ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಹಮ್ಮಿಕೊಂಡಿರುವ ‘ಪ್ರವಾದಿ ಮಹಮ್ಮುದ್(ಸ) ಮಹಾನ್ ಚಾರಿತ್ರ್ಯವಂತ -ಸೀರತ್ ಅಭಿಯಾನ’ದ ಪ್ರಯುಕ್ತ ಇಂದು ಉಡುಪಿಯ ಜಾಮಿಯ ಮಸೀದಿ ಆವರಣದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು ಹಾಗೂ ಜೀವ ಸಂಜೀವಿನಿ ಉಡುಪಿ ಇವರ ಸಹಯೋಗದೊಂದಿಗೆ
ಎಸ್ ಐ ಓ ಉಡುಪಿ ಜಿಲ್ಲೆ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಗರ್ಲ್ಸ್ ಇಸಾಮಿಕ್ ಆರ್ಗನೈಸೇಶನ್ ಹಾಗೂ ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಸಂಯೋಜನೆಯೊಂದಿಗೆ ಈ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸುಮಾರು 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಸ್ತೂರಿ ಬಾ ಮೆಡಿಕಲ್ ಕಾಲೇಜಿನ ಡಾ ಮಹಮ್ಮದ್ ಅಝೀಝ್ ಮಾತನಾಡಿ, “ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ಪ್ರತಿನಿತ್ಯ ಸಾವಿರಾರು ಜನರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಇದೆ. ಇದನ್ನು ಮನಗಂಡು ಸಂಘಟಕರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಉತ್ತಮ ಕಾರ್ಯವಾಗಿದೆ” ಎಂದು ಶ್ಲಾಘಿಸಿದರು.
ಶಿಬಿರದಲ್ಲಿ ಎಸ್ ಐ ಓ ರಾಜ್ಯ ಕಾರ್ಯದರ್ಶಿ ನಾಸೀರ್ ಹೂಡೆ, ಉಡುಪಿ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ, ಸಾಲಿಡಾರಿಟಿ ಯೂಥ್ ಮೂವ್ ಮೆಂಟ್ ಉಡುಪಿ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರಬೆಟ್ಟು, ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಉಡುಪಿ ಜಿಲ್ಲಾ ಸಂಚಾಲಕ ಬಿಲಾಲ್ ಮಲ್ಪೆ, ಅನ್ವರ್ ಅಲಿ ಕಾಪು, ಜಿಐಓ ಜಿಲ್ಲಾಧ್ಯಕ್ಷೆ ನುಝ್ಲಾ ಫಾತಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
