‘ಸ್ವಚ್ಚ ಭಾರತ್ ಮಿಷನ್’ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಕಸ ಸಂಗ್ರಹಿಸಿ ಸ್ವಚ್ಛವಾಹಿನಿ ಮೂಲಕ ವಿಲೇವಾರಿ ಮಾಡುವ ಸ್ವಸಹಾಯ ಸಂಘದ ಮಹಿಳಾ ಚಾಲಕಿಯರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ವಾಹನ ಪರವಾನಗಿ ವಿತರಣೆ ಮಾಡಿದರು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, “ಜಿಲ್ಲೆಯಲ್ಲಿ 176 ಮಂದಿ ಮಹಿಳೆಯರು ವಾಹನ ತರಬೇತಿ ಪಡೆದು, ಸ್ವಚ್ಚವಾಹಿನಿಗಳಲ್ಲಿ ಚಾಲಕಿಯರಾಗಿ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ಮಹಿಳಾ ಸಬಲೀಕರಣಕ್ಕೆ ಇದು ಉತ್ತೇಜನೆ ನೀಡಲಿದ್ದು, ಸ್ವಾಭಿಮಾನದಿಂದ ಬದುಕಲು ನೆರವಾಗಲಿದೆ. ಕಸವಿಲೇವಾರಿ ಕೆಲಸ ಮಾಡುತ್ತೇವೆಂದು ಹಿಂಜರಿಯಬಾರದು. ಧರ್ಮ, ಜಾತಿ ವಿಚಾರದಲ್ಲಿ ಕೀಳು ಮನಸ್ಸಿನವರು ಅಣುಕಿಸುತ್ತಾರೆ. ಅದಕ್ಕೆಲ್ಲ ಧೃತಿಗೆಡದೆ ಆತ್ಮವಿಶ್ವಾಸದಿಂದ ಮನಸಾಕ್ಷಿ ಮೆಚ್ಚುವಂತೆ ಕೆಲಸ ಮಾಡಬೇಕು. ಇದನ್ನು ಉದ್ಯೋಗವಾಗಿ ಪರಿಗಣಿಸಬೇಕು” ಎಂದು ಕರೆಕೊಟ್ಟರು.

“ಗ್ರಾಮ ಮಟ್ಟದಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಬದುಕು ಕಟ್ಟಿಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಗ್ರಾಮ ಪಂಚಾಯಿತಿ ನೌಕರರಿಗೆ ಸಹಾಯಧನದ ಚೆಕ್ ವಿತರಿಸಿ, “ಹಸು ಖರೀದಿ ಮಾಡಿ ಹೈನುಗಾರಿಕೆ ಮೂಲಕ ಜೀವನ ಕಟ್ಟಿಕೊಳ್ಳಬೇಕು. ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡಬೇಡಿ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನಾಲತವಾಡ ಪ.ಪಂ. ಆಡಳಿತ ಮಂಡಳಿ ರಚನೆ; ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಾಲು ಸಾಲು ಸವಾಲು
“ಶಿಕ್ಷಣ ಫೌಂಡೇಶನ್ ಟ್ಯಾಬ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಗ್ರಂಥಾಲಯಗಳಿಗೆ ನೀಡಿ, ಪರಿಶಿಷ್ಟ ವರ್ಗದವರು ಹಾಗೂ ಹಿಂದುಳಿದ ವರ್ಗದವರು ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ಸುಸಜ್ಜಿತ ಗ್ರಂಥಾಲಯ ತೆರೆಯಲು ಕ್ರಮವಹಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯಿತ್ರಿ, ಉಪ ಕಾರ್ಯದರ್ಶಿ ಸವಿತಾ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಇತರರು ಇದ್ದರು.