ಲೇಖಕ, ಸಾರ್ವಜನಿಕ ಚಿಂತಕ ಹಾಗೂ ಸಾಮಾಜಿಕ ಚಳುವಳಿಗಾರ ಜಿ ರಾಜಶೇಖರ್ ಅಗಲಿ ಎರಡು ವರ್ಷಗಳಾಗಿವೆ. ಜಿ.ರಾಜಶೇಖರ್ ಅವರ ಸೆ.16ರ ಹುಟ್ಟುಹಬ್ಬದ ಪ್ರಯುಕ್ತ ಮೊದಲ ‘ಜಿ.ರಾಜಶೇಖರ್ ಸ್ಮಾರಕ ಜ್ಞಾನವೇತನ’ವನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ಪ್ರಸ್ತುತ ಜ್ಞಾನವೇತನವು, ಕಾಲದ ಗುಣಗ್ರಾಹಿಯಾದ ಜಿ.ರಾಜಶೇಖರ್ ಅವರ ’ಕಾಗೋಡು ಸತ್ಯಾಗ್ರಹ’ದಂತಹ ಕೃತಿಗಳನ್ನು ಕಟ್ಟಲು ಕನ್ನಡದ ಯುವ ಬರಹಗಾರರು, ಸಂಶೋಧಕರು ಹಾಗೂ ಪತ್ರಕರ್ತರಿಗೆ ಪತ್ರಕರ್ತರಿಗೆ ಸ್ಪೂರ್ತಿದಾಯಕವಾಗಲಿ ಎಂಬುದು ಇದರ ಉದ್ದೇಶವಾಗಿದೆ ಎಂದು ಸಲಹಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಜ್ಞಾನ ವೇತನದ ವಿವರ ಹೀಗಿದೆ:
ಒಟ್ಟು 1,00,000 ರೂಪಾಯಿ ಮೊತ್ತದ ಜ್ಞಾನವೇತನವನ್ನು, 18-35 ರ ವಯಸ್ಸಿನ ಮಿತಿಯಲ್ಲಿ ಇರುವ ಒಬ್ಬ ಅಭ್ಯರ್ಥಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುವುದು.
ವೇತನ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸಂಶೋಧನೆಯ ವಿಷಯ ಹಾಗೂ ಸಂಶೋಧನಾ ವಿಧಾನವನ್ನು ಒಳಗೊಂಡ ಸಂಶೋಧನಾ ಪ್ರಸ್ತಾವನೆಯನ್ನು ಅಕ್ಟೋಬರ್ 30ರೊಳಗೆ ಸಲ್ಲಿಸಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ನುರಿತರಾಗಿರುವವರು, ಅನುಭವಿ ಲೇಖಕರನ್ನು ಒಳಗೊಂಡ ಸಲಹಾ ಮಂಡಳಿಯು ಒಬ್ಬ ಅಭ್ಯರ್ಥಿಯನ್ನು ವೇತನಕ್ಕೆ ಆಯ್ಕೆ ಮಾಡುತ್ತದೆ.
ಆಯ್ಕೆಯಾದ ಅಭ್ಯರ್ಥಿಯು ಸಂಶೋಧನೆಗೆ ಆಯ್ದುಕೊಂಡ ಚಾರಿತ್ರಿಕ ವಿಷಯದ ಮೇಲೆ, ಸಾಕ್ಷಿ-ಪುರಾವೆ ಹಾಗು ಆಳ-ಅಗಲ ಉಳ್ಳ ವರದಿಗಳ ಆಧಾರದಲ್ಲಿ ಸಂಶೋಧನೆ ನಡೆಸಬೇಕು. ಸಲಹಾ ಮಂಡಳಿಯು ಸಂಶೋಧನಾ ಸಂಶೋಧನಾ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತದೆ. ಮಹಿಳೆ, ಕಡೆಗಣಿತ ಜಾತಿ ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು.
ಕಡೆಗಣಿತ ಸಮುದಾಯಗಳ(ಸ್ಥಳ, ಸಮುದಾಯ ನಿರ್ದಿಷ್ಟತೆ ಇರಬೇಕು) ಪ್ರತಿರೋಧ ಚರಿತ್ರೆ ಮತ್ತೂ ಪ್ರಸ್ತುತ ಪರಿಸ್ಥಿತಿಯ ನೈಜತೆ. ಆಧುನಿಕ ಸಾಂಸ್ಥಿಕ ವ್ಯವಸ್ಥೆಗಳ(ಕಾನೂನು, ನ್ಯಾಯಿಕ, ಆರೋಗ್ಯ, ಶಿಕ್ಷಣ, ಮಹಿಳೆ-ಮಕ್ಕಳ ಕಲ್ಯಾಣ ಇತ್ಯಾದಿ) ವೈಫಲ್ಯದ ಕಾರ್ಯ-ಕಾರಣ -ಪರಿಣಾಮ. ಶ್ರಮಿಕರ ಆಂತರಿಕ ವಲಸೆ: ಸಾಮಾಜಿಕ ಕಾರ್ಯ-ಕಾರಣ, ವಲಸೆಯ ನಕ್ಷೆ, ಪ್ರದೇಶ ಭಿನ್ನತೆ, ಹೊರಗಿಡುವಿಕೆ, ಕಡೆಗಣಿಸುವಿಕೆ, ಸಾಮಾಜಿಕ ಪರಿಣಾಮಗಳು. ‘ಕಡೆಗಣಿತ ಸಮುದಾಯಗಳ ಕಲ್ಯಾಣಕ್ಕಾಗಿ ವಿಜ್ಞಾನ ತಂತ್ರಜ್ಞಾನ- ವರ್ತಮಾನದ ಸ್ಥಿತಿಗತಿ, ಎದುರಿಸಬೇಕಾದ ಸವಾಲುಗಳು, ಸಾಗಬೇಕಾದ ಹಾದಿ. ಜೀವಸಂಕುಲ, ಪರಿಸರ ಮತ್ತು ಮಾನವ ಅಸ್ತಿತ್ವದ ಸಮಸ್ಯೆಗಳು. ಈ ಸೂಚಿತ ವಿಷಯಗಳಲ್ಲದೆ ಸಂಶೋಧನೆಗೆ ಅರ್ಹವಾದ ಸಾಮಾಜಿಕ ಕಾಳಜಿಯ/ಕುತೂಹಲಕರ ವಸ್ತುಗಳಿಗೂ ಅವಕಾಶವಿದೆ. ಆದರೆ, ಸಲಹಾ ಸಮಿತಿಯ ಆಯ್ಕೆಯೇ ಅಂತಿಮವಾಗಿರುತ್ತದೆ.
ಆಯ್ಕೆಯಾದ ಸಂಶೋಧನಾ ವರದಿಯನ್ನು ಅಂತಿಮವಾಗಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಪ್ರಸ್ತಾವನೆಯನ್ನು ಇಮೇಲ್ ಐಡಿ-grskksv@gmail.comಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಬರಹಗಾರರಾದ ಎಚ್.ಎಸ್.ಅನುಪಮಾ, ರಹಮತ್ ತರೀಕೆರೆ, ಕವಿ ರಘುನಂದನ, ಮಾಧ್ಯಮ ತಜ್ಞ ಎನ್‌ಎಎಂ ಇಸ್ಮಾಯಿಲ್, ಹಿರಿಯ ಪತ್ರಕರ್ತ ಡಿ.ಉಮಾಪತಿ, ಸಹಸಂಪಾದಕ ಕುಂಟಾಡಿ ನಿತೇಶ್, ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್ ಸಲಹಾ ಮಂಡಳಿಯ ಪ್ರಮುಖರಾಗಿದ್ದಾರೆ.
ಪ್ರಸ್ತಾವನೆ ಕಳುಹಿಸಲು ಇ-ಮೇಲ್ ವಿಳಾಸ: grskksv@gmail.com. ಮಾಹಿತಿಗೆ ಸಂಪರ್ಕ ಸಂಖ್ಯೆ : 7838263911
