ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಗತ್ತಿನ ಅತಿದೊಡ್ಡ ಮಾನವ ಸರಪಳಿಗೆ ಚಾಮರಾಜನಗರ ಕೂಡ ಬೆಸೆದುಕೊಂಡಿತು. ಚಾಮರಾಜನಗರ ಮತ್ತು ಮೈಸೂರು ಗಡಿಭಾಗವಾದ ಮೂಗುರು ಕ್ರಾಸ್‌ನಲ್ಲಿ ಆರಂಭಗೊಂಡ ಮಾನವ ಸರಪಳಿ ನಗರದ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆ ಬಳಿ ಕೊನೆಗೊಂಡಿತು.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾನವ ಸರಪಳಿ ಹಾದು ಹೋಗಿದ್ದ ಮಾರ್ಗದಲ್ಲಿ ಭಾರತದ ವಿವಿಧ ರಾಜ್ಯದ ಉಡುಪು ಧರಿಸಿ ವಿವಿಧೆತೆಯಲ್ಲಿ ಏಕತೆಯ ಸಂಸ್ಕೃತಿ ಪ್ರತಿಬಿಂಬಿಸಿದರು. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಹೀಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪು ಧರಿಸಿ ಆಯಾ ರಾಜ್ಯದ ಭೂಪಟ ಹಿಡಿದು ನಾವೆಲ್ಲ ಒಂದು ಎನ್ನುವ ಸಂಕೇತವನ್ನು ಸೂಚಿಸಿದರು.
ಮಾನವ ಸರಪಳಿಯ ಪ್ರಮುಖ ವೃತ್ತಗಳಲ್ಲಿ ಜಾನಪದ ನೃತ್ಯ ಪ್ರಸ್ತುತ ಪಡಿಸಲಾಯಿತು. ಸೋಲಿಗರ ಗೊರುಕನ, ಜೇನುಕುರುಬರ ನೃತ್ಯ, ಗೊರವರ ಕುಣಿತ, ಹುಲಿ ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?
ಪ್ರಜಾಪ್ರಭುತ್ವದ ಸಂಭ್ರಮಾಚರಣೆ ಹಿನ್ನೆಲೆ ಸರ್ಕಾರಿ ನೌಕರರು, ಕಾಲೇಜಿನ ಉಪನ್ಯಾಸಕರು, ಸಾರ್ವಜನಿಕರು, ರೈತರು, ಕನ್ನಡ ಪರ ಹೋರಾಟಗಾರರು ಪ್ರತಿನಿಧಿಸಿದರು. ಮಹಿಳೆಯರು ಹಸಿರು ಸೀರೆ, ಪುರುಷರು ಬಿಳಿ ಪಂಚೆ, ಶರ್ಟ್, ಶಲ್ಯ ಧರಿಸಿ ಮಿಂಚಿದರು. ರೈತರು ಹಸಿರು ಟವೆಲ್, ಕನ್ನಡಪರ ಹೋರಾಟಗಾರರು ನಾಡ ಧ್ವಜ, ಹೋರಾಟಗಾರರು ನೀಲಿ ಶಲ್ಯ ಹೊದ್ದಿದ್ದರು. ಇನ್ನು ರಾಮಸಮುದ್ರದಲ್ಲಿ 1 ಕಿಲೋ ಮೀಟರ್ ಉದ್ದದ ಭಾರತ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಿದ್ದು ಗಮನ ಸೆಳೆಯಿತು.
ಗಡಿಜಿಲ್ಲೆ ಚಾಮರಾಜನಗರಲ್ಲಿ 25 ಕಿಲೋ ಮೀಟರ್ ಉದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರಿದ್ದರು.
