ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಡೋಣಿ ನದಿಗಳ ಪ್ರವಾಹದಿಂದಾಗಿ ಬೆಳೆಹಾನಿಯಾಗಿದ್ದು, ಸರ್ಕಾರ ಹಾಗೂ ವಿಮಾ ಕಂಪನಿಗಳು ಕೂಡಲೇ ಪರಿಹಾರ ನೀಡಬೇಕೆಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಆಗ್ರಹಿಸಿದರು.
ವಿಜಯಪುರ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರಿಗೆ ಮನವಿ ಸಲ್ಲಿಸಿ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಬೆಳೆಗಳಿಗೆ ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ಹಾನಿಯಾಗಿರುವ ಬೆಳೆಗಳಿಗೆ ಕೂಡಲೇ ಪರಿಹಾರ ನೀಡಬೇಕು. ಕಳೆದ ಎರಡ್ಮೂರು ವರ್ಷಗಳಲ್ಲಿ ಬರಗಾಲದಿಂದ ನಷ್ಟ ಅನುಭವಿಸಿದ್ದ ರೈತರು, ಈ ವರ್ಷ ಉತ್ತಮ ನಿರೀಕ್ಷೆಯಲ್ಲಿದ್ದರು. ಆದರೆ ಬಿತ್ತಿದ ಬೆಳೆಗಳು ಮಳೆಯ ರಭಸಕ್ಕೆ ನೆಲಕಚ್ಚಿವೆ. ಕೂಡಲೇ ಸರ್ಕಾರ ಜಂಟಿ ಸಮೀಕ್ಷೆ ಮಾಡಿ ಅರ್ಹ ರೈತರಿಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯ 13 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ನಿರ್ದೇಶಿಸಬೇಕು. ಕೆಲವೊಂದು ತಾಲೂಕಗಳಲ್ಲಿ ಸಮೀಕ್ಷೆ ಮಾಡಲು ಆದೇಶ ಬಂದಿಲ್ಲವೆಂದು ರೈತರಿಗೆ ಮರಳಿ ಕಳಿಸುತ್ತಿದ್ದಾರೆ. ವಿಮೆ ತುಂಬಿದ ಎಲ್ಲ ರೈತರಿಗೂ ಸರಿಯಾದ ನ್ಯಾಯ ಸಿಗಬೇಕು. ಈ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಇರುವ ದಾಖಲಾತಿಗಳನ್ನು ಇಲಾಖೆಗೆ ನೀಡುವಂತೆ ತಿಳಿಸಬೇಕು” ಎಂದರು.
“ಕಳೆದ ವರ್ಷ ವಿಮೆಯಲ್ಲಿ ಭಾರೀ ಪ್ರಮಾಣದ ಅನ್ಯಾಯವಾಗಿರುವುದಾಗಿ ಹೋರಾಟ ಮಾಡಲಾಗಿದೆ. ಈ ವರ್ಷ ಹಾಗಾಗಬಾರದು. ರೈತ ದೇಶದ ಸಂಪತ್ತು, ರೈತರಿಗೆ ಯಾವುದೇ ಕಾರಣಕ್ಕೂ ಮೋಸವಾಗಬಾರದು. ಸಾಧ್ಯವಿರುವ ಎಲ್ಲ ಮೂಲಗಳಿಂದ ರೈತರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸೀತಾರಾಮ್ ಯೆಚೂರಿ ನಿಧನ; ಎಸ್‌ಎಫ್‌ಐನಿಂದ ಸಂತಾಪ
ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಮಮದಾಪುರ, ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ, ನಗರ ಘಟಕದ ಅಧ್ಯಕ್ಷ ಸಂಗಪ್ಪ ಟಕ್ಕೆ, ಶಂಕರ ವಾಪ, ಲಾಯಪ್ಪ ನಾಫೆ, ಸಚಿನ ಬಿರಾದಾರ ಇದರು.