ಹಾಲಿನ ದರ ಏರಿಕೆ ಲಾಭ ರೈತರಿಗೇ ಸಿಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಡೀಸೆಲ್ ಸೇರಿದಂತೆ ವಿವಿಧ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆ ಕೂಡ ಅನಿವರ‍್ಯವಾಗಿದ್ದು, ಅದರ ಲಾಭ ಪೂರ್ಣ ಪ್ರಮಾಣದಲ್ಲಿ ರೈತರಿಗೇ ಸಿಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡುವುದರಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಲಾಭವಾಗಲಿದ್ದು ರಾಜ್ಯ ಸರ್ಕಾರಕ್ಕೆ ಇದರಿಂದ ಯಾವುದೇ ಲಾಭವಿಲ್ಲ. ಆದರೆ ಈ ಏರಿಕೆಯಿಂದ ರಾಜ್ಯದ ಹಾಲು ಉತ್ಪಾದಕ ರೈತರಿಗೆ ಲಾಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಹಾಲಿನ ದರ ಏರಿಕೆ ಲಾಭವನ್ನು ನೇರವಾಗಿ ರೈತರಿಗೆ ಸಿಗಬೇಕೆಂಬ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದೂ ಸಚಿವರು ತಿಳಿಸಿದರು. ಇಡೀ ದೇಶದಲ್ಲಿ ರೈತರಿಂದ ಹೆಚ್ಚು ಬೆಲೆಗೆ ಹಾಲು ಖರೀದಿಸಿ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡುತ್ತಿರುವುದು ಕರ್ನಾಟಕ ಮಾತ್ರ. ರೈತರಲ್ಲಿ ಹಣಕಾಸು ವಹಿವಾಟು ಹೆಚ್ಚಾದರೆ ಮಾತ್ರ ದೇಶದ ಜಿಡಿಪಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿಧೇಯಕ ಪುನಃ ಸಲ್ಲಿಕೆ : ಮರು ಪರಿಶೀಲನೆಗಾಗಿ ರಾಜಭವನದಿಂದ ವಾಪಸಾಗಿದ್ದ ವಿಧೇಯಕಗಳನ್ನು ಮರು ಪರಿಶೀಲಿಸಿ ರಾಜ್ಯಪಾಲರ ಅನುಮೋದನೆಗೆ ಮತ್ತೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ ಸೇರಿದಂತೆ ವಿವಿಧ 11 ವಿಧೇಯಕಗಳ ಅನುಮೋದನೆಗಾಗಿ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು. ಈ ವಿಧೇಯಕಗಳ ಮರು ಪರಿಶೀಲನೆ ಅಗತ್ಯದ ಬಗ್ಗೆ ರಾಜ್ಯಪಾಲರು ಅಭಿಪ್ರಾಯಿಸಿ ವಾಪಸು ಕಳಿಸಿದ್ದರು. ಶೀಘ್ರವೇ ಮರು ಪರಿಶೀಲಿಸಿ ಪುನಃ ಅನುಮೋದನೆಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ವಿಧಾನಸಭೆಯಲ್ಲಿ ಅಂಗೀಕಾರವಾಗಿ ವಿಧಾನಪರಿಷತ್ತಿನಲ್ಲಿ ಈ ಮಸೂದೆಗಳನ್ನು ಮಂಡಿಸಲಾಗಿತ್ತು. ಅಲ್ಲದೆ, ಶಾಸಕರ ಅಭಿಪ್ರಾಯದಂತೆ ಸದನ ಸಮಿತಿಯನ್ನೂ ಮಾಡಿ ವಿಧೇಯಕಗಳನ್ನು ಅಂಗೀಕರಿಸಲಾಗಿತ್ತು. ಆದರೆ ಪ್ರತಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸದೆ ಸಭಾತ್ಯಾಗ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದ್ದಾರೆ. ಆದಾಗ್ಯೂ ಸರ್ಕಾರ ಈ ವಿಷಯದಲ್ಲಿ ಸಮರ್ಪಕವಾಗಿ ನಡೆದುಕೊಂಡಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಯಶಸ್ವಿನಿ ಮತ್ತೆ ಜಾರಿ : ರೈತರು ಹಾಗೂ ಬಡವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ಹಿಂದೆ ಎಸ್.ಎಂ.ಕೃಷ್ಟ ಅವರು ಮುಖ್ಯಮಂತ್ರಿಯಾಗಿದ್ದ ಸರ್ಕಾರ ಜಾರಿಗೆ ತಂದಿದ್ದ ಯಶಸ್ವಿನಿ ಯೋಜನೆಯನ್ನು ಮರು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ರೈತರು ಹಾಗೂ ಕಡುಬಡವರಿಗೆ ಅನುಕೂಲವಾಗಿದ್ದ ಯಶಸ್ವಿನಿ ಯೋಜನೆಯನ್ನು ಪುನಃ ಜಾರಿ ತರಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದ್ದು ಶೀಘ್ರವೇ ಈ ಯೋಜನೆ ಮತ್ತೆ ಜಾರಿಯಾಗಲಿದೆ. ಇದರಿಂದ ಕೋಟ್ಯಂತರ ರೈತರು ಬಡವರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ ಜನಪರ ನಿಲುವುಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಸಾರಿಗೆ, ಶಿಕ್ಷಣ, ಆರೋಗ್ಯ, ಮೂಲಸೌಲಭ್ಯ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಾಕಷ್ಟು ಸುಧಾರಣೆ ತಂದಿದ್ದು ಸಹಕಾರ ಕ್ಷೇತ್ರದಲ್ಲಿಯೂ ಕೂಡ ಉತ್ತಮ ನಿಲುಗಳನ್ನು ತೆಗೆದುಕೊಂಡಿದೆ ಎಂದರು.
ರಾಜ್ಯದ ಜನರ ಆರ್ಥಿಕ ಸಹಕಾರಕ್ಕಾಗಿ ಪಂಚಾಯ್ತಿಗೊಂದು ಸಹಕಾರ ಸಂಸ್ಥೆ ಸ್ಥಾಪಿಸುವ ಯೋಜನೆ ಸದ್ಯದಲ್ಲಿಯೇ ಅನುಷ್ಠಾನಕ್ಕೆ ಬರಲಿದ್ದು, ಇದು ಪ್ರಗತಿಯಲ್ಲಿದೆ ಎಂದರು.
ಭಾನುವಾರ ತುಮಕೂರು ಸಹಕಾರ ಕೇಂದ್ರ ಬ್ಯಾಂಕ್‌ನ ಸರ್ವ ಸದಸ್ಯರ ಸಭೆ ನಡೆಯಲಿದ್ದು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳದ ಆಡಳಿತ ಮಂಡಳಿ ಸದಸ್ಯ ಕಾಂತರಾಜು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಂಗಮಪ್ಪ, ವಕೀಲ ನಾರಾಯಣಗೌಡ ಉಪಸ್ಥಿತರಿದ್ದರು.
