್ಷಪಾತಿ ಕಮ್ಯುನಿಷ್ಟ್ ಚಳುವಳಿಗೆ ಬಹುದೊಡ್ಡ ನಷ್ಟ ಉಂಟುಮಾಡಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿಮಂದಿರ ಸಭಾಂಗಣದಲ್ಲಿ ಗುರುವಾರ ಸಂಜೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಸಿಐಟಿಯು, ಸಿಪಿಐ (ಎಂ) ಸ್ಥಳೀಯ ಸಮಿತಿ ವತಿಯಿಂದ ಸೀತಾರಾಮ್ ಯೆಚೂರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಎರಡು ನಿಮಿಷಗಳ ಕಾಲ ಮೌನ ಗೌರವ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ನಿಸ್ವಾರ್ಥಿ, ನಿಗರ್ವಿ, ಮುತ್ಸದ್ದಿ ನಾಯಕರಾಗಿದ್ದ ಸೀತಾರಾಂ ಯೆಚೂರಿಯವರು ವಿದ್ಯಾರ್ಥಿ ದೆಸೆಯಿಂದಲೆ ಹೋರಾಟದ ಕಣಕ್ಕೆ ಧುಮುಕಿದ್ದರು. ಮಾತ್ರವಲ್ಲ, ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷರಾಗಿ ದೇಶದ ವಿದ್ಯಾರ್ಥಿ ಚಳುವಳಿಯನ್ನು ಮುನ್ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಕ್ಸವಾದಕ್ಕೆ ಆಕರ್ಷಿತರಾಗಿ, ಸಿಪಿಐಎಂ ಪಕ್ಷದ ಕಾರ್ಯಕರ್ತರಾಗಿ ಮತ್ತು ನಾಯಕರಾಗಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ, ಸಮಾಜ ಪರಿವರ್ತನೆಗಾಗಿ ಮುಡಿಪಾಗಿಟ್ಟಿದ್ದರು.
ಪಾರ್ಲಿಮೆಂಟ್ ನಲ್ಲಿ ರಾಜ್ಯಸಭಾ ಸದಸ್ಯರಾಗಿ ದೇಶದ ಸಮಗ್ರ ಅಭಿವೃದ್ಧಿ ಹಾಗು ಸಮಗ್ರತೆ, ಐಕ್ಯತೆಯ ಮೇಲೆ ನ್ಯಾಯಯುತ ವಿದ್ವತ್ ಪೂರ್ಣ ವಿಷಯಗಳನ್ನು ಮಂಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾ ಕೂಟ ರಚನೆಯಲ್ಲಿ ಹಾಗೂ ಅದರ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿ ನೇರವಾಗಿ ಇಂದಿರಾ ಗಾಂಧಿಯವರನ್ನೇ ಎದುರಿಸಿದ ದಿಟ್ಟತನ ಅವರದು. ಅಂದಿನಿಂದ ಅವರು ಭಾರತದಾದ್ಯಂತ ಬಹು ಬೇಡಿಕೆಯ ವಾಗ್ಮಿಯಾಗಿ ಪ್ರಸಿದ್ಧರಾಗಿದ್ದರು ಎಂದು ಸ್ಮರಿಸಿದರು.
ಡಿವೈಎಫ್ಐ ಹಾವೇರಿ ಜಿಲ್ಲಾ ಸಂಚಾಲಕರಾದ ನಾರಾಯಣ ಕಾಳೆ ಮಾತನಾಡಿ, ಜೆ.ಎನ್.ಯು ವಿದ್ಯಾರ್ಥಿ ಸಂಘಟನೆ ಸಾಮಾಜಿಕ ಬದ್ಧತೆಯುಳ್ಳ ಪ್ರಖರ ಬೌದ್ಧಿಕತೆಯ ವಿದ್ವಾಂಸರನ್ನು ರೂಪಿಸುವ, ವಿಶ್ವವಿದ್ಯಾಲಯದೊಳಗಿನ ಅಕಾಡೆಮಿಕ್ ಪ್ರಜಾಪ್ರಭುತ್ವದ ಮಾದರಿಯಾಗಿ ಹಾಕಿದ ಅಡಿಪಾಯ ಇಂದಿಗೂ ದೇಶದೊಳಗೆ ಮಾತ್ರವಲ್ಲ ವಿಶ್ವದೊಳಗೂ ಮಾದರಿಯಾಗಿದೆ. ಮಾರ್ಕ್ಸ್‌ವಾದದ ಹಲವು ಆಯಾಮಗಳಲ್ಲಿ ಆಳವಾದ ಪರಿಣತಿ ಅವರನ್ನು ವಿಶ್ವದ ಮುಖ್ಯ ಮಾರ್ಕ್ಸ್‌ವಾದಿ ಚಿಂತಕರನ್ನಾಗಿಸಿತ್ತು ಎಂದರು.
ಸಿಪಿಐ(ಎಂ) ಪಕ್ಷದ ಹಾವೇರಿ ಜಿಲ್ಲಾ ಹಿರಿಯ ಮುಖಂಡರಾದ ರುದ್ರಪ್ಪ ಜಾಬೀನ ಮಾತನಾಡಿ, ಭಾರತದ ಯುವಜನತೆಗೆ ಕಾಮ್ರೇಡ್ ಸೀತಾರಾಮ ಯೆಚೂರಿಯವರ ಬದ್ಧತೆಯ ಜೀವನ ಎಂದಿಗೂ ಮಾದರಿಯಾದುದು ಎಂದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಕೆಎಸ್‌ಆರ್‌ಟಿಸಿ ಡಿಸಿಗೆ ಸಿಬ್ಬಂದಿಯಿಂದಲೇ ಚಾಕು ಇರಿಯಲು ಯತ್ನ: ಜೀವಾಪಾಯದಿಂದ ಪಾರು
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ್ ಎಸ್, ಸಿಐಟಿಯು ಜಿಲ್ಲಾ ಮುಖಂಡ ಅನ್ನದಾನೆಪ್ಪ ಹೆಬಸೂರು ಮಾತನಾಡಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ನಿಂಗಪ್ಪ ಗಾಳೆಮ್ಮನವರ, ಸಿಐಟಿಯು ಜಿಲ್ಲಾ ಮುಖಂಡರಾದ ವೀಣಾ ಎಸ್ ಮಿಳ್ಳೆಮ್ಮನವರ, ಎಸ್ಎಫ್ಐ-ಡಿವೈಎಫ್ಐ ಮುಖಂಡರಾದ ಜಗದೀಶ ಎರೇಸೀಮಿ, ಹನುಮಂತ ಮಡಿವಾಳರ, ರೇಣುಕಾ ಕಹಾರ, ಬ್ರಹ್ಮೇಂದ್ರ ಬಡಿಗೇರ, ವಿಠ್ಠಲ ಗೌಳಿ, ಬಸನಗೌಡ ಎನ್. ಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
