‘ವಚನ ಸಂಸ್ಕೃತಿ’ ಸನಾತನಿಗಳಿಗೆ ಎಂದೆಂದಿಗೂ ಮಗ್ಗಲು ಮುಳ್ಳು…

Date:

Advertisements

ಈ ನೆಲವನ್ನು ಪ್ರೀತಿಸುವುದು, ಈ ನೆಲದ ಬಗ್ಗೆ ನಿಷ್ಠೆ ಹೊಂದುವುದು ಹಾಗೂ ಆ ಮೂಲಕ ನಮ್ಮನ್ನು ನಾವು ರಾಷ್ಟ್ರೀಯವಾದಿಗಳೆಂದು ಕರೆದುಕೊಳ್ಳುವುದೆಂದರೆ ಬಹುತ್ವದ ಬೇರುಗಳನ್ನು ಗಟ್ಟಿಗೊಳಿಸುವುದೇ ಆಗಿದೆ. ಬಹುತ್ವವನ್ನು ನಾಶಗೊಳಿಸುವ ಹುನ್ನಾರಕ್ಕಿಂತ ರಾಷ್ಟ್ರದ್ರೋಹದ ಕೃತ್ಯ ಮತ್ತೊಂದಿಲ್ಲ.

ಜಗತ್ತಿನಲ್ಲಿ ಬಹು ಸಂಸ್ಕೃತಿ ಹೊಂದಿರುವ ಏಕೈಕ ನೆಲ ಹಾಗು ನೆಲೆ ಭಾರತ. ಈಗ ಅದನ್ನು ಸನಾತನಿಗಳು ಏಕ ಸಂಸ್ಕೃತಿಯ ನೆಲೆಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ದೇಶದ ಮುಖ್ಯವಾಹಿನಿಯಲ್ಲಿ ಎಂದಿಗೂ ಬೆರೆಯದ ಹಾಗೂ ಈ ದೇಶದ ಹೃದಯವೇ ಆಗಿರುವ ಬಹುಜನರನ್ನು ಎಂದಿಗೂ ಪ್ರೀತಿಸದವರು ಸನಾತನಿಗಳು. ಇಲ್ಲಿ ಅಂದಾಜು 2000 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅವರಿಗೆ ಅವರದೇ ಮಾತೃಭಾಷೆ, ಅದೇ ದೇವಭಾಷೆ ಹಾಗೂ ರಾಷ್ಟ್ರಭಾಷೆ. ಉಳಿದ ಭಾಷೆಗಳು ಆಯಾ ಪ್ರಾಂತೀಯ ಆಡಳಿತದ ಅನುಕೂಲಕ್ಕೆ ಉಪಯೋಗಿಸುವ ಭಾಷೆಗಳೆ ಹೊರತು ದೇಶದ ಎಲ್ಲಾ ಜನರ ಮಾತೃ ಭಾಷೆಯಾಗಲಿ, ರಾಷ್ಟ್ರಭಾಷೆಯಾಗಲಿ, ದೇವ ಭಾಷೆಯಾಗಲಿ ಅಥವಾ ಹೃದಯದ ಭಾಷೆಯಾಗಲಿ ಖಂಡಿತ ಅಲ್ಲ. ಇಲ್ಲಿರುವ ಎಲ್ಲಾ ಭಾಷೆಗಳ ಒಟ್ಟಾರೆ ಸಂಸ್ಕೃತಿಯೆ ಈ ದೇಶದ ಭಾಷಾ ಸಂಸ್ಕೃತಿ. ಈ ದೇಶದ ಪ್ರತಿ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರ ಮಾತನಾಡುವ ಶೈಲಿ ಬದಲಾಗುತ್ತದೆ. ಇಡೀ ದೇಶದಲ್ಲಿ ಅನೇಕ ಬಗೆಯ ಉಡುಗೆ-ತೊಡುಗೆ, ತಿಂಡಿ-ತಿನಿಸು, ಆಚಾರ-ವಿಚಾರ, ಪದ್ಧತಿ, ಸಂಸ್ಕೃತಿಗಳಿವೆ. ಆದಿಮ ನಂಬಿಕೆಗಳಿವೆ. ಈ ಎಲ್ಲವುಗಳ ಒಟ್ಟು ಮೊತ್ತವೆ ಬಹುತ್ವ ಭಾರತದ ಅಸ್ತಿತ್ವ ಮತ್ತು ಅಸ್ಮಿತೆ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಬಹುತ್ವಕ್ಕೆ ಸನಾತನವಾದಿಗಳಿಂದ ಬಹುದೊಡ್ಡ ಅಪಾಯ ಬಂದೊದಗಿದೆ. ಭಾರತವನ್ನು ಪ್ರಾಚೀನ ಕಾಲದಿಂದಲೂ ಅಪಾಯದ ಸುಳಿಗೆ ಸಿಲುಕಿಸಿದ್ದೆ ಸನಾತನಿಗಳು ಎನ್ನುವ ಸಂಗತಿ ಬಹುತೇಕ ಮುಗ್ಧ ಭಾರತಿಯರಿಗೆ ತಿಳಿದಿಲ್ಲ. ಈ ದೇಶವನ್ನು ಇಲ್ಲಿಯವರೆಗೆ ರಕ್ಷಿಸಿದ್ದು ಇಲ್ಲಿನ ಬಂಡಾಯ ಚಳವಳಿಗಳು, ವಾಗ್ವಾದ ಪರಂಪರೆ, ಬಹುತ್ವ ಸಂಸ್ಕೃತಿ ಮತ್ತು ಒಳಗೊಳ್ಳುವಿಕೆಯ ನೆಲಮೂಲದ ಉದಾತ್ ಸಂಸ್ಕೃತಿ. ಈ ನೆಲದ ಮೇಲೆ ಮೊಟ್ಟ ಮೊದಲು ದಾಳಿ ಮಾಡಿˌ ಇಲ್ಲಿನ ಸಂಸ್ಕೃತಿಯನ್ನು ನುಂಗಿ ನೀರು ಕುಡಿದು ಕೊನೆಗೆ ಇಲ್ಲಿಂದ ಮರಳಿ ತಮ್ಮ ತಾಯ್ನಾಡಿಗೆ ಹಿಂದುರುಗದೆ ಇಲ್ಲೆ ಶಾಶ್ವತವಾಗಿ ನೆಲೆನಿಂತ ಏಕೈಕ ವಿದೇಶಿ ವಲಸಿಗರೆಂದರೆ ಸನಾತನಿ ಆರ್ಯರು. ಈ ನೆಲ ಗ್ರೀಕ್, ಕುಶಾಣ, ಮೊಘಲ್, ತುರ್ಕ, ಡಚ್ಚ, ಬ್ರಿಟಿಷ್‌ ಮುಂತಾದವರಿಂದ ಅನುಭವಿಸಿದ ನೋವಿಗಿಂತ ಹೆಚ್ಚು ನೋವು ಸನಾತನಿ ಆರ್ಯರಿಂದ ಅನುಭವಿಸಿದೆ. ಪ್ರಾಚೀನ ಶಿವ-ದ್ರಾವಿಡ, ಬೌದ್ಧ, ಜೈನ, ಚಾರ್ವಾಕ ಮುಂತಾದ ಸಂಸ್ಕೃತಿಗಳ ಮೇಲಿನ ದೌರ್ಜನ್ಯವು ಅಮಾನುಷವಾಗಿದೆ. ನೆಲಮೂಲದ ಆದಿಮ ನಂಬಿಕೆಗಳನ್ನು ಸನಾತನ ವಿಕೃತ ವ್ಯವಸ್ಥೆಯ ಆವರಣಯೊಳಗೆ ಸನಾತನಿಗಳು ಬಂಧಿಸಿಟ್ಟಿದ್ದಾರೆ.

Advertisements

ಜಗತ್ತಿನಲ್ಲಿ ಧರ್ಮದ ಪರಿಕಲ್ಪನೆ ಹುಟ್ಟುವ ಪೂರ್ವದಲ್ಲಿಯೇ ಇಲ್ಲಿ ಅನೇಕ ಆದಿಮ ನಂಬಿಕೆಗಳು ಅಸ್ತಿತ್ವದಲ್ಲಿದ್ದವುˌ ಈಗಲೂ ಇವೆ. ಇಲ್ಲಿನ ಆದಿವಾಸಿಗಳುˌ ಬುಡಕಟ್ಟು ಜನರು, ಹಳ್ಳಿಗಾಡಿನ ಜನರು ವಿಭಿನ್ನ ನಂಬಿಕೆಗಳು ಹಾಗು ಆಚರಣೆಗಳನ್ನು ಇಂದಿಗೂ ಪಾಲಿಸುತ್ತಿದ್ದಾರೆ. ಈ ನಂಬಿಕೆಯಾಧಾರದ ಎಲ್ಲಾ ಧರ್ಮಗಳು ಯಾವುದೆ ಒಂದು ನಿರ್ಧಿಷ್ಟ ವಿಚಾರಧಾರೆಯ ಅಥವಾ ಧರ್ಮದ ಕವಲುಗಳಾಗಿರದೆ ಅವೆಲ್ಲವೂ ಸ್ವತಂತ್ರವಾಗಿದ್ದು ಸಮಗ್ರವಾಗಿ ಭಾರತೀಯತೆಯನ್ನು ಪ್ರತಿನಿಧಿಸುತ್ತವೆ. ಅಂತಹ ಅಗಣಿತ ನಂಬಿಕೆಯ ಧರ್ಮಗಳನ್ನೆಲ್ಲ ಒಂದೆ ಧರ್ಮದ ಬಾಹುಬಂಧನದಲ್ಲಿ ಮುಳುಗಿಸುವ ಸನಾತನಿಗಳ ಹುನ್ನಾರ ಭಾರತದ ಹೃದಯದ ಮೇಲಿನ ಅಮಾನುಷ ದಾಳಿಯಾಗಿದೆ. ಈ ನೆಲವನ್ನು ಪ್ರೀತಿಸುವುದು, ಈ ನೆಲದ ಬಗ್ಗೆ ನಿಷ್ಠೆ ಹೊಂದುವುದು ಹಾಗೂ ಆ ಮೂಲಕ ನಮ್ಮನ್ನು ನಾವು ರಾಷ್ಟ್ರೀಯವಾದಿಗಳೆಂದು ಕರೆದುಕೊಳ್ಳುವುದೆಂದರೆ ಬಹುತ್ವದ ಬೇರುಗಳನ್ನು ಗಟ್ಟಿಗೊಳಿಸುವುದೇ ಆಗಿದೆ. ಬಹುತ್ವವನ್ನು ನಾಶಗೊಳಿಸುವ ಹುನ್ನಾರಕ್ಕಿಂತ ರಾಷ್ಟ್ರದ್ರೋಹದ ಕೃತ್ಯ ಮತ್ತೊಂದಿಲ್ಲ.

ಕಾಯಕ ಚಳವಳಿ ರೂಪಿಸಿದ ಬಸವಣ್ಣ

ಭಾರತದ ತತ್ವಜ್ಞಾನ ಪರಂಪರೆ, ಅಧ್ಯಾತ್ಮ ಪರಂಪರೆ, ಸಾಂಸ್ಕೃತಿಕ ಪರಂಪರೆಯ ವ್ಯಾಪ್ತಿ ಅಗಾಧವಾಗಿದೆ. ಅದನ್ನು ಯಕಕ್ಷಿತ್ ಸನಾತನ ಪರಂಪರೆಯ ಚೌಕಟ್ಟಿನಲ್ಲಿ ನೋಡಲಾಗದು. ಬುದ್ಧಪೂರ್ವದ ಶಿವ-ದ್ರಾವಿಡ ಸಿದ್ಧಾಂತ, ಶೈವದ ಒಳ ಪ್ರಭೇದಗಳಾದ ಕಾಳಾಮುಖ, ಪಾಶುಪತ, ಕಾಪಾಲಿಕ ಇತ್ಯಾದಿ. ನಾಥ, ಆರೂಢ, ಅವಧೂತ, ಅಚಲ, ಸಿದ್ಧ, ಬೌದ್ದ, ಜೈನ, ಲಿಂಗಾಯತ, ಸಿಖ್‌ ಹೀಗೆ ಅಸಂಖ್ಯಾತ ದರ್ಶನಗಳ ಆಗರವೇ ಭಾರತ. ಅದನ್ನು ಗೌರವಿಸುವುದೇ ಭಾರತೀಯ ರಾಷ್ಟ್ರೀಯತೆ. ಭಾರತೀಯತೆ ಹಾಗೂ ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತದ ಮೂಲ ಪರಂಪರೆಯನ್ನು ನಾಶಗೊಳಿಸಲು ಪ್ರಯತ್ನಿಸುವುದೆ ಹಿಂದೂ ರಾಷ್ಟ್ರೀಯತೆ. ಹಿಂದೂ ರಾಷ್ಟ್ರೀಯತೆಯು ಒಂದು ಮನೋವ್ಯಾಧಿ, ಸಾಂಕ್ರಾಮಿಕ ಪಿಡುಗು ಹಾಗೂ ರಾಷ್ಟ್ರದ್ರೋಹದ ಲಕ್ಷಣ. ಇತ್ತೀಚಿಗೆ ಈ ರಾಷ್ಟ್ರದ್ರೋಹದ ಅಟ್ಟಹಾಸ ಮೇರೆ ಮೀರುತ್ತ ಅದು ಈ ಉಪಖಂಡವನ್ನು ವಿನಾಶದ ಅಂಚಿಗೆ ದೂಡಿದೆ. ಸನಾತನಿಗಳು ಈ ನೆಲಕ್ಕೆ ಯಾವತ್ತೂ ನಿಷ್ಠರಾಗಿರಲಿಲ್ಲ ಎನ್ನುವುದು ಇತಿಹಾಸದುದ್ದಕ್ಕೂ ದಾಖಲಾಗುತ್ತ ಬಂದಿದೆ. ಸನಾತನಿಗಳು ಎಷ್ಟೆ ಕುಟಿಲರಾದರೂ ಹೆಜ್ಜೆ ಹೆಜ್ಜೆಗೆ ಸೋಲುತ್ತದೆ ಬಂದಿದ್ದಾರೆ.

ನಾಲ್ಕು ಸಾವಿರ ವರ್ಷಗಳ ಹಿಂದೆ ಶಿವದ್ರಾವಿಡ ಸಂಸ್ಕೃತಿಯನ್ನು ಹಾಗೂ ಸಿಂಧೂ ಕಣಿವೆಯ ನಾಗರಿಕತೆಯನ್ನು ನಾಶಗೊಳಿಸಿದ್ದೇವೆ ಎಂದುಕೊಂಡಿದ್ದ ಸನಾತನಿಗಳು ಆ ದ್ರಾವಿಡ ಶಿವನನ್ನು ತಮ್ಮ ಅಪೂರ್ಣ ವೈದಿಕ ಸಂಸ್ಕೃತಿಯ ಭಾಗವಾಗಿಸಿಕೊಂಡರು. ಆದರೂ ಸನಾತನಿಗಳು ಪರಿಪೂರ್ಣತೆಯನ್ನು ಮುಟ್ಟಲೆಯಿಲ್ಲ. ಆನಂತರ ತಮ್ಮ ವಿರುದ್ಧ ಒಂದು ಅವೈದಿಕ, ಪರಿಪೂರ್ಣ, ಹಾಗೂ ಪರ್ಯಾಯ ಸಂಸ್ಕೃತಿಯನ್ನು ಹುಟ್ಟುಹಾಕಿದ ಬುದ್ದನನ್ನು ಸನಾತನ ಸಂಸ್ಕೃತಿಯ ಭಾಗವಾಗಿಸಿಕೊಂಡರು. ಆಗಲೂ ಸನಾತನವು ಒಂದು ಪರಿಪೂರ್ಣ ಸಂಸ್ಕೃತಿಯಾಗಿ ಬದಲಾಗಲಿಲ್ಲ. ಬುದ್ಧ ಜಗತ್ತಿನ ಆಕರ್ಷಣೆಯ ಕೇಂದ್ರವಾದˌ ಐತಿಹಾಸಿಕ ಬುದ್ದನನ್ನು ತನ್ನೊಳಗೆ ಸೇರಿಸಿಕೊಂಡರೂ ಸನಾತನಿಗಳ ರಾಮ, ಕೃಷ್ಣರೆಂಬ ಕಾಲ್ಪನಿಕ ಪಾತ್ರಗಳು ಬುದ್ಧನಂತೆ ಜಾಗತಿಕ ಮನ್ನಣೆ ಪಡೆಯಲಿಲ್ಲ. ಕಾರಣ ಬುದ್ಧ ಇತಿಹಾಸ, ರಾಮ, ಕೃಷ್ಣರು ಕೇವಲ ಹುಸಿ ನಂಬಿಕೆ. 4,600 ವರ್ಷಗಳಷ್ಟು ಹಳೆಯ ನಾಗರಿಕತೆಗೆ ಸೇರಿದ ಇಲ್ಲಿನ ಎಲ್ಲಾ ಸಂಸ್ಕೃತಿಗಳಿಗೆ ಸನಾತನಿಗಳು ಅರ್ಧ ಚಡ್ಡಿ ತೊಡಿಸಲು ಮಾಡಿದ ಪ್ರತಿಯೊಂದು ಪ್ರಯತ್ನಗಳು ಮೇಲ್ನೋಟಕ್ಕೆ ಯಶಸ್ವಿಯಾದಂತೆ ಕಂಡರೂ ಅವು ಸಂಪೂರ್ಣ ಯಶಸ್ಸು ಗಳಿಸಲಿಲ್ಲ.

ಮುಂದೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕನ್ನಡ ಮಣ್ಣಿನ ಕಲ್ಯಾಣದಲ್ಲಿ ನಡೆದ ಅವೈದಿಕ ಕ್ರಾಂತಿಯನ್ನು ಪ್ರತಿಕ್ರಾಂತಿಯ ಮೂಲಕ ಹಣಿಯಲು ಸನಾತನಿಗಳು ಅಂದು ಮಾಡಿದ ಹುನ್ನಾರ ಸಂಪೂರ್ಣ ಯಶಸ್ಸು ಗಳಿಸಲಿಲ್ಲ. ಶರಣರ ವಚನಗಳ ನಾಶದ ದುಸ್ಸಾಹಸ ಪೂರ್ತಿಯಾಗಿ ಕೈಗೂಡಲಿಲ್ಲ. ಆ ವಚನ ಸಂಸ್ಕೃತಿಯು ಮುಂದೆ ಮತ್ತೆ ಪುನರುತ್ಥಾನಗೊಂಡು ಸನಾತನಿಗಳಿಗೆ ಇಂದಿಗೂ ಇನ್ನಿಲ್ಲಂತೆ ಕಾಡುತ್ತಿದೆ. ಆಗ ವಚನ ಸಂಸ್ಕೃತಿಯನ್ನು ಇರಿದು ಕೊಲ್ಲಲಾಗದ ಸನಾತನಿಗಳು ಇಂದು ವಚನದರ್ಶನದ ಮೂಲಕ ಅಪ್ಪಿಕೊಂಡು ಕೊಲ್ಲಲು ಮುಂದಾಗಿದ್ದಾರೆ. ಇಲ್ಲಿನ ಮೂಲ ಭಾರತೀಯತೆಯನ್ನು ನಾಶಗೊಳಿಸಲು ಸನಾತನಿಗಳು ಮಾಡಿದ ಪ್ರತಿಯೊಂದು ಪ್ರಯತ್ನಗಳಲ್ಲಿ ಸೋತದ್ಧೇ ಹೆಚ್ಚು. ಆದರೆ ಅವರು ಸೋಲನ್ನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಸನಾತನಿಗಳ ವಿರುದ್ಧ ಬುದ್ಧನ ಬಂಡಾಯ ಎಷ್ಟು ಯಶಸ್ವಿಯಾಯಿತು ಎನ್ನುವುದಕ್ಕಿಂತ ಆತನ ಬಂಡಾಯವೇ ಸನಾತನಿಗಳ ಸೋಲು. ಬಸವಕ್ರಾಂತಿಯನ್ನು ಸನಾತನಿಗಳು ಹತ್ತಿಕ್ಕಿದೆವು ಎಂದು ಸಮಾಧಾನಪಟ್ಟುಕೊಂಡರೂ ಅದು ಅವರ ತೋರಿಕೆಯ ಸಮಾಧಾನ. ಏಕೆಂದರೆ ವಚನ ಸಂಸ್ಕೃತಿ ಅವರಿಗೆ ಎಂದೆಂದಿಗೂ ಮಗ್ಗಲು ಮುಳ್ಳು.

ಅಂಬೇಡ್ಕರ್
ಡಾ. ಬಾಬಾಸಾಹೇಬ ಅಂಬೇಡ್ಕರ್

ಬಸವಣ್ಣ ಜನಿವಾರ ಕಿತ್ತೆಸೆದು ಬ್ರಾಹ್ಮಣ್ಯವನ್ನು ತೊರೆದು ಹೊರಗೆ ಬಂದು ಒಂದು ಅವೈದಿಕ ಚಳವಳಿ ರೂಪಿಸಿದ್ದೇ ಸನಾತನಿಗಳ ಬಹುದೊಡ್ಡ ಸೋಲು. ಬೌದ್ಧ ಧರ್ಮವನ್ನು ಸನಾತನಿಗಳು ಹಣಿದರೂ ಅದು ಮುಂದೆ ಡಾ. ಬಾಬಾಸಾಹೇಬ ಅಂಬೇಡ್ಕರರ ಮೂಲಕ ಮತ್ತೆ ಪುನರುತ್ಥಾನಗೊಂಡು ಸಂವಿಧಾನ ಮಾನ್ಯತೆ ಪಡೆದು ಸ್ವತಂತ್ರವಾಗುವ ಮೂಲಕ ಸನಾತನಿಗಳಿಗೆ ಇಂದಿಗೂ ಕಾಡುತ್ತಿದೆ. ಸನಾತನಿಗಳು ತಾವು ಗೆದ್ದೆವು ಎಂದು ಯಾವತ್ತೂ ವಿರಮಿಸಲಾಗದು. ಏಕೆಂದರೆ ಸನಾತನಿಗಳದ್ದು ಮಿಥ್ಯದ ಮಾರ್ಗವಾಗಿರುವುದರಿಂದ ಅವರು ಸತತವಾಗಿ ಅಭದ್ರತೆಯಲ್ಲಿ ಬದುಕಬೇಕಾಗಿದೆ. ಸಿಖ್ ಧರ್ಮ, ಜೈನ ಧರ್ಮಗಳೂ ಸಹ ಸಂವಿಧಾನದ ಮಾನ್ಯತೆಯನ್ನು ಪಡೆದು ಸನಾತನ ಬಂಧನದಿಂದ ಕಾನೂನಾತ್ಮಕವಾಗಿ ಹೊರಬಂದಾಗಿದೆ. ಇನ್ನು ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಹಕ್ಕೊತ್ತಾಯ ಚಳವಳಿಯು ಚುರುಕುಗೊಂಡು ಗುಪ್ತಗಾಮಿನಿಯಂತೆ ವಿಸ್ತರಿಸುತ್ತಿದೆ. ಲಿಂಗಾಯತ ಚಳವಳಿಯು ಇನ್ನೆಂದಿಗೂ ವಿರಮಿಸದೇ ನಿರಂತರ ಪ್ರವಾಹದಂತೆ ಧುಮುಕುತ್ತ ಸಾಗಲಿದೆ.

ವಚನ ಚಳವಳಿಯ ಉತ್ಪನ್ನಗಳಾದ ಶರಣರು ಬರೆದ ವಚನಗಳು ಬಸವೋತ್ತರ ಯುಗದ ನಾಲ್ಕಾರು ಶತಮಾನಗಳಿಂದ ಪ್ರಕ್ಷಿಪ್ತಗೊಂಡಿವೆ. ಸಂಪಾದನೆಯ ನೆಪದಲ್ಲಿ ಮೂಲ ವಚನಗಳನ್ನು ಕಲಬೆರಕೆಗೊಳಿಸಲಾಗಿದೆ. ಸಂಸ್ಕೃತದ ಸಾಲುಗಳ ಸೇರ್ಪಡೆˌ ವೀರಶೈವ ಪದ ಒಳ ನುಸುಳುವಿಕೆˌ ಮತ್ತು ಹಲವು ಕಡೆ ಮೂಲ ವಚನಕಾರರ ಪ್ರಗತಿಪರ ಚಿಂತನೆಗಳ ತಿರುಚುವಿಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅನೇಕ ಖೊಟ್ಟಿ ವಚನಗಳು ಸಹ ಸೇರ್ಪಡೆಗೊಂಡಿವೆ. ಆದರೆ ವಚನ ಚಳವಳಿಯ ಮೂಲ ಆಶಯಗಳಾದ ವೇದಭಂಜಕತೆ, ಸನಾತನ ವಿಕೃತಿಗಳ ವಿರುದ್ಧದ ಬಂಡಾಯದ ಧ್ವನಿ, ಸ್ತ್ರೀ ಸಮಾನತೆ ಹಾಗು ಜಾತಿ ವಿನಾಶದ ನೆಲೆಗಳುˌ ಕಾಯಕ ಸಂಸ್ಕೃತಿಯ ಹಿರಿಮೆ, ಉತ್ಪಾದಕ ವರ್ಗದ ಮೇಲರಿಮೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಸತ್ತೆಯ ಪ್ರತಿಪಾದನೆ, ಮಾನವ ಹಕ್ಕುಗಳ ಪ್ರಸ್ತಾವನೆ, ಸನಾತನ ವೈದಿಕ ಮೌಢ್ಯಗಳ ವಿಡಂಬನೆ ಇತ್ಯಾದಿ ಹೆಗ್ಗುರುತುಗಳನ್ನು ವಚನ ಸಂಸ್ಕೃತಿಯಿಂದ ಇಂದಿಗೂ ಬೇರ್ಪಡಿಸಲು ಅಥವಾ ಅಳಿಸಲು ಸನಾತನಿಗಳಿಗೆ ಸಾಧ್ಯವಾಗಿಲ್ಲ. ವಚನ ಸಾಹಿತ್ಯ ಮತ್ತು ಬಸವ ಸಂಸ್ಕೃತಿ ತುಳಿದಷ್ಟು ಮೇಲೇಳುತ್ತಿದೆ. ಚಿಗುಟಿದಷ್ಟು ಹುಲುಸಾಗಿ ಚಿಗುರುತ್ತಿದೆ.

ವಚನ ಸಂಸ್ಕೃತಿಯನ್ನು ನೇರಾನೇರವಾಗಿ ಮುಗಿಸಲಾಗದೆ ಸನಾತನಿಗಳು ಹತಾಶೆಗೊಂಡಿದ್ದಾರೆ. ಲಿಂಗಾಯತರು ಸನಾತನಿಗಳಿಗೆ ಧನ್ಯವಾದಗಳನ್ನು ಹೇಳಬೇಕು. ಏಕೆಂದರೆ ಸನಾತನಿಗಳ ಉಪಟಳ ಹೆಚ್ಚದಿದ್ದರೆ ಬಸವಣ್ಣ ಜನಿವಾರ ಕಿತ್ತೆಸೆದು ಲಿಂಗಾಯತ ಧರ್ಮ ಸ್ಥಾಪಿಸುತ್ತಿರಲಿಲ್ಲ. ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಬೇಡಿಕೆಯ ಚಳವಳಿ ತೀವ್ರತೆ ಪಡೆದಾಗ ಸನಾತನಿಗಳು ಅದನ್ನು ಹತ್ತಿಕ್ಕದೆ ಬಿಟ್ಟಿದ್ದರೆ ಬಹುಶಃ 2018ರಲ್ಲಿ ಕರ್ನಾಟಕದಲ್ಲಿ ಅವರು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತಿದ್ದರು. ಮುಂದೆ ಕೇಂದ್ರ ಸರಕಾರ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ರಾಜ್ಯ ಸರಕಾರದ ಶಿಫಾರಸ್ಸನ್ನು ನಿರಾಕರಿಸಿ ಹಿಂತಿರುಗಿ ಕಳುಹಿಸದಿದ್ದರೆ ಸನಾತನಿಗಳು ಲಿಂಗಾಯತ ಧರ್ಮದ ವಿರೋಧಿಗಳು ಎಂದು ಮುಗ್ಧ ಲಿಂಗಾಯತರಿಗೆ ತಿಳಿಯುತ್ತಿರಲಿಲ್ಲ. ಲಿಂಗಾಯತ ಧರ್ಮದ ಚಳವಳಿ ಇನ್ನಷ್ಟು ಗಟ್ಟಿಯಾಗುವುದನ್ನು ತಡೆಯಲು ಸನಾತನಿಗಳು ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಪ್ರಾಯೋಜಿಸದಿದ್ದರೆ ಸನಾತನಿಗಳ ಮತ ಬ್ಯಾಂಕ್ ಗಣನೀಯವಾಗಿ ಕುಸಿಯುತ್ತಿರಲಿಲ್ಲ.

ಸನಾತನಿಗಳು ಲಿಂಗಾಯತ ವಿರೋಧಿಗಳು ಎನ್ನುವ ಸತ್ಯ ಸಾಮಾನ್ಯ ಲಿಂಗಾಯತನಲ್ಲಿ ಬಲಗೊಳ್ಳಲು 2018-23 ರ ಕಾಲಾವಧಿ ಮಹತ್ವದ್ದಾಗಿದೆ. ಮೈಮರೆತು ಮಲಗುವ ಲಿಂಗಾಯತರನ್ನು ಆಗಾಗ ಸನಾತನಿಗಳು ಬಡಿದೆಬ್ಬಿಸುತ್ತಾರೆ. ಪಾಪ ಅದು ಅವರ ತಪ್ಪಲ್ಲ ˌ ಏಕೆಂದರೆ ಹಿಂದುತ್ವದ ಅಜೆಂಡಾ ಕರ್ನಾಟಕದಲ್ಲಿ ಜಾರಿಗೊಳಿಸಲು ಮುಖ್ಯ ಅಡಚಣೆಯೇ ಲಿಂಗಾಯತ ಸಂಸ್ಕೃತಿ ಎನ್ನುವುದು ಅವರ ಚಿಂತೆ. ಅದನ್ನು ನಾಶಗೊಳಿಸದೆ ಹಿಂದುತ್ವ ಬಿತ್ತಲು ಸಾಧ್ಯವಿಲ್ಲ ಹಾಗೂ ತಮಗೆ ಉಳಿಗಾಲವಿಲ್ಲವೆಂದು ಅವರು ಬಲ್ಲರು. ಆದ್ದರಿಂದ ಹತಾಶೆಗೊಂಡು ಈಗ ವಚನದರ್ಶನ ಅಭಿಯಾನ ಆರಂಭಿಸಿದ್ದಾರೆ. ಸನಾತನಿಗಳ ವಚನದರ್ಶನ ಅಭಿಯಾನದ ಅವಕಾಶವನ್ನು ಲಿಂಗಾಯತ ಪ್ರಜ್ಞಾವಂತರು ಬಳಸಿಕೊಳ್ಳುತ್ತಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಸಂಘಿಗಳ ವಚನದರ್ಶನ ಅಭಿಯಾನ ಸಂಪೂರ್ಣವಾಗಿ ವಿಫಲಗೊಳ್ಳುತ್ತಿದೆ. ವೇದಿಕೆಯ ಮೇಲೆ ಸಂಘಟನಾ ಮೂಲದ ವ್ಯಕ್ತಿಗಳ ಮಾತುಗಳು ಲಿಂಗಾಯತರಲ್ಲಿ ಸನಾತನಿಗಳ ಬಗ್ಗೆ ಆಕ್ರೋಶವನ್ನು ಘನೀಕರಿಸುತ್ತಿವೆ. ದೆಹಲಿಯಲ್ಲಿನ ಸ್ವಾಮಿ ನಾರಾಯಣ ಮಂದಿರಕ್ಕಿಂತ ಭವ್ಯವಾದ ಬಸವಕಲ್ಯಾಣದಲ್ಲಿನ ಅನುಭವ ಮಂಟಪ ನಿರ್ಮಾಣ ಸನಾತನಿಗಳ ನಿದ್ರೆಯನ್ನೆ ನುಂಗಿ ಹಾಕಿದೆ.

ಅನುಭವ ಮಂಟಪ ಕಾಮಗಾರಿಯನ್ನು ನಿಲ್ಲಿಸಲು ಪೀರ್‌ ಪಾಷಾ ದರ್ಗಾ ಇರುವ ಸ್ಥಳವೇ ಅನುಭವ ಮಂಟಪವೆಂದು ವಿವಾದ ಸೃಷ್ಠಿಸಲು ಪ್ರಯತ್ನಿಸಿ ಸನಾತನಿಗಳು ವಿಫಲರಾಗಿದ್ದಾರೆ. ಆನಂತರ ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮೇಲಂತೂ ಅಕ್ಷರಶಃ ಕಂಗಾಲಾಗಿದ್ದಾರೆ. ಅದರ ಫಲಶೃತಿಯೆ ವಚನದರ್ಶನ ಅಭಿಯಾನ. ಅದು ಮಲಗಿದ್ದ ಲಿಂಗಾಯತರನ್ನು ಮತ್ತೆ ಬಡಿದೆಬ್ಬಿಸಿದೆ. ಈಗ ಪ್ರತಿ ಜಿಲ್ಲೆಗಳಲ್ಲಿ ವಚನದರ್ಶನವನ್ನು ವಿರೋಧಿಸಿ ಹೋರಾಟˌ ಪ್ರತಿಭಟನೆ, ಪತ್ರಿಕಾಗೋಷ್ಠಿ, ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆ, ಸಮಾಲೋಚನಾ ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಸಂಘಿ ಹುನ್ನಾರಗಳಿಂದ ಶಿಥಿಲಗೊಳ್ಳುತ್ತಿರುವ ಲಿಂಗಾಯತ ಮಠಗಳನ್ನು ನಿಯಂತ್ರಣಕ್ಕೆ ಪಡೆಯುವಲ್ಲಿ ಲಿಂಗಾಯತ ಅಸ್ಮಿತೆ ಕ್ರಮೇಣ ಯಶ ಕಾಣುತ್ತಿದೆ. ಬಹುತೇಕ ಕಡೆಗಳಲ್ಲಿ ವಚನ ದರ್ಶನ ಕಾರ್ಯಕ್ರಮದಿಂದ ಲಿಂಗಾಯತ ಸಂಘಟನೆಗಳು ದೂರ ಉಳಿದರೆ ಪ್ರಮುಖ ಲಿಂಗಾಯತ ಮಠಾಧೀಶರು, ಗಣ್ಯರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಒಟ್ಟಾರೆ ವಚನದರ್ಶನವು ಲಿಂಗಾಯತ ಸಂಸ್ಕೃತಿ ನಾಶಗೊಳಿಸುವ ಸಂಘಿಗಳ ಕುಟಿಲ ಹುನ್ನಾರವೆಂದು ಸಾಬೀತಾಗುತ್ತಿದೆ.

ಪ್ರಸ್ತುತ ವಚನದರ್ಶನ ಅಭಿಯಾನಕ್ಕೆ ಅನಿರೀಕ್ಷಿತವಾದ ಹಿನ್ನೆಡೆಯಾಗುತ್ತಿದ್ದರೂ ಸನಾತನಿಗಳು ಸೋಲನ್ನು ಒಪ್ಪಿಕೊಳ್ಳದೆ ತಮ್ಮ ಎಂದಿನ ನಿರ್ಲಜ್ಜತೆಯ ದರ್ಶನ ಮುಂದುವರಿಸಿದ್ದಾರೆ. ವಚನದರ್ಶನ ಅಭಿಯಾನದ ವಿರುದ್ಧ ಮುಂದಿನ ದಿನಗಳಲ್ಲಿ ಲಿಂಗಾಯತರಲ್ಲಿ ಇನ್ನೂ ಹೆಚ್ಚಿನ ಮಟ್ಟದ ಜಾಗೃತಿ ಕಾರ್ಯ ನಡೆಯುವ ಸಾಧ್ಯತೆಗಳಿವೆ. ಸನಾತನಿಗಳ ಹುನ್ನಾರದಿಂದ ಆಂತರಿಕವಾಗಿ ಸಡಿಲಗೊಳ್ಳುತ್ತಿರುವ ಲಿಂಗಾಯತ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಲಿಂಗಾಯತ ಮಠಾಧೀಶರು, ಸಂಘ ಸಂಸ್ಥೆಗಳು, ಹಾಗು ಲಿಂಗಾಯತ ಪ್ರಜ್ಞಾವಂತರು ಬಹಳ ಎಚ್ಚರಿಕೆಯಿಂದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಬಸವಪ್ರಜ್ಞೆಯುಳ್ಳ ಲಿಂಗಾಯತ ಮಠಾಧೀಶರ ವಿರುದ್ಧ ಸನಾತನಿ ವೈದಿಕ ಮಾಧ್ಯಮಗಳು ಮಾಡುತ್ತಿರುವ ಅಪಪ್ರಚಾರ ಮತ್ತು ಅನಾಗರಿಕ ದಾಳಿಯನ್ನು ಲಿಂಗಾಯತ ಚಿಂತಕರು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ವೈದಿಕರು ಬಸವಪ್ರಜ್ಞೆ ಹಾಗೂ ಅದನ್ನು ಪ್ರತಿಪಾದಿಸುವ ಮಠಾಧೀಶರ ವಿರುದ್ಧ ಇದ್ದಾರೆ ಎನ್ನುವುದು ಮುಗ್ಧ ಲಿಂಗಾಯತರಿಗೆ ಮನವರಿಕೆಯಾಗುತ್ತಿದೆ. ವೈದಿಕ ಮಾಧ್ಯಮಗಳು ಲಿಂಗಾಯತ ಸಂಸ್ಕೃತಿಯ ಮೇಲೆ ಮಾಡುತ್ತಿರುವ ಆಕ್ರಮಣ, ಅನಾಗರಿಕ ಹಾಗೂ ಪೂರ್ವನಿರ್ಧಾರಿತ ದಾಳಿಗಳನ್ನು ಲಿಂಗಾಯತ ಚಿಂತಕರು ಗಂಭೀರವಾಗಿ ಮುಗ್ಧ ಲಿಂಗಾಯತರಿಗೆ ಮನವರಿಕೆ ಮಾಡಿಸುತ್ತಿದ್ದಾರೆ. ಡಾ. ಎಂ ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯ ಘಟನೆಗಳು ಇದೆ ವೈದಿಕ ಮಾಧ್ಯಮಗಳ ಕುಮ್ಮಕ್ಕಿನಿಂದ ನಡೆದಿವೆ ಎನ್ನುವ ಸಂಗತಿ ಕೂಡ ಲಿಂಗಾಯತರಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ ಕಟಕಟೆಯಲ್ಲಿ ನಿಂತಿರುವುದು ನ್ಯಾಯ ವ್ಯವಸ್ಥೆಯೇ ವಿನಾ ಉಮರ್ ಖಾಲಿದ್ ಅಲ್ಲ!

ಲಿಂಗಾಯತ ಚಿಂತಕರ ಅಮಾನುಷ ಹತ್ಯೆಯ ನಂತರ ವೈದಿಕ ಮಾಧ್ಯಮಗಳು ಬಸವಪ್ರಜ್ಞೆಯ ಲಿಂಗಾಯತ ಮಠಾಧೀಶರು ಹಾಗೂ ಚಿಂತಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಸಂಘಟಿತ ದಾಳಿಯು ಲಿಂಗಾಯತರಲ್ಲಿ ಐಕ್ಯತೆಯನ್ನು ಮೂಡಿಸುತ್ತಿದೆ. ಅದರ ಪರಿಣಾಮವಾಗಿ ಲಿಂಗಾಯತ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ಲಿಂಗಾಯತ ಮಠಗಳಲ್ಲಿ ವಚನ ಕಮ್ಮಟಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಒಟ್ಟಾರೆ ಪ್ರಾಚೀನ ಕಾಲದಿಂದಲೂ ಸನಾತನಿಗಳು ನಿರಂತರಾಗಿ ಸೋಲುತ್ತಿದ್ದರು ಅದನ್ನು ಒಪ್ಪಿಕೊಳ್ಳದೆ, ತಮಗಾದ ಹತಾಷೆಯನ್ನು ತೋರ್ಗೊಡದೆ ಎಂದಿನಂತೆ ತಮ್ಮ ಪರಂಪರಾಗತ ಗುಣಗಳಾದ ಅಪಾರ ತಾಳ್ಮೆ, ತಣ್ಣನೆಯ ಕ್ರೌರ್ಯ ಹಾಗೂ ನಂಬಿಸಿ ಕುತ್ತಿಗೆ ಕೊಯ್ಯುವ ದ್ರೋಹದ ಕಾರ್ಯವನ್ನು ಮುಂದುವರಿಸಿದ್ದಾರೆ. ಭಾರತೀಯತೆಯ ಮೇಲಿನ ತಮ್ಮ ಪರಂಪರಾಗತ ವಂಶವಾಹಿನಿಯ ಗುಣದನುಸಾರ ದಾಳಿಯ ಪರಿಣಾಮದಿಂದ ಸನಾತನಿಗಳು ಈ ದೇಶದ ಮುಖ್ಯ ವಾಹಿನಿಯಿಂದ ಹೊರಗಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ವೈದಿಕ ದರ್ಶನಗಳು ಹೊರತುಪಡಿಸಿದ ಮೂಲ ಭಾರತೀಯ ದರ್ಶನಗಳು ಭಾರತೀಯ ಅವೈದಿಕ ರಾಷ್ಟ್ರೀಯತೆಯ ಅವಿಚ್ಛಿನ್ನ ಭಾಗವಾಗಿ ಗಟ್ಟಿಗೊಳ್ಳಲಿವೆ.

ಇದನ್ನೂ ಓದಿ ನುಡಿ ನಮನ | ಜಗತ್ಪ್ರಸಿದ್ಧ ಮಾರ್ಕ್ಸ್‌ವಾದಿ ಚಿಂತಕ ಹಾಗೂ ಅಪೂರ್ವ ರಾಜಕೀಯ ತಂತ್ರಜ್ಞನ ಕಣ್ಮರೆ

ಈ ದೇಶಕ್ಕೆ ಹೊರಗಿನವರಾದ ಸನಾತನಿಗಳು ತಮ್ಮ ದುಶ್ಕೃತ್ಯಗಳು ಹಾಗೂ ಭಾರತೀಯತೆಗೆ ನಿಷ್ಟರಾಗದ ವಿದ್ರೋಹಿ ಮನಸ್ಥಿತಿಯಿಂದ ಮೂಲ ಭಾರತೀಯ ಮುಖ್ಯ ವಾಹಿನಿಯಿಂದ ರಿಕ್ತಗೊಂಡಿದ್ದಾರೆ. ಭಾರತೀಯ ಸಂಸ್ಕೃತಿಯು ಸನಾತನಿಗಳಿಂದ ರಿಕ್ತಗೊಂಡು ಈ ನೆಲದ ಮುಖ್ಯವಾಹಿನಿಂದ ಹೊರಗುಳಿದರೆ, ಅದು ಒಂದು ರೀತಿಯಲ್ಲಿ ಈ ನೆಲದ ಬಹುತ್ವ ಸಂಸ್ಕೃತಿಯ ವಿಜಯವೆಂದೇ ಹೇಳಬೇಕು. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಮೇಲೆ ವಿದೇಶಿ ಸಂಸ್ಕೃತಿ ಪ್ರಭುತ್ವ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆಯಾ ಕಾಲಘಟ್ಟದಲ್ಲಿ ಸನಾತನಿಗಳ ತಾತ್ಕಾಲಿಕ ಗೆಲುವುಗಳು ಹಾಗೂ ನಿರಂತರ ಸರಣಿ ಸೋಲುಗಳು ಅವರನ್ನು ಬಹಿರಂಗವಾಗಿ ಹತಾಶೆಗೊಳಿಸದಿದ್ದರೂ ಅವರಲ್ಲಿ ಆಂತರಿಕ ಬೇಗುದಿ, ನಿರಂತರ ಅಭದ್ರತೆಯನ್ನಂತೂ ಖಾಯಂಗೊಳಿಸಿವೆ. ಇದು ಭಾರತೀಯ ಮೂಲ ರಾಷ್ಟ್ರೀಯತೆಯಿಂದ ಪ್ರತ್ಯೇಕಿಸಿ ವಿಘಟನೆ ಹಿನ್ನೆಲೆಯ ಹುಸಿ ಹಿಂದುತ್ವ ರಾಷ್ಟ್ರೀಯತೆಯ ಕೊಚ್ಚೆಗೆ ಅವರನ್ನು ದೂಡಿದೆ. ಇದು ಸನಾತನಿಗಳ ಸ್ವಯಂಕೃತ ಅಪರಾಧದ ಹಾಗೂ ಈ ದೇಶಕ್ಕೆ ಬಗೆದ ನಿರಂತರ ದ್ರೋಹದ ಫಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

2 COMMENTS

  1. ಅದೇ ನಿಮ್ಮ ಸಾಣೆ ಗುರುಗಳು ಲಿಂಗಾಯತ ಧರ್ಮಕ್ಕೂ ಮತ್ತು ಇಸ್ಲಾಂ ಧರ್ಮಕ್ಕೂ ಬಹಳ ಸಾಮ್ಯತೆ ಇದೆ ಎಂದು ಹೇಳಿದ್ದಾರೆ. ಅದರ ಬಗ್ಗೆ ನೀವೇನು ಹೇಳುವಿರಿ?

  2. Excellent article sir, sansthanis true face is
    exposed , how they are failuring in their tasks
    is explained very well.
    ಬಸವಣ್ಣನವರ ವಚನದ ಮಾತುಗಳಂತೆ
    ಕೊಲ್ಲುವ ಭಾಷೆ ಯಾವತ್ತೂ ಗೆಲ್ಲುವುದಿಲ್ಲ
    ಪ್ರೀತಿಸುವ, ಒಳಗೋಳ್ಳುವ ಭಾಷೆಯೇ
    ಗೆಲ್ಲುವುದು ಯಾವತ್ತೂ ಇದನ್ನು ನಂಬಿದವರು
    ನಮ್ಮ ಕನ್ನಡ ನೆಲ ಮೂಲದ ಶರಣರು ಇದೇ
    ನಿಜವಾದ ರಾಷ್ಟ್ರ ಪ್ರಜ್ಞೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X