ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದಕ್ಕಾಗಿ ತಮ್ಮ ಸಹೋದ್ಯೋಗಿ ವಕೀಲರಿಗೆ ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಈ ಬಗ್ಗೆ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಸೋಮವಾರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಪಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಿದೆ. ಈ ವೇಳೆ, ವಾದ ಮಂಡಿಸಿದ ಸಿಬಲ್ ,”ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಕಾರಣಕ್ಕಾಗಿ, ನನ್ನ ಚೇಂಬರ್‌ನಲ್ಲಿರುವ ಮಹಿಳಾ ವಕೀಲೆಯರು ಮತ್ತು ಸಿಬ್ಬಂದಿಗಳಿಗೆ ಆಸಿಡ್ ದಾಳಿ ಮತ್ತು ಅತ್ಯಾಚಾರದ ಕರೆಗಳು ಬರುತ್ತಿವೆ” ಎಂದು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆಯ ‘ಲೈವ್ ಸ್ಟ್ರೀಮಿಂಗ್’ಅನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಅದಾಗ್ಯೂ, ನ್ಯಾಯಾಲಯವು ‘ಲೈವ್ ಸ್ಟ್ರೀಮಿಂಗ್’ ನಿಲ್ಲಿಸುವ ಸಿಬಲ್ ಅವರ ಮನವಿಯನ್ನು ತಿರಸ್ಕರಿಸಿದೆ.
ಆಗಸ್ಟ್ 9ರಂದು ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸೆಮಿನಾಲ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಕೃತ್ಯವನ್ನು ಖಂಡಿಸಿ ವೈದ್ಯರು ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆಅ.
ಪ್ರತಿಭಟನಾನಿರತ ವೈದ್ಯರು ಮಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರದ ಮುಂದೆ ಐದು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳಲ್ಲಿ ಮೂರು ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ, ವೈದ್ಯರು ಮಂಗಳವಾರ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.