ಅಕ್ರಮ, ಭ್ರಷ್ಟಾಚಾರ ತಡೆಯಲು ಮಾಹಿತಿ ಹಕ್ಕು ಅಧಿನಿಯಮದಡಿಯೂ ಮಾಹಿತಿ ದೊರೆಯದೇ ಹೋಗಿರುವುದರಿಂದ ಅರ್ಜಿದಾರರಿಗೆ ನ್ಯಾಯ ಒದಗಿಸಲು ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯಕ್ಷ ಹೇಮಂತ ನಾಗರಾಜ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಜಾರಿಗೊಂಡ ನಂತರ ಅನೇಕ ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬಂದಿವೆ. ಇತ್ತೀಚಿಗೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಅರ್ಜಿ ಸಲ್ಲಿಸಿದರೂ, ಸಮರ್ಪಕವಾದ ಮಾಹಿತಿ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಸಂಘಟಿಕವಾಗಿ ಹೋರಾಟ ನಡೆಸುವ ಮೂಲಕ ಜನರ ತೆರಿಗೆ ಹಣದ ದುರ್ಬಳಕೆ ತಡೆಯಬೇಕಿದೆ. ಸಾರ್ವಜನಿಕರು ಸಂಘಟನೆ ಬೆಂಬಲಿಸುವ ಮೂಲಕ ಮಾಹಿತಿ ಹಕ್ಕು ಅಧಿನಿಯಮದ ಸಮರ್ಪಕ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ಕಳೆದ ಒಂದು ವರ್ಷದಿಂದ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದು 9 ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ರಚಿಸಲಾಗಿದೆ. 10ನೇ ಜಿಲ್ಲೆಯಾಗಿ ರಾಯಚೂರು ಘಟಕ ರಚಿಸಲಾಗಿದೆ. ಸಂಘಟನೆಯಲ್ಲಿರುವವರು ಕಾರ್ಯಕರ್ತರಲ್ಲ. ಎಲ್ಲರೂ ಸಂಘಟಿತ ಪ್ರಯತ್ನದ ಮೂಲಕ ನ್ಯಾಯ ಒದಗಿಸುವ ಪ್ರಯತ್ನ ಮಾಡಲು ಉದ್ದೇಶಿಸಲಾಗಿದೆ. ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ. ವೃತ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಬ್ಲ್ಯಾಕ್‌ಮೆಲ್ ಮಾಡುತ್ತಿರುವ ದೂರುಗಳು ಇವೆ. ಆದರೆ ಸಂಘಟನೆಯಿಂದ ಅರ್ಜಿದಾರರಿಗೆ ನ್ಯಾಯ ಒದಗಿಸಲು ಶ್ರಮಿಸಲಾಗುತ್ತದೆ ಎಂದರು.
ಇದನ್ನು ಓದಿದ್ದೀರಾ? ಕರಾವಳಿ | ಸಂಘಪರಿವಾರದ ವಿವಾದದ ನಡುವೆಯೂ ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂಗಳು
ಈ ಸಂದರ್ಭದಲ್ಲಿ ಸಂಘಟನೆಯ ರಾಯಚೂರು ಜಿಲ್ಲಾಧ್ಯಕ್ಷ ಈರಣ್ಣ ಯಾಪಲದಿನ್ನಿ, ಪ್ರಧಾನ ಕಾರ್ಯದರ್ಶಿ ಸಬ್ಜಲಿ ನೀರಮಾನವಿ, ಗೌರವಾಧ್ಯಕ್ಷ ಮಹಾದೇವಪ್ಪ, ಜೀಲಾನಿ ಪಾಷಾ, ಹನುಮಂತ ಮೇಟಿ, ದುರ್ಗೇಶ್ ಇನ್ನಿತರರು ಉಪಸ್ಥಿತರಿದ್ದರು.
