ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ ಬಹುಮಾನ ನೀಡುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್‌ವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗಾಗಿ ಅವರ ನಾಲಗೆ ಕತ್ತರಿಸುವಂತೆ ಸಿಎಂ ಏಕನಾಥ್ ಶಿಂಧೆ ಬಣದ ಶಾಸಕ ಹೇಳಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ಮಹಾರಾಷ್ಟ್ರದಲ್ಲಿ ಶಿಂಧೆ ನೇತೃತ್ವದ ಸರ್ಕಾರದ ಪಾಲುದಾರನಾಗಿರುವ ಬಿಜೆಪಿ, ಈ ಹೇಳಿಕೆಯನ್ನು ಅನುಮೋದಿಸುವುದಿಲ್ಲ ಎಂದು ಹೇಳಿದೆ.
“ವಿದೇಶದಲ್ಲಿ ಇದ್ದಾಗ, ಭಾರತದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ತಾವು ರದ್ದುಗೊಳಿಸಲು ಬಯಸಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಕಾಂಗ್ರೆಸ್‌ನ ನೈಜ ಮುಖವನ್ನು ಬಯಲುಗೊಳಿಸಿದ್ದಾರೆ” ಎಂದು ಸುದ್ದಿಗಾರರ ಜತೆ ಮಾತನಾಡುವ ವೇಳೆ ಸಂಜಯ್ ಗಾಯಕ್‌ವಾಡ್ ಟೀಕಿಸಿದ್ದಾರೆ.
“ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಿದ್ದರು. ಇದು ಮೀಸಲಾತಿಯನ್ನು ವಿರೋಧಿಸುವ ಅವರ ಅಂತರ್ಗತ ಮನಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ ನಾನು 11 ಲಕ್ಷ ರೂ ಬಹುಮಾನ ನೀಡುತ್ತೇನೆ” ಎಂದು ಗಾಯಕ್‌ವಾಡ್ ಘೋಷಿಸಿದ್ದಾರೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹರಿಯಾಣ ಚುನಾವಣೆ | ನಾನೇ ಅತ್ಯಂತ ಹಿರಿಯ ಶಾಸಕ; ಬಿಜೆಪಿ ಗೆದ್ದರೆ ಸಿಎಂ ಹುದ್ದೆಗೆ ಹಕ್ಕು ಮಂಡನೆ: ಅನಿಲ್ ವಿಜ್
“ರಾಹುಲ್ ಗಾಂಧಿ ಅವರ ಹೇಳಿಕೆಗಳು ಜನರಿಗೆ ಮಾಡಿರುವ ಅತಿ ದೊಡ್ಡ ವಿಶ್ವಾಸಘಾತುಕತನವಾಗಿದೆ. ಮರಾಠರು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ. ಆದರೆ ಅದಕ್ಕೂ ಮುನ್ನವೇ ಮೀಸಲಾತಿ ಲಾಭವನ್ನು ಮುಗಿಸುವ ಬಗ್ಗೆ ಗಾಂಧಿ ಮಾತನಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಅಂತರ ಕಾಯ್ದುಕೊಂಡ ಬಿಜೆಪಿ
ಗಾಯಕ್‌ವಾಡ್ ಅವರ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. “ಗಾಯಕ್‌ವಾಡ್ ಅವರ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ ಅಥವಾ ಅನುಮೋದಿಸುವುದಿಲ್ಲ. ಆದರೆ, ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರು ಮೀಸಲಾತಿಯು ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತದೆ ಎಂದು ವಿರೋಧ ವ್ಯಕ್ತಪಡಿಸಿದ್ದನ್ನು ನಾವು ಮರೆಯಲು ಸಾಧ್ಯವಿಲ್ಲ” ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಂಕುಲೆ ಹೇಳಿದ್ದಾರೆ.
ಕಾಂಗ್ರೆಸ್ ಆಕ್ರೋಶ
“ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಬದುಕಲು ಸಂಜಯ್ ಗಾಯಕ್‌ವಾಡ್ ಅವರಿಗೆ ಯೋಗ್ಯತೆ ಇಲ್ಲ. ಗಾಯಕ್‌ವಾಡ್ ಅವರ ವಿರುದ್ಧ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲಿಸುತ್ತಾರೆಯೇ ಎನ್ನುವುದನ್ನು ನೋಡಬೇಕು. ಇಂತಹ ಜನರು ರಾಜ್ಯ ರಾಜಕಾರಣವನ್ನು ಹಾಳು ಮಾಡಿದ್ದಾರೆ” ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಕಿಡಿಕಾರಿದ್ದಾರೆ.
