ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರನ್ನು ವೈಯಕ್ತಿಕವಾಗಿ ನಿಂದಿಸಿದ್ದಲ್ಲದೆ, ಸ್ತ್ರಿಯರನ್ನು ಮತ್ತು ಪರಿಶಿಷ್ಟ ಸಮುದಾಯಗಳನ್ನು ನಿಂದಿಸುವ ಮೂಲಕ ತಮ್ಮ ಸ್ಥಾನಕ್ಕೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಾರೆ. ಆದ್ದರಿಂದ ಶಾಸಕ ಮುನಿರತ್ನ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಡಿಎಸ್‌ಎಸ್ ಮುಖಂಡ ಕಿರಣ್ ಕುಮಾರ್ ಒತ್ತಾಯಿಸಿದರು.
ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ವರ್ಣಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಶಾಸಕನ ನಡೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಶಾಸಕನನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಈತನ ಎಲ್ಲಾ ಕಾನೂನು ಬಾಹಿರ, ಅನೈತಿಕ, ಅಕ್ರಮ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿ, ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಹೊಲೆಯ ಸಮುದಾಯದ ಕುರಿತು ಜಾತಿ ನಿಂದನೆ ಮಾಡಿರುವ ಶಾಸಕ ಮುನಿರತ್ನ ಸ್ತ್ರೀಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಜೀವ ಬೆದರಿಕೆ ಹಾಕಿ, ಹಣಕ್ಕೆ ಬೇಡಿಕೆಯಿಟ್ಟ, ಗುತ್ತಿಗೆದಾರನ ವಿರುದ್ಧ ದರ್ಪ ಮೆರೆದಿದ್ದಾರೆ. ಇಂತಹ ಬೇಜವಾಬ್ದಾರಿತನದ, ದುರ್ವರ್ತನೆಯನ್ನು ತೋರಿರುವ ಶಾಸಕ ಮುನಿರತ್ನಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸಂಸದ ಸುಧಾಕರ್ ಅಪ್ರಭುದ್ಧ ರಾಜಕಾರಣಿ: ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಕಿಡಿ
ಈ ಸಂಧರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಸ್.ಎನ್.ನರಸಿಂಹಪ್ಪ, ಗಂಗಾಧರ, ರಾಮಾಂಜಿ, ರಾಜು, ಶ್ರೀನಿವಾಸ್, ರವಿ, ರಾಜು, ಎ.ಪಿ.ವೆಂಕಟೇಶ್, ಬಾಬು, ಜಯಂತ್, ಸುರೇಶ, ಲಕ್ಷ್ಮೀ ನಾಯ್ಕ, ಲಕ್ಷ್ಮಿ ನರಸಿಂಹಪ್ಪ ಸೇರಿದಂತೆ ಇತರರು ಇದ್ದರು.