ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಯುವತಿಗೆ ವಿಷವುಣಿಸಿ ಕೊಲೆ ಮಾಡಿರುವ ಘಟನೆ ಸಂಬಂಧಿಸಿ, ಮೃತ ಯುವತಿಯ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ಭೇಟಿ ನೀಡಿ, ಸಾಂತ್ವನ ಹೇಳಿದರು.
ಮರಿಯಮ್ಮ ಮಾದಿಗ ಸಮುದಾಯ ಯುವತಿಯನ್ನು ನಾಯಕ ಸಮುದಾಯದ ಯುವಕ ವಿವಾಹವಾಗಿ ಜಾತಿ ಎಂಬ ಕಾರಣಕ್ಕೆ ಕುಟುಂಬಸ್ಥರು ಚಿತ್ರಹಿಂಸೆ ನೀಡಿ ವಿಷವುಣಿಸಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಈಗಾಗಲೇ ಯುವಕನ ಕುಟುಂಬದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿದ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಪಾಲಕರು-ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡಬಾರದು. ಯುವತಿಯ ಸಾವಿಗೆ ನ್ಯಾಯ ದೊರಕಿಸಲಾಗುವುದು. ಇಂತಹ ಘಟನೆಗಳು ಆಗಲಾರದಂತೆ ಬಿಗಿ ಭದ್ರತೆ ವಹಿಸಲಾಗುವುದು ಎಂದರು.
ಮರಿಯಮ್ಮ ಮನೆಯ ಕುಟುಂಬಕ್ಕೆ ವಿಶೇಷ ಅನುದಾನದಲ್ಲಿ ಪರಿಹಾರ ಒದಗಿಸಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಪರಿಶಿಷ್ಟರ ಮೇಲೆ ದಬ್ಬಾಳಿಕೆ ,ದೌರ್ಜನ್ಯ ನಿರಂತರ ನಡೆಯುತ್ತಿದೆ.ಪ್ರಕರಣಗಳ ಮೇಲೆ ಕಠಿಣ ನಿಗಾ ವಹಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಜಾತಿ ಅಸ್ಪಶ್ಯತೆ ಆಚರಣೆಗಳ ಮೇಲೆ ನಿಗಾ ವಹಿಸಿ, ಕಡಿವಾಣ ಹಾಕಬೇಕು ಎಂದು ಪೋಲಿಸರಿಗೆ ನಿರ್ದೇಶನ ನೀಡಿದರು.

ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ, ಜಿಲ್ಲಾಧಿಕಾರಿ ನಲೀನ ಅತುಲ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ, ದಲಿತ ಮುಖಂಡ ಪಾಮಣ್ಣ ಅರಳಿಗನೂರು ಇನ್ನಿತರರು ಹಾಜರಿದ್ದರು.
ಇದನ್ನು ಓದಿದ್ದೀರಾ? ಚಿಂತಾಮಣಿ | ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ
ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವತಿಯನ್ನು ಯುವಕನ ಮನೆಯವರು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆಗೈದಿರುವುದಾಗಿ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದ್ದು ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ(21) ಮೃತಪಟ್ಟ ಯುವತಿಯಾಗಿದ್ದಾಳೆ.
