ಶಾಲೆಯಿಂದ ಮರಳುತ್ತಿದ್ದ ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. ಎರಡು ದಿನಗಳ ಹಿಂದಷ್ಟೆ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈಗ ಮತ್ತೆ ದುರುಳರು ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
ತನ್ನ ಮಗಳು ಶಾಲೆಯಿಂದ ಮನೆಗೆ ಬರದ ಕಾರಣ ಅಪ್ರಾಪ್ತರ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ನಡೆಸಿದಾಗ ಬಾಲಕಿ ಮನೆಯ ಬಳಿಯೇ ಕಂಡುಬಂದಿದ್ದಾಳೆ. ಈ ವೇಳೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
“ಐದನೇ ತರಗತಿಯ ವಿದ್ಯಾರ್ಥಿಯು ಶಾಲೆಯಿಂದ ಮನೆಗೆ ಹಿಂತಿರುಗಿಲ್ಲ ಎಂದು ನಮಗೆ ನಿನ್ನೆ ಮಾಹಿತಿ ಬಂದಿತ್ತು. ಅದರಂತೆ, ನಾವು ತನಿಖೆಯನ್ನು ಪ್ರಾರಂಭಿಸಿದ್ದೇವು. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಾಲಕಿಯನ್ನು ಅವಳ ಮನೆ ಬಳಿ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಅದೇ ಪ್ರದೇಶದ 22 ವರ್ಷದ ಯುವಕ ಎಂದು ಗುರುತಿಸಲಾಗಿದೆ. ನಾವು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಇಬ್ಬರು ಡ್ಯಾನ್ಸರ್‌ಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ; 8 ಮಂದಿ ಕಾಮುಕರ ಬಂಧನ
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೋ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾವುದೇ ಬಂಧನವಾಗಿಲ್ಲ ಎಂದು ವರದಿಯಾಗಿದೆ.
ಎರಡು ದಿನಗಳಲ್ಲಿ ನಡೆದ ಎರಡನೇ ಸಾಮೂಹಿಕ ಅತ್ಯಾಚಾರ ಘಟನೆ ಇದಾಗಿದೆ. ಉತ್ತರ ತ್ರಿಪುರಾ ಜಿಲ್ಲೆಯಲ್ಲಿ ಇಬ್ಬರು 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಬಾಲಕಿಗೆ ಗಂಭೀರ ಗಾಯಗಳಾಗಿದ್ದು ಧರ್ಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಗುರುವಾರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾಮುಕರು ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಉತ್ತರ ತ್ರಿಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಾವುಪಾದ ಚಕ್ರವರ್ತಿ ತಿಳಿಸಿದ್ದಾರೆ.
