ತುಂಗಭದ್ರಾ ಎಡದಂಡೆ ಉಪ ಕಾಲುವೆ 85ನೇಯ ಮಾನ್ವಿ ಸಿರವಾರ ಕೊನೆಯ ಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 20ರಂದು ನಗರದ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಡ್ಯಾಂನಲ್ಲಿ ನೀರು ಸಂಗ್ರಹ ಇದ್ದರೂ ಕೂಡ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಬಿಡದೆ ಮೋಸ ಮಾಡುತ್ತಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.
ರೈತರು ಬೆಳೆದ ಬೆಳಗಳು ಸಂಪೂರ್ಣ ನಾಶಗೊಂಡಿವೆ. ರೈತರ ಬದುಕು ಅತಂತ್ರವಾಗಿದೆ. ಮಾನ್ವಿ ಆಡಳಿತ ಪಕ್ಷ ನಿಷ್ಕ್ರಿಯಗೊಂಡಿದೆ. ರೈತರ ಪರ ಕೆಲಸ ಮಾಡಬೇಕಾದ ಶಾಸಕರು ಒಂದು ಬಾರಿಯೂ ಧ್ವನಿ ಎತ್ತುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯ ಕಾಲುವೆ ಮೇಲ್ಬಾಗದ ನೀರು ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ. 69ನೇ ಗೇಜ್ ಮೈಲ್‌ನಲ್ಲಿ ನೀರು ಕಡಿಮೆ ಇದೆ. ನೀರಿನ ಅಭಾವ ಇರುವ ಬಗ್ಗೆ ಎಲ್ಲಾ ಜನಪ್ರತಿಧಿಗಳಗೂ ಮಾಹಿತಿ ಇದೆ. ಆದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದರು.
ನೀರಾವರಿ ಇಲಾಖೆಯ ಅಧಿಕಾರಿಗಳ ಅವ್ಯವಸ್ಥೆಯನ್ನು ಖಂಡಿಸಿ ಉಗ್ರವಾದ ಹೋರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸಹ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಮಾನ್ವಿ ಸಿರವಾರ ಉಪ ಕಾಲುವೆಯ ಕೊನೆ ಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿದರು.
ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು. ನೀರು ಕಳ್ಳತನ ಮಾಡುವವರಿಗೆ ಈಗಾಗಲೇ ಸಭೆಯಲ್ಲಿ 2 ಲಕ್ಷ ರೂಪಾಯಿ ದಂಡ ವಿಧಿಸುವ ನಿರ್ಣಯ ಮಾಡಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಂಡ್ಯ | ಎಂಟು ಲಕ್ಷ ವ್ಯಯಿಸಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಪ್ರಾಥಮಿಕ ಶಾಲಾ ಶಿಕ್ಷಕ
ನವಿಲು ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವಂತೆ ಅನೇಕ ಬಾರಿ ಒತ್ತಾಯ ಮಾಡಲಾಗಿದೆ. ಆದರೂ ಅಧಿಕಾರಿಗಳು ಎಚ್ಚೆತ್ತಕೊಂಡಿಲ್ಲ. ಸೆ.20ರಂದು ನಡೆಯಲಿರುವ ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದೇವೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿಯ ಇಲಾಖೆಯ ಅಧಿಕಾರಿಗಳು ಆಗಮಿಸಿ ನಮ್ಮ ಸಮಸ್ಯೆ ಪರಿಹಾರ ಮಾಡುವಂತೆ ಒತ್ತಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜನ ಸೇವಾ ಫೌಂಡೇಶೇನ್ ಅಧ್ಯಕ್ಷ ಜಾವೀದ್ ಖಾನ್, ಮುಕ್ರಪ್ಪ, ಬಸವರಾಜ ಗೌಡ, ರಾಮಣ್ಣ, ಸೂಗರಯ್ಯ, ಲಿಂಗಾರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.
