ಮುಖ್ಯಮಂತ್ರಿಯಾಗಿ ಮಮತಾರ ಮಾತುಗಳು, ವರ್ತನೆಗಳು, ಧೋರಣೆಗಳು 'ಬಂಗಾಳದ ದೀದಿ'ಯಾಗಿ ಅವರ ಗೌರವ ಮತ್ತು ಘನತೆಗೆ ತಕ್ಕುದಲ್ಲ. ರಾಜೀನಾಮೆ ಎಂಬ ಭಾವನಾತ್ಮಕ ಮತ್ತು ರಾಜಕೀಯ ಅಟಾಟೋಪಗಳನ್ನು ಬದಿಗಿಟ್ಟು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವೈದ್ಯೆಯ ಮೇಲೆ ಕ್ರೌರ್ಯ ಮೆರೆದ ತಪ್ಪಿತಸ್ಥರನ್ನು ಬಂಧಿಸಬೇಕು. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ವೈದ್ಯರ ಬೇಡಿಕೆಗಳನ್ನು ಈಡೇರಿಸಬೇಕು.
ಕೋಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಕೃತ್ಯ ನಡೆದ ದಿನದಿಂದಲೂ ಆಸ್ಪತ್ರೆಯ ಟ್ರೈನಿ ವೈದ್ಯರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಐದು ಬೇಡಿಕೆಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮುಂದಿಟ್ಟಿದ್ದಾರೆ. ಪ್ರತಿಭಟನಾಕಾರರ ಆಕ್ರೋಶವನ್ನು ತಣಿಸಲಾಗದ ಮಮತಾ, ಅಗತ್ಯ ಬಿದ್ದರೆ ರಾಜೀನಾಮೆಯನ್ನು ನೀಡುತ್ತೇನೆ ಎಂದು ಭಾವನಾತ್ಮಕ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಬಂಗಾಳದ ದೀದಿ ವೈದ್ಯರನ್ನು ಸಮಾಧಾನಿಸುವಲ್ಲಿ ತಮ್ಮ ವೈಫಲ್ಯವನ್ನು ತಾವೇ ಎತ್ತಿತೋರಿಸುತ್ತಿದ್ದಾರೆ.
ಒಂದೆಡೆ, ತಮ್ಮ ಸಹೋದ್ಯೋಗಿಯ ಮೇಲಾದ ಕೃತ್ಯಕ್ಕೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಟ್ರೈನಿ ವೈದ್ಯರು. ಮತ್ತೊಂದೆಡೆ, ಯಾವುದಾದರೂ ತಲೆ ಉರುಳಿದರೆ ಸಾಕು ಅದನ್ನು ಹೇಗೆಲ್ಲ ರಾಜಕೀಯಕ್ಕೆ ಬಳಸಿಕೊಳ್ಳಬಹುದೆಂಬ ಲೆಕ್ಕಾಚಾರ ಹಾಕಿಕೊಂಡು ಸದಾ ಸಜ್ಜಾಗಿರುವ ಬಿಜೆಪಿ. ವೈದ್ಯೆ ಮೇಲಿನ ಅತ್ಯಾಚಾರದ ವಿರುದ್ಧದ ಆಕ್ರೋಶವನ್ನು ತನ್ನ ರಾಜಕೀಯ ದಾಳಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗರು, ಮಮತಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮಮತಾ ಸರ್ಕಾರದ ವಿರುದ್ಧ ತಂತ್ರ ಹೆಣೆಯುತ್ತಿದ್ದಾರೆ.
ಆರಂಭದಲ್ಲಿ ಮಮತಾ ಸರ್ಕಾರ, ಪೊಲೀಸ್ ಇಲಾಖೆ ವೈದ್ಯೆಯ ಅತ್ಯಾಚಾರ ಪ್ರಕರಣದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿತ್ತು. ಮಾತ್ರವಲ್ಲ, ಹಿರಿಯ ಪೊಲೀಸ್ ಅಧಿಕಾರಿಯೇ ಪ್ರಕರಣವನ್ನು ಮುಚ್ಚಿಹಾಕಲು ತಮಗೆ ಹಣ ನೀಡಲು ಬಂದಿದ್ದರೆಂದು ವೈದ್ಯೆಯ ಕುಟುಂಬ ಆರೋಪಿಸಿತ್ತು. ಜೊತೆಗೆ, ಪ್ರತಿಭಟನಾನಿರತ ವೈದ್ಯರ ಮೇಲೆ ದಾಳಿಗಳೂ ನಡೆದಿದ್ದವು. ಆ ದಾಳಿಗೂ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನವೇ ಕಾರಣವೆಂಬ ಆರೋಪವಿದೆ. ಈ ದಾಳಿ, ಆರೋಪಗಳು ಟ್ರೈನಿ ವೈದ್ಯರು ಮತ್ತಷ್ಟು ಪಟ್ಟು ಹಿಡಿಯುವಂತೆ ಮಾಡಿದೆ.
ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ಮೇಲೆ, ಗುರುವಾರ, ಪ್ರತಿಭಟನಾನಿರತ ವೈದ್ಯರನ್ನು ಮಮತಾ ಮಾತುಕತೆಗೆ ಕರೆದಿದ್ದರು. ಆದರೆ, ವೈದ್ಯರು ಮಮತಾ ಜೊತೆಗಿನ ಮಾತುಕತೆಯನ್ನು ತಿರಸ್ಕರಿಸಿ, ಸಭೆಯಲ್ಲಿ ಭಾಗಿಯಾಗಲಿಲ್ಲ. ಸುಮಾರು 2 ಗಂಟೆಗಳ ಕಾಲ ವೈದ್ಯರಿಗಾಗಿ ಕಾದು ಕುಳಿತಿದ್ದ ಮಮತಾ, ವೈದ್ಯರು ಬಾರದಿದ್ದಾಗ, ಅದೇ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ‘ತಮ್ಮನ್ನು ಕಾಯುವಂತೆ ಮಾಡಿದ್ದಕ್ಕಾಗಿ ವೈದ್ಯರನ್ನು ಕ್ಷಮಿಸುತ್ತೇನೆ. ಹಿರಿಯರಾಗಿ ಕಿರಿಯರನ್ನು ಕ್ಷಮಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದರು.
ಈ ಮಾತು, ನಿಜಕ್ಕೂ ಅವರ ಉದ್ಧಟತನವನ್ನು ಪ್ರದರ್ಶಿಸುತ್ತದೆ. ಹತ್ತಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಬೇಡಿಕೆಗಳಿಗೆ ಸ್ಪಂದಿಸಬೇಕಾದ್ದು, ಅವರ ಅಳಲು-ಆಕ್ರೋಶವನ್ನು ಕೇಳಬೇಕಾದ್ದು ಒಬ್ಬ ಜನಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿ ಮಮತಾರ ಕರ್ತವ್ಯ. ಆದರೆ, ಅವರು ಕ್ಷಮಿಸುವ ಮಾತನ್ನಾಡಿದ್ದು, ತಾನೇ ಮೇಲೂ, ತಾವು ಯಾರಿಗೂ ಬಗ್ಗುವುದಿಲ್ಲ. ಯಾರೂ ನನ್ನನ್ನು ಪ್ರಶ್ನಿಸುವಂತಿಲ್ಲ ಎಂಬಂತಹ ವರ್ತನೆಯನ್ನು ಸೂಚಿಸುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?
ಇಂತಹ ವರ್ತನೆಗೆ ಈಗಾಗಲೇ ಪ್ರಧಾನಿ ಮೋದಿ ಅವರು ದೇಶದಲ್ಲಿದ್ದಾರೆ. ಅಂತಹವರು ಮತ್ತೊಬ್ಬರು ಯಾವುದೇ ರಾಜ್ಯಕ್ಕಾಗಲೀ ಅಥವಾ ದೇಶಕ್ಕಾಗಲೀ ಅಗತ್ಯವಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಮೋದಿ ಅವರ ಅಹಂಅನ್ನು ಬಗ್ಗುಬಡಿಯಬೇಕು. ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಬೇಕೆಂದು ನಿರ್ಧರಿಸಿದ್ದ ದೇಶದ ಜನರು ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಅಹಂಅನ್ನು ಮುರಿದಿದ್ದಾರೆ. ಈಗ, ಮಮತಾ ಅವರಿಗೂ ಅಂತದ್ದೇ ಅಹಂ ತಲೆಗೇರಿದೆ ಎಂದೆನಿಸುತ್ತಿದೆ. ಅದನ್ನೂ ಅಲ್ಲಿನ ಜನರು ಮುರಿಯಬಹುದು. ಆ ದಿನಗಳು ದೂರವೇನಿಲ್ಲ.
ಕ್ಷಮೆಯ ಮಾತನಾಡಿದ ಮಮತಾ, ಅದೇ ವೇದಿಕೆಯಲ್ಲಿ ‘ಜನರ ಹಿತಾಸಕ್ತಿಗಾಗಿ ರಾಜೀನಾಮೆ ಕೊಡಲು ಸಿದ್ಧಳಿದ್ದೇನೆ. ವೈದ್ಯರು ನ್ಯಾಯವನ್ನು ಬಯಸುವುದಿಲ್ಲ. ನನ್ನ ರಾಜೀನಾಮೆಯನ್ನು ಬಯಸುತ್ತಾರೆಂದು ನಾನು ಭಾವಿಸಿದ್ದೇನೆ’ ಎಂದರು. ಅವರ ಈ ಹೇಳಿಕೆ ಅಂದೇ, ‘ಇದೊಂದು ರಾಜಕೀಯದ ಮಾಸ್ಟರ್ ದಾಳ’ ಎಂಬುದು ಸ್ಪಷ್ಟವಾಗಿತ್ತು. ಈ ನಡುವೆ, ಶನಿವಾರ ಅವರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿದರು. ‘ನಾನು ನಿಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆ ರೀತಿ ಕ್ರಮ ತೆಗೆದುಕೊಳ್ಳಲು ಇದು ಉತ್ತರ ಪ್ರದೇಶವಲ್ಲ’ ಎಂದರು. ಅದೇನೋ ಸತ್ಯವೇ, ಪ್ರತಿಭಟನಾನಿರತರ ಮೇಲೆ ಕ್ರಮ ಕೈಗೊಳ್ಳುವುದು, ಪ್ರತಿಭಟನೆಗಳನ್ನು ಹತ್ತಿಕ್ಕುವುದು, ಪ್ರತಿಭಟನಾಕಾರರನ್ನು ಜೈಲಿಗಟ್ಟುವುದು ಬಿಜೆಪಿ ಮತ್ತು ಬಿಜೆಪಿ ಸರ್ಕಾರಗಳ ಫ್ಯಾಸಿಸ್ಟ್ ಧೋರಣೆ. ಅಂತಹ ಕ್ರೌರ್ಯವನ್ನು ಉಳಿದ ಪಕ್ಷಗಳು ತೋರದೇ ಇರಬಹುದು. ಆದರೂ, ಅಧಿಕಾರದ ಅಹಮ್ಮಿಕೆಯಂತೂ ಎಲ್ಲ ಸರ್ಕಾರಗಳಲ್ಲೂ ಇದೆ. ಅದಕ್ಕೆ ಮಮತಾ ಕೂಡ ಹೊರತಾಗಿಲ್ಲ.
ಅಂದಹಾಗೆ, ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಮಮತಾ ರಾಜೀನಾಮೆ ನೀಡಬೇಕೆಂದು ಎಲ್ಲಿಯೂ ಒತ್ತಾಯಿಸಿಲ್ಲ. ಅವರ ಬೇಡಿಕೆಗಳಲ್ಲೂ ಮಮತಾ ರಾಜೀನಾಮೆ ಇಲ್ಲ. ವೈದ್ಯರ ಬೇಡಿಕೆಗಳಿರುವುದು ಐದು– 1. ಅತ್ಯಾಚಾರ-ಕೊಲೆಗೀಡಾದ ಸಹೋದ್ಯೋಗಿಗೆ ನ್ಯಾಯ ಒದಗಿಸಬೇಕು. 2. ಆರ್.ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. 3. ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು. 4. ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಸ್ಥಳದಲ್ಲಿ ಭದ್ರತೆ ಒದಗಿಸಬೇಕು. 5. ಆರೋಗ್ಯ ಸೌಲಭ್ಯಗಳಲ್ಲಿರುವ ‘ಬೆದರಿಕೆ ಸಂಸ್ಕೃತಿ’ಯನ್ನು ಕೊನೆಗಾಣಿಸಬೇಕು.
ಹಾಗೆನೋಡಿದರೆ, ಟ್ರೈನಿ ವೈದ್ಯರ ಬೇಡಿಕೆಗಳಲ್ಲಿ ಸರ್ಕಾರ ಈಡೇರಿಸಲು ಸಾಧ್ಯವಾಗದ ಅಂಶಗಳೇನೂ ಇಲ್ಲ. ಅವರು ಕೇಳುತ್ತಿರುವುದು ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯನ್ನು ಮಾತ್ರ. ವೈದ್ಯರ ಈ ಬೇಡಿಕೆಗಳಿಗೂ, ಮಮತಾ ರಾಜೀನಾಮೆಗೂ ಅಕ್ಷರಶಃ ಸಂಬಂಧವಿಲ್ಲ. ಬಿಜೆಪಿ ಮಾತ್ರವೇ ರಾಜೀನಾಮೆ ಬಗ್ಗೆ ಮಾತನಾಡಿದೆ. ಅದನ್ನೇ ಮುಂದಿಟ್ಟುಕೊಂಡು ಮಮತಾ ವೈದ್ಯರ ಬೇಡಿಕೆಗಳನ್ನು ನಿರ್ಲಕ್ಷಿಸಿ, ರಾಜೀನಾಮೆಯ ಮಾತನಾಡುತ್ತಿದ್ದಾರೆ.
ಮಮತಾ ಮಾತುಗಳು, ಪ್ರತಿಭಟನಾನಿರತ ವೈದ್ಯರು ಮತ್ತು ಆಡಳಿತದ ನಡುವೆ ಅಪನಂಬಿಕೆ ಬೆಳೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ನಾಗರಿಕ ಸಮಾಜದಿಂದ ಗಮನಾರ್ಹ ಬೆಂಬಲ ಕ್ಷೀಣಿಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಮತಾರನ್ನು ಬೆಂಬಲಿಸಿದ್ದವರು ಈಗ, ದೀದಿಯಿಂದ ವಿಮುಖರಾಗುತ್ತಿದ್ದಾರೆ. ಮಮತಾ ವೈದ್ಯರ ಸಮಸ್ಯೆಯನ್ನು ನಿರ್ವಹಿಸಲು, ಪರಿಹರಿಸಲು ಹೆಣಗಾಡುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ ಮಮತಾರ ಮಾತುಗಳು, ಅವರ ವರ್ತನೆಗಳು, ಅವರು ತೋರಿಸುತ್ತಿರುವ ಧೋರಣೆಗಳು ‘ಬಂಗಾಳದ ದೀದಿ’ಯಾಗಿ ಅವರ ಗೌರವ ಮತ್ತು ಘನತೆಗೆ ತಕ್ಕುದಲ್ಲ. ರಾಜೀನಾಮೆ ಎಂಬ ಭಾವನಾತ್ಮಕ ಮತ್ತು ರಾಜಕೀಯ ಅಟಾಟೋಪಗಳನ್ನು ಬದಿಗಿಟ್ಟು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವೈದ್ಯೆಯ ಮೇಲೆ ಕ್ರೌರ್ಯ ಮೆರೆದ ತಪ್ಪಿತಸ್ಥರನ್ನು ಬಂಧಿಸಬೇಕು. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ವೈದ್ಯರ ಬೇಡಿಕೆಗಳನ್ನು ಈಡೇರಿಸಬೇಕು.
