ಹರಿಯಾಣ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಪ್ರಧಾನಿ ಮೋದಿ ಶನಿವಾರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ತಮ್ಮ ಮೊದಲ ಚುನಾವಣಾ ಭಾಷಣ ಮಾಡಿದ ಮೋದಿ, ವಿಪಕ್ಷಗಳ ವಿರುದ್ಧ ಸುಳ್ಳು ಹರಡುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಕರ್ನಾಟಕದಲ್ಲಿ ಗಣೇಶನನ್ನೇ ಕಾಂಗ್ರೆಸ್ ಸರ್ಕಾರ ಬಂಧಿಸಿದೆ ಎಂದು ಸುಳ್ಳು ಹೇಳಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಭಾಷಣ ಮಾಡಿರುವ ಮೋದಿ, “ಕಾಂಗ್ರೆಸ್‌ಗೆ ತುಷ್ಟೀಕರಣವೇ ಬಹುದೊಡ್ಡ ಗುರಿ. ಇಂದು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗಣಪತಿಯನ್ನೂ ಕಂಬಿ ಹಿಂದೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶವೇ ಇಂದು ಗಣೇಶ ಉತ್ಸವ ಆಚರಿಸುತ್ತಿದ್ದು, ಅದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಅದು ಹಳೆಯ ಕಾಂಗ್ರೆಸ್ ಅಲ್ಲ. ಇಂದಿನ ಕಾಂಗ್ರೆಸ್ ನಗರ ನಕ್ಸಲ್‌ನ ಹೊಸ ರೂಪವಾಗಿದೆ” ಎಂದು ಆರೋಪಿಸಿದ್ದಾರೆ. ಗಣೇಶನನ್ನು ಬಂಧಿಸಿದೆ ಎಂದು ಸುಳ್ಳು ಹೇಳಿದ್ದಾರೆ.
ವಾಸ್ತವ ಏನೆಂದರೆ, ಮಂಡ್ಯದ ನಾಗಮಂಗಲ ಗಲಾಟೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಟೌನ್‌ಹಾಲ್ ಬಳಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಗಣೇಶ ಮೂರ್ತಿಯನ್ನೂ ಕೂಡ ತಂದಿದ್ದರು. ಪ್ರತಿಭಟನೆ ಮಾಡುವ ವೇಳೆ ಪೋಲಿಸರು ಸಂಘಪರಿವಾರದ ಕಾರ್ಯಕರ್ತರ ಕೈಯ್ಯಲ್ಲಿದ್ದ ಗಣೇಶ ಮೂರ್ತಿಯನ್ನು ವಶಪಡಿಸಿಕೊಂಡು, ಆ ಬಳಿಕ ವಿಸರ್ಜನೆ ಮಾಡಿದ್ದಾರೆ.
ಆದರೆ ಈ ಘಟನೆಯನ್ನು ತಿರುಚಿ, ಸುಳ್ಳು ಲೇಪನ ಹಚ್ಚಿರುವ ಬಿಜೆಪಿ ರಾಜ್ಯ ನಾಯಕರು, ”ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಕಾಂಗ್ರೆಸ್ ಸರ್ಕಾರ ರಾಹು ಕಾಲಕ್ಕೆ ಗಣೇಶ ಮೂರ್ತಿಗಳನ್ನು ಬಂಧಿಸಿದೆ. ಹಿಂದು ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅದೆಷ್ಟರಮಟ್ಟಿಗೆ ಲಜ್ಜೆ ಬಿಟ್ಟು ನಿಂತಿದೆ ಎನ್ನುವುದಕ್ಕೆ ಗಣೇಶ ಮೂರ್ತಿಯನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದೆ. ಇಷ್ಟು ದಿನ ಹಿಂದುಗಳ ಮೇಲೆ ದಾಳಿ ಮಾಡಿಸುವುದು, ಹಿಂದುಗಳ ಭೂಮಿ ಕಬಳಿಸುವುದು, ಹಿಂದುಗಳನ್ನು ಬಂಧಿಸುವುದು, ಹಿಂದುಗಳನ್ನು ಹತ್ತಿಕ್ಕುತ್ತಿದ್ದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಗಣೇಶ ಮೂರ್ತಿಗಳನ್ನೇ ಬಂಧಿಸಿರುವುದು ರಾಹುಕಾಲ ಶೀಘ್ರದಲ್ಲೇ ಕೊನೆಯಾಗಲಿದೆ ಎಂಬುದರ ಮುನ್ಸೂಚನೆ” ಎಂದು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಸಂಘಪರಿವಾರದವರಿಂದ ‘ಗಣೇಶ ಮೂರ್ತಿ’ಯನ್ನು ರಕ್ಷಿಸಿದ ಪೊಲೀಸರು: ಸುಳ್ಳು ಸುದ್ದಿ ಹರಡಿದ ಬಿಜೆಪಿ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿಂದುತ್ವವಾದಿ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್ ಸರ್ಕಾರ ಗಣೇಶನನ್ನು ಬಂಧಿಸಿದೆ ಎಂದು ಆರೋಪಿಸಿ, ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದರು. ಅದನ್ನೇ ಸತ್ಯವೆಂದು ಭಾವಿಸಿರುವ ಮೋದಿ, ತಮ್ಮ ಭಾಷಣಕ್ಕೆ ಅಸ್ತ್ರ ಸಿಕ್ಕಿತೆಂದು ಭ್ರಮಿಸಿ, ಸತ್ಯವೇನೆಂದೂ ಅರಿಯದೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿ, ವಾಗ್ದಾಳಿ ನಡೆಸಿದ್ದಾರೆ.
ಅಂದಹಾಗೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ನಿರಂತರವಾಗಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಸುಳ್ಳು, ದ್ವೇಷಪೂರಿತ ಭಾಷಣ ಮಾಡಿದ್ದ ಮೋದಿ, ‘ಕಾಂಗ್ರೆಸ್ ಹೆಚ್ಚು ಮಕ್ಕಳನ್ನು ಹೆರುವವರಿಗೆ ದೇಶದ ಆಸ್ತಿಯನ್ನು ಹಂಚುತ್ತದೆ. ಹಿಂದು ಮಹಿಳೆಯರ ಮಂಗಳಸೂತ್ರವನ್ನೇ ಕಿತ್ತುಕೊಳ್ಳುತ್ತಾರೆ’ ಎಂಬಿತ್ಯಾದಿ ದ್ವೇಷಪೂರಿತ ಆರೋಪಗಳನ್ನು ಮಾಡಿದ್ದರು. ಇದೀಗ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ತಮ್ಮ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ.