ಹಲವು ದಶಕಗಳಿಂದ ಅನ್ಯಾಯವನ್ನೇ ಸಹಿಸಿಕೊಂಡು ಬಂಜೆ ಭೂಮಿ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ಬಡ ರೈತರಿಗೆ ಸಂವಿಧಾನಬದ್ಧ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯದಂತೆ ಸರ್ಕಾರ ರೈತರಿಗೆ ಜಮೀನಿನ ಹಕ್ಕು ಪತ್ರ ನೀಡಿ, ಬದುಕಲು ದಾರಿ ಮಾಡಿಕೊಡಬೇಕೆಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಸಮಿತಿ ಅಗ್ರಹಿಸಿದೆ.
ಭಾರತೀಯ ಬೌದ್ಧ ಮಹಾಸಭಾ ಮತ್ತು ಬೀದರ ಜಿಲ್ಲೆಯ ಹಲವಾರು ಜನಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಸಂಯುಕ್ತಾಶ್ರಯದಲ್ಲಿ ಅನ್ಯಾಯಕ್ಕೊಳಗಾದ ರೈತರಿಗೆ ʼಬದುಕಿಗಾಗಿ ಭೂಮಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಬದುಕಿಗಾಗಿ ಭೂಮಿ, ನ್ಯಾಯಕ್ಕಾಗಿ ಹೋರಾಟ ರೂಪಿಸಲಾಗಿದ್ದು ಸೆ.17 ರಂದು ಕಲಬುರಗಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗುವುದು ಎಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ʼಸೆ.17ರಂದು ಕಲಬುರಗಿಯಲ್ಲಿ ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ಅರಣ್ಯ ಜಮೀನು ಒತ್ತುವರಿ ವಿಷಯ ಚರ್ಚೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಶಾಸಕರಿಗೆ ಮನವಿ ಮಾಡಿಕೊಳ್ಳುತ್ತೇವೆ. ಜಿಲ್ಲಾವಾರು ರೈತರು ಮತ್ತು ಜನಪರ ಹೋರಾಟ ಸಮಿತಿಗಳು ಒಗ್ಗೂಡಿ, ಈ ಸಚಿವ ಸಂಪುಟಕ್ಕೆ ಒತ್ತಾಯಿಸಲು ಬೀದರನಿಂದ ಹೊರಡಲಿದ್ದೇವೆ. ಸರ್ಕಾರಿ ಗೈರಾಣದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಅನ್ಯಾಯ ಎಸಗಲು ಇವರೇನು ಪರಕಿಯವರಾ? ವಿದೇಶಿಗರಾ? ಸಂವಿಧಾನದ ಮೂಲಭೂತ ಹಕ್ಕು ಇವರಿಗೇಕೆ ಅನ್ವಯಿಸುವುದಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಬೀದರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಉಳುಮೆ ಮಾಡುವ ರೈತರಿಗೆ ಅರಣ್ಯ ಪ್ರದೇಶದಿಂದ ಒತ್ತುವರಿ ಸೂಚಿಸಿದ್ದಾರೆ. ಬಸವಕಲ್ಯಾಣ, ಭಾಲ್ಕಿಯಲ್ಲಿ ರೈತರಿಗೆ ಸೂಚನೆ ನೀಡದೆ ಸಿ-ಫಾರಂ ಹೊಂದಿರುವ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡಲಾಗಿದೆ. ತಾಲೂಕುವಾರು ಅಂದಾಜು 2-3 ಸಾವಿರ ಎಕರೆ ರೈತರು ಜಮೀನು ಒತ್ತುವರಿಯಾಗಿದೆ. ಅಂದರೆ ಜಿಲ್ಲಾವಾರು 10-15 ಸಾವಿರ ಎಕರೆ ಜಮೀನು ಅರಣ್ಯ ಇಲಾಖೆ ವಶಕ್ಕೆ ಪಡೆದು ಬಡ ರೈತರಿಗೆ ಅನ್ಯಾಯ ಎಸಗಿದೆʼ ಎಂದು ದೂರಿದರು.
ʼಕಳೆದ 40 ವರ್ಷಗಳಿಂದ ಸರ್ಕಾರಿ ಗೈರಾಣ ಜಮೀನಿನಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ಜಮೀನಿನ ಹಕ್ಕು ಪತ್ರ ನೀಡಬೇಕು. ಕುಟುಂಬದಲ್ಲಿ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಉಳುಮೆ ಮಾಡುವ ಭೂಮಿಯ ಸಿ-ಫಾರಂ ನೀಡಬೇಕು. ಸಣ್ಣ ರೈತರ ಮೇಲೆ ದಬ್ಬಾಳಿಕೆ ನಡೆಸಿ ಕಡಿಮೆ ಬೆಲೆಗೆ ಜಮೀನು ಖರೀದಿಸಿ ಮೋಸ ಮಾಡುತ್ತಿರುವು ಮೇಲ್ವರ್ಗದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ರೈತಾಪಿ ವರ್ಗಕ್ಕೆ ಒಕ್ಕಲೆಬ್ಬಿಸುವ ನಿರ್ಧಾರ ಹಿಂಪಡೆಯಬೇಕುʼ ಎಂದು ಆಗ್ರಹಿಸಿದರು.
ʼಸುಮಾರು 10 ಜಿಲ್ಲೆಗಳ ಪ್ರಗತಿಪರ ಮತ್ತು ನೊಂದ ರೈತರ ನಿಯೋಗವನ್ನು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲು ಬೀದರನಿಂದ ಕಲಬುರಗಿಗೆ ಹೊರಡಲಿದ್ದೇವೆ. ಒಂದು ವೇಳೆ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳು ಪರಿಶೀಲಿಸಿ, ಶೀಘ್ರ ಪರಿಹಾರ ಒದಗಿಸದಿದ್ದರೆ ರಾಜ್ಯಾದ್ಯಂತ ʼಬದುಕಿಗಾಗಿ ಭೂಮಿʼ ಎನ್ನುವ ಶೀರ್ಷಿಕೆಯಡಿ ಸರ್ಕಾರದ ವಿರುದ್ಧ ಬೃಹತ್ ಮಟ್ಟದ ಜನಾಂದೋಲನ ರೂಪಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಆಂಧ್ರಕ್ಕೆ ಪರಾರಿಯಾಗುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ ಬಂಧನ
ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭೆಯ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಲ್ಕರ್, ರಾಜ್ಯ ಸಂಸ್ಕಾರ ವಿಭಾಗ ಕಾರ್ಯದರ್ಶಿ ವಿಷ್ಣುಕಾಂತ ಹುಡಗಿಕರ್, ಹಿರಿಯ ದಲಿತ ಮುಖಂಡರಾದ ರಾಜಕುಮಾರ ಮೂಲಭಾರತಿ, ಬಿಎಸ್‌ಪಿ ಜಿಲ್ಲಾ ಮುಖಂಡ ಸಚೀನ ಗಿರಿ, ಶಕ್ತಿಕಾಂತ ಭಾವಿದೊಡ್ಡಿ, ದಸಂಸ ಔರಾದ ಸಂಚಾಲಕ ಸುಭಾಷ ಲಾಧಾ, ದಲಿತ ಯುನಿಟಿ ಮೂವ್‌ಮೆಂಟ್ ಮುಖಂಡ ಪ್ರಕಾಶ ರಾವಣ, ದಲಿತ ಮುಖಂಡ ಗಣಪತಿ ವಾಸುದೇವ ಸೇರಿದಂತೆ ಅನೇಕರಿದ್ದರು.