ಮಹಿಳೆಯರ ಸಭೆಯಲ್ಲೂ ಪುರುಷರದ್ದೇ ದರ್ಬಾರ್;‌ ಸ್ಯಾಂಡಲ್‌ವುಡ್‌ನಲ್ಲಿ ಇಲ್ವೇ ಇಲ್ವಂತೆ ‘ಕಾಸ್ಟಿಂಗ್‌ ಕೌಚ್’!

Date:

Advertisements

ಕೇರಳದ ಹೇಮಾ ಕಮಿಟಿ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲೂ ಕಮಿಟಿ ರಚನೆಯಾಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆ ಸಂಬಂಧ ಫಿಲಂ ಚೇಂಬರ್‌ನಲ್ಲಿ ಇಂದು ಸಭೆ ನಡೆಯಿತು. ಮಹಿಳಾ ಆಯೋಗದ ಅಧ್ಯಕ್ಷರೂ ಇದ್ದ ಈ ಸಭೆ ‘ಕಮಿಟಿ ರಚನೆ ಮಾಡೋದು ಬೇಡ’ ಎಂಬುದನ್ನು ಹೇಳಲು ಕರೆದಂತಿತ್ತು! ಮಹಿಳೆಯರಿಗಿಂತ ಪುರುಷರ ಧ್ವನಿಯೇ ಜೋರಾಗಿತ್ತು.

ಕಳೆದ ತಿಂಗಳು ಕೇರಳದ ಸಿನಿಮಾ ರಂಗದ ಮಹಿಳೆಯರ ಸ್ಥಿತಿಗತಿ ಕುರಿತ ಹೇಮಾ ಕಮಿಟಿ ವರದಿ ಬಹಿರಂಗವಾದ ನಂತರ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರರಂಗದ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ಹಂಚಿಕೊಂಡಿದ್ದರು. ಐದು ವರ್ಷಗಳ ಹಿಂದೆ ಸುದ್ದಿ ಮಾಡಿದ್ದ MeToo ಅಭಿಯಾನ ಮತ್ತೆ ಅಲ್ಲಲ್ಲಿ ಶುರುವಾಗಿತ್ತು. ಕೇರಳದ ಮಾದರಿಯಲ್ಲಿಯೇ ನಮ್ಮಲ್ಲೂ ಕಮಿಟಿ ರಚನೆಯಾಗಬೇಕು ಎಂದು ತಮಿಳು, ತೆಲುಗು ಚಿತ್ರರಂಗದಲ್ಲಿ ಕೆಲವು ನಟಿಯರು ಧ್ವನಿ ಎತ್ತಿದ್ದರು. ಆದರೆ ಕರ್ನಾಟಕದಲ್ಲಿ ಸಿನಿಮಾ ರಂಗದ ಯಾರೊಬ್ಬರೂ ಅಂತಹ ಬೇಡಿಕೆ ಇಟ್ಟಿರಲಿಲ್ಲ. ಅಂತಹ ಸಂದರ್ಭದಲ್ಲಿ ‘ಫೈರ್‌’ (Film Industry Righte and Equality) ಸದಸ್ಯರು ಮಹಿಳಾ ಆಯೋಗ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹೇಮಾ ಕಮಿಟಿ ರೀತಿಯಲ್ಲಿಯೇ ಸ್ಯಾಂಡಲ್‌ವುಡ್‌ನಲ್ಲೂ ನಟಿಯರ ಸ್ಥಿತಿಗತಿ ಅಧ್ಯಯನ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿ ಆಧರಿಸಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು ಫಿಲ್ಂ ಚೇಂಬರ್‌ಗೆ ಪತ್ರ ಬರೆದು ಈ ಬಗ್ಗೆ ಸಭೆ ಕರೆಯುವಂತೆ ತಿಳಿಸಿದ್ದರು. ಆ ಪ್ರಕಾರ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ನೇತೃತ್ವದಲ್ಲಿ ಸೆ.16ರಂದು ಸಭೆ ನಡೆಯಿತು.

ತಮಾಷೆಯೆಂದರೆ ಈ ಸಭೆಗೆ ಕೆಲವೇ ಕೆಲವು ಹಿರಿಯ ನಟಿಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಹದಿನೈದು ಇಪ್ಪತ್ತು ಮಹಿಳೆಯರು ಮಾತ್ರ ಸಭೆಯಲ್ಲಿದ್ದರು. ಉಳಿದಂತೆ ನಿರ್ಮಾಪಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಭೆ ಕರೆದಿರುವುದು ಮಹಿಳೆಯರ ವಿಚಾರವಾಗಿ. ಅಲ್ಲಿ ಮಹಿಳೆಯರು ಅಂತಹದೊಂದು ಕಮಿಟಿ ಅಧ್ಯಯನ ನಡೆಸುವ ಅಗತ್ಯ ಇದೆಯೇ ಇಲ್ಲವೇ ಎಂಬುದನ್ನು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲೆಂದೇ ಮಹಿಳಾ ಆಯೋಗ ಸಭೆ ಕರೆಯುವಂತೆ ಸೂಚಿಸಿತ್ತು. ಆದರೆ ಮಹಿಳಾ ಆಯೋಗದ ಅಧ್ಯಕ್ಷರೇ ದಂಗಾಗುವಂತೆ ಅಲ್ಲಿ ಪುರುಷರ ವರ್ತನೆ ಇತ್ತು. ಕಮಿಟಿ ಬೇಡ ಎಂದು ಹೇಳಲು ಸಭೆ ಕರೆದಂತಿತ್ತು.

Advertisements

ಕನ್ನಡ ಚಿತ್ರರಂಗದಲ್ಲಿ ಅಂತಹ ಕಿರುಕುಳ ಇಲ್ಲ. ಎಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ. ಸುಮ್ಮನೇ ಯಾರೋ ಮೀಟೂ ಅಂತಾರೆ, ಅವರಿಗೆಲ್ಲ ಕೆಲಸ ಇಲ್ಲ ಎಂದು ಸಭೆಗೆ ಕೆಲ ದಿನ ಇರುವಾಗಲೇ ಸಾ ರಾ ಗೋವಿಂದು ಮತ್ತು ಕೆ ಮಂಜು ಹೆಗಲು ಮುಟ್ಟಿ ನೋಡಿಕೊಂಡಿದ್ದರು. ಸಿ ಎಂ ಗೆ ಮನವಿ ಕೊಟ್ಟ ಫೈರ್‌ ಸಂಘಟನೆಯ ಸದಸ್ಯರ ಬಗ್ಗೆ ಕೀಳಾಗಿ ಮಾತನಾಡಿದ್ದರು ಗೋವಿಂದು. ಚೇತನ್‌ ಬಗ್ಗೆ ಏನೇನೋ ಕ್ಷುಲ್ಲಕ ಆರೋಪ ಮಾಡಿದ್ದರು. ಇಂದಿನ ಸಭೆಯಲ್ಲೂ ಅವರ ಅಸಮಾಧಾನ, ದಬ್ಬಾಳಿಕೆಯ ಪ್ರವೃತ್ತಿ ಮುಂದುವರಿದಿತ್ತು. ಫೈರ್‌ ಸದಸ್ಯೆ ನೀತು ಅವರು ಮಾತನಾಡಲು ನಿಂತಾಗ “ನೀನೇನಮ್ಮ ಮಾತಾಡ್ತಿ, ಕೂತ್ಕೊ” ಎಂದು ಸುಮ್ಮನಾಗಿಸುವ ಪ್ರಯತ್ನ ಹಿರಿಯ ನಿರ್ಮಾಪಕ ಸಾ ರಾ ಗೋವಿಂದು ಮಾಡಿದ್ರು. ಮಹಿಳಾ ಸುರಕ್ಷತೆಯ ಪ್ರಶ್ನೆ ಬಂದಾಗ ಅದರಿಂದ ಸಿನಿಮಾಗೆ ಹೇಗೆ ತೊಂದರೆ ಆಗುತ್ತೆ ಎಂದು ಸಭೆಯಿಂದ ಹೊರಬಂದ ನಂತರ ನೀತು ಅಸಮಾಧಾನ ತೋಡಿಕೊಂಡರು. ಸಿನಿಮಾ ರಂಗದ ಮಹಿಳೆಯರನ್ನು ಮಹಿಳಾ ಆಯೋಗದ ಅಧ್ಯಕ್ಷರ ಮುಂದೆಯೇ ಮಾತನಾಡಲೂ ಬಿಡದ ಪುರುಷರ ದಬ್ಬಾಳಿಕೆ ನೋಡಿದರೆ ಕಮಿಟಿ ರಚನೆಯ ಅಗತ್ಯ ಬಹಳ ಇದೆ ಅನ್ಸುತ್ತೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗುತ್ತಿಲ್ಲ. ಯಾರೂ ಶೋಷಣೆ ಮಾಡುತ್ತಿಲ್ಲ. ಎಲ್ಲರೂ ಸಜ್ಜನರು ಎಂದಾದರೆ ಒಂದು ಕಮಿಟಿ ರಚನೆ ಮಾಡಿ ವರದಿ ಕೊಡಲಿ ಎಂದು ಮುಕ್ತ ಮನಸ್ಸಿನಿಂದ ಯಾರೊಬ್ಬರೂ ಹೇಳುತ್ತಿಲ್ಲ ಯಾಕೆ? ಮಹಿಳೆಯರ ನೋವುಗಳೇನು ಎಂದು ಆಲಿಸಲು ಕಮಿಟಿ ರಚನೆಯಾದರೆ ಸಿನಿಮಾ ಉದ್ಯಮ ಮುಳುಗಿ ಹೋಗುತ್ತೆ ಎಂದು ಬ್ಲ್ಯಾಕ್‌ಮೇಲ್‌ ಮಾಡುವ ನಿರ್ಮಾಪಕರ ಬಗ್ಗೆ ನಿಜಕ್ಕೂ ಅನುಮಾನ ಬರುತ್ತಿದೆ.

ಕೆಲ ನಿರ್ಮಾಪಕರು, ಕೇರಳ ಮಾದರಿಯಲ್ಲಿ ಕಮಿಟಿ ರಚನೆ ಮಾಡಿದ್ರೆ ಮಹಿಳೆಯರಿಗೆ ಅವಕಾಶ ಸಿಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಲಿದೆ, ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತೆ, ಸಿನಿಮಾಗೆ ತೊಂದರೆ ಆಗುತ್ತೆ ಅಂದ್ರೆ ಮತ್ತೆ ಕೆಲವರ ಪ್ರಕಾರ ಆರ್ಥಿಕ ಸಮಸ್ಯೆಗೆ ಕಾರಣವಾಗಲಿದೆಯಂತೆ! ಒಟ್ಟಿನಲ್ಲಿ ಕಮಿಟಿ ರಚನೆಯಾಗಿ ತಮ್ಮ ಹುಳುಕುಗಳು ಬಯಲಾಗಿ, ಕೋರ್ಟ್‌ ಕೇಸು ಅಂತ ಮುಖ ಮುಚ್ಚಿಕೊಳ್ಳುವ ಸಂದರ್ಭ ಬರಬಹುದು ಎಂದು ಅವರೆಲ್ಲ ಭಯಗೊಂಡಂತೆ ಕಾಣುತ್ತಿದೆ.

film chember

ಇಂದಿನ ಸಭೆಯ ಬಗ್ಗೆ ವಾಣಿಜ್ಯ ಮಂಡಳಿಯ ಸದಸ್ಯೆ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್‌ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿದರು. “ಇದು ಮಹಿಳೆಯರ ಕುರಿತಾದ ಸಭೆ. ಆದರೆ, ಈ ಪ್ರಮುಖ ಸಭೆಗೆ ವಾಣಿಜ್ಯ ಮಂಡಳಿಯವರು ಕಾಟಾಚಾರಕ್ಕೆಂದು ಕೆಲವು ನಾಯಕಿಯರನ್ನು ಮಾತ್ರ ಆಹ್ವಾನಿಸಿದ್ದರು. ಚಿತ್ರರಂಗದ ಮಹಿಳೆಯರು ಅಂದ್ರೆ ನಾಯಕಿಯರು ಮಾತ್ರ ಎಂದು ಅವರು ಭಾವಿಸಿರಬೇಕು. ಆದರೆ, ಅದರಲ್ಲಿ ನಿರ್ಮಾಪಕಿಯರು, ನಿರ್ದೇಶಕಿಯರು, ಡಾನ್ಸರ್ಸ್‌, ಡಬ್ಬಿಂಗ್‌ ಕಲಾವಿದೆಯರು, ಪೋಷಕ ಕಲಾವಿದೆಯರು ಸೇರುತ್ತಾರೆ. ಅವರೆಲ್ಲರನ್ನೂ ಕರೆಯದೇ ಪುರುಷರೇ ಹೆಚ್ಚು ಇದ್ದರು. ನನಗೂ ಆಹ್ವಾನ ಇರಲಿಲ್ಲ. ನಾನೇ ಹೋದೆ. “ಫೈರ್‌ ನವರಿಗೆ ಮಾತನಾಡಲು ಬಿಡಬೇಡಿ” ಎಂದು ಕೆಲವು ನಿರ್ಮಾಪಕರು ಆಕ್ಷೇಪಿಸಿದರು. ನಾನು ಮಂಡಳಿಯ ಸದಸ್ಯೆಯಾಗಿ ಹೋಗಿದ್ದೆ. ಅಲ್ಲಿ ಕೆಲವು ನಟಿಯರೂ ಕಮಿಟಿ ಬೇಡ ಎನ್ನುವ ಧಾಟಿಯಲ್ಲಿಯೇ ಮಾತನಾಡಿದ್ರು. ನಮಗೇನೂ ತೊಂದರೆ ಆಗಿಲ್ಲ, ಇಲ್ಲಿ ಪುರುಷರು- ಮಹಿಳೆಯರು ಎಂಬ ಭೇದ ಇಲ್ಲ ಅಂತೆಲ್ಲ ಮಾತಾಡಿದ್ರು. ಅವರ ಮಾತುಗಳನ್ನು ಕೇಳಿದ್ರೆ ಈ ದೇಶದಲ್ಲಿ ಮೇಲ್ವರ್ಗ -ಕೆಳವರ್ಗ ಎಂಬುದೂ ಇಲ್ಲ ಎಂಬಂತಿತ್ತು. ಅವರಿಗೆ ಕಿರುಕುಳ ಆಗಿಲ್ಲ ಅಂದ್ರೆ ಯಾರಿಗೂ ಆಗಿಲ್ಲ ಎಂಬ ನಿರ್ಧಾರಕ್ಕೆ ಬರಲು ಆಗುತ್ತಾ” ಎಂಬುದು ಕವಿತಾ ಅವರ ಪ್ರಶ್ನೆ.

kavita lankesh
ನಿರ್ದೇಶಕಿ ಕವಿತಾ ಲಂಕೇಶ್

ಇದುವರೆಗೆ ವಾಣಿಜ್ಯ ಮಂಡಳಿಯಲ್ಲಿ POSH Commitee (ಲೈಂಗಿಕ ಕಿರುಕುಳ ತಡೆ ಸಮಿತಿ) ಇರಲಿಲ್ಲ. ಇನ್ನು ಒಂದು ವಾರದಲ್ಲಿ ಕಮಿಟಿ ರಚನೆ ಮಾಡಬೇಕು ಎಂದು ಮಹಿಳಾ ಆಯೋಗ ಸೂಚಿಸಿದೆ. ಅದಕ್ಕೆ ವಾಣಿಜ್ಯ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.

ಕಾಸ್ಟಿಂಗ್‌ ಕೌಚ್‌ ಎಂಬುದು ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುವ ಸುಲಭ ವಿಧಾನ. ಅವಕಾಶಕ್ಕಾಗಿ ಆಮಿಷ ಒಡ್ಡಿ ಅವರ ಇಚ್ಛೆಗೆ ವಿರುದ್ಧವಾಗಿ ತಮ್ಮ ಲೈಂಗಿಕ ತೆವಲಿಗೆ ಬಳಸಿಕೊಳ್ಳುವುದು, ಒಪ್ಪದಿದ್ದರೆ ಅವಕಾಶ ನಿರಾಕರಿಸುವುದು, ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಚಾರಿತ್ರ್ಯಹರಣ ಮಾಡುವುದು ಇವೆಲ್ಲ ಎಲ್ಲಾ ಚಿತ್ರರಂಗದಲ್ಲಿ ನಡೆಯುತ್ತಿರುವ ಬಹಿರಂಗ ಸತ್ಯ. ಕಾಸ್ಟಿಂಗ್‌ ಕೌಚ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಲ್ಲ ಎಂದು ಹೇಳಿದರೆ ಅದಕ್ಕಿಂತ ದೊಡ್ಡ ಜೋಕ್‌ ಬೇರೆ ಇರಲಾರದು. ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ಕಿರಿಯ ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೂ ಇಲ್ಲಿ ಅಂತಹದ್ದು ನಡೆದೇ ಇಲ್ಲ ಎನ್ನುವ ಚಿತ್ರರಂಗದ ಪುರುಷರಿಗೆ‌, ಮಹಿಳೆಯರ ಘನತೆಯ ಬಗ್ಗೆ ಗೌರವ ಇಲ್ಲ ಎಂದೇ ಅರ್ಥ. “ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡರು” ಎಂಬುದು ಸ್ಯಾಂಡಲ್‌ವುಡ್‌ನ ಪುರುಷರಿಗೆಂದೇ ಹೇಳಿದಂತಿದೆ.

ಶ್ರುತಿ ಹರಿಹರನ್‌, ಚಿತ್ರಾಲ್‌, ನೀತು ಶೆಟ್ಟಿ ಸೇರಿದಂತೆ ಹಲವರು ಈಗಾಗಲೇ ಅಲ್ಲಲ್ಲಿ ಕಿರುಕುಳದ ಆರೋಪ ಮಾಡಿದ್ದಾರೆ. ಅವರೆಲ್ಲ ಆ ಕ್ಷಣವೇ ಯಾಕೆ ಹೇಳಿಲ್ಲ ಅಂದ್ರೆ, ಅವರ ದೂರನ್ನು ಆಲಿಸಲು ಯಾವುದೇ ಒಂದು ಫೋರಂ ಇಲ್ಲ. ಕಲಾವಿದೆಯರು ಸರಿಯಾದ ಒಂದು ಸಂಘಟನೆಯನ್ನೂ ಮಾಡಿಕೊಂಡಿಲ್ಲ. ಆಂತರಿಕ ದೂರು ಸಮಿತಿ ಇದ್ದರೆ ಹೇಳಿಕೊಳ್ಳುತ್ತಿದ್ದರು. ಅಂತಹದೊಂದು ವ್ಯವಸ್ಥೆ ಸಿನಿಮಾ ರಂಗದಲ್ಲಿ ಇಲ್ಲ ಎಂಬುದೇ ಬಹುದೊಡ್ಡ ಲೋಪ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X