ಮುಸ್ಲಿಮರನ್ನು ಮೂರನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಬಲಪಂಥೀಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಆಸ್ತಿಗಳ ಸಂರಕ್ಷಣೆ ಹೆಸರಲ್ಲಿ ವಕ್ಫ್ ಮಸೂದೆ-2024 ಜಾರಿ ಮಾಡುವ ನಿಲುವು ಖಂಡನೀಯ ಎಂದು ಎಸ್‌ಡಿಪಿಐ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಹಶೀಲ್ದಾರರ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಮಂಡಿಸಿ ಮಾತನಾಡಿದ ಎಸ್‌ಡಿಪಿಐ ಕಾರ್ಯಕರ್ತರು, “ವಕ್ಫ್ ಬೋರ್ಡ್ ಆಸ್ತಿಗಳ ಸಂರಕ್ಷಣೆ ಹಾಗೂ ಸುಧಾರಣೆ ಹೆಸರಿನಲ್ಲಿ ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಲ್ ಪಾಸ್ ಮಾಡಿದೆ. ಮುಸ್ಲಿಂ ಸಮುದಾಯವನ್ನು ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕಡೆಗಣಿಸಿರುವ ಕೇಂದ್ರ ಸರ್ಕಾರ ಹಂತ ಹಂತವಾಗಿ ಇಂತಹ ಕಾನೂನು ಕಟ್ಟಳೆಗಳ ಮೂಲಕ ಕೆಳವರ್ಗದ ಮತ್ತು ಅಲ್ಪಸಂಖ್ಯಾತ ವರ್ಗದ ಜನರನ್ನು ಹತ್ತಿಕ್ಕಲು ಮುಂದಾಗಿದೆ” ಎಂದು ಆರೋಪಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಸಂವಿಧಾನದ ಆಶಯದಲ್ಲಿ ಬದುಕುತ್ತಿರುವ ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಮಸೂದೆ-2024ರ ಮೂಲಕ ಹಣಿಯಲು ಹೊರಟಿದೆ. ಬಾಬರಿ ಮಸೀದಿಯನ್ನು ನಮ್ಮಿಂದ ಕಿತ್ತುಕೊಂಡ ಹಾಗೆ, ವಕ್ಫ್ ಬೋರ್ಡನ್ನೂ ಕಿತ್ತುಕೊಳ್ಳಲು ನೋಡುತ್ತಿದ್ದೀರಿ. ನಾವು ಈ ದೇಶದ ಪ್ರಜೆಗಳು ಇಲ್ಲಿಯೇ ಹುಟ್ಟಿದ್ದೇವೆ ಇಲ್ಲಿಯೇ ಸಾಯುತ್ತೇವೆ. ನಿಮ್ಮ ಹಾಗೆ ಧಾರ್ಮಿಕ ವಿರೋಧ ಮಾಡುವುದಿಲ್ಲ. ನಾವು ಪ್ರೀತಿಯನ್ನು ಹಂಚುತ್ತೇವೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಬಿಸಿಯೂಟ; ಸಂದೀಪ್ ರೆಡ್ಡಿ
ಕಾರ್ಯಕ್ರಮಕ್ಕೂ ಮುನ್ನ, ʼನಮ್ಮ ದೇಶ ನಮ್ಮ ಹಕ್ಕು, ನಮ್ಮ ಸಂವಿಧಾನ, ನಾವು ಭೀಮನ ಮಕ್ಕಳು ಎನ್ನುವ ಘೋಷಣೆಗಳನ್ನು ಕೂಗುವ ಮೂಲಕ ವಕ್ಫ್ ಬೋರ್ಡ್ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಎಸ್‌ಡಿಪಿಐ ಹಿರಿಯ ಮುಖಂಡರಾದಂತಹ ನಜೀರ್, ಶೋಯಬ್, ಉಮರ್ ಸೇರಿದಂತೆ ಅನೇಕ ಯುವ ಹೋರಾಟಗಾರರು ಇದ್ದರು.