ದೇಶದಲ್ಲಿ ಜನಗಣತಿ ನಡೆಸುವ ಕುರಿತು ಸರ್ಕಾರವು ‘ಅತೀ ಶೀಘ್ರ’ದಲ್ಲಿ ಘೋಷಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಮೂರನೇ ಅವಧಿಯ ಎನ್‌ಡಿಎ ಸರ್ಕಾರ 100 ದಿನಗಳನ್ನು ಪೂರೈಸಿದ್ದು, ಅದನ್ನು ಗುರುತಿಸಲು ಅಮಿತ್ ಶಾ ಅವರನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. “ಜನಗಣತಿಯನ್ನು ಘೋಷಿಸಿದಾಗ ನಾವು ಎಲ್ಲ ವಿವರಗಳನ್ನು ಸಾರ್ವಜನಿಕಗೊಳಿಸುತ್ತೇವೆ” ಎಂದು ಹೇಳಿದರು.
ಭಾರತವು 1881ರಿಂದ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತಿದೆ. ಅದರಂತೆ 2020ರಲ್ಲಿ ಜನಗಣತಿ ನಡೆದು, 2021ರಲ್ಲಿ ವರದಿ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೋನ ಸೋಂಕಿನ ಆಕ್ರಮಣದಿಂದಾಗಿ ಜನಗಣತಿ ವಿಳಂಬವಾಗಿದೆ. 2020-21ರಲ್ಲಿ ಜನಗಣತಿ ನಡೆಯದೇ ಇರುವುದರಿಂದ ಸರ್ಕಾರಿ ಸಂಸ್ಥೆಗಳು 2011ರಲ್ಲಿ ನಡೆದಿದ್ದ ಜನಗಣತಿಯ ಮಾಹಿತಿಯನ್ನೇ ಆಧರಿಸಿ ನೀತಿಗಳನ್ನು ರೂಪಿಸುತ್ತಿವೆ. ಇದರಿಂದ, ನೀತಿಗಳು ಎಲ್ಲ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ.
ರಾಜಕೀಯ ಪಕ್ಷಗಳು ಜನಗಣತಿಗೆ ಒತ್ತಾಯಿಸುತ್ತಿವೆ. ಇದೆಲ್ಲದರ ನಡುವೆ, ಇದೀಗ ಜನಗಣತಿಯನ್ನು ಶೀಘ್ರವೇ ನಡೆಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.
ಸಂಪೂರ್ಣ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ನಡೆಸಲು ಸರ್ಕಾರಕ್ಕೆ 12,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಗಣತಿ ಸಮೀಕ್ಷೆಯ ವೇಳೆ ಕುಟುಂಬದ ದೂರವಾಣಿ ಸಂಖ್ಯೆ, ಇಂಟರ್ನೆಟ್ ಸಂಪರ್ಕ, ಮೊಬೈಲ್ ಅಥವಾ ಸ್ಮಾರ್ಟ್‌ಫೋನ್, ಬೈಸಿಕಲ್, ಸ್ಕೂಟರ್ ಅಥವಾ ಮೋಟಾರ್‌ಸೈಕಲ್ಅನ್ನು ಹೊಂದಿದೆಯೇ? ಕುಟುಂಬವು ಕಾರು, ಜೀಪ್ ಅಥವಾ ವ್ಯಾನ್ ಹೊಂದಿದೆಯೇ ಎಂಬ ಅಂಶಗಳೂ ಇರುತ್ತವೆ.
ಅಲ್ಲದೆ, ಜನರು ತಮ್ಮ ಮನೆಯಲ್ಲಿ ಸೇವಿಸುವ ಸಿರಿಧಾನ್ಯ ಯಾವುದು, ಕುಡಿಯುವ ನೀರಿನ ಮುಖ್ಯ ಮೂಲ ಯಾವುದು, ಮುಖ್ಯ ಬೆಳಕಿನ ಮೂಲ, ಶೌಚಾಲಯ ಇದೆಯೇ, ಅಡುಗೆಮನೆ ಮತ್ತು ಎಲ್‌ಪಿಜಿ ಲಭ್ಯತೆ, ಅಡುಗೆಗೆ ಬಳಸುವ ಮುಖ್ಯ ಇಂಧನ, ರೇಡಿಯೋ, ಟ್ರಾನ್ಸಿಸ್ಟರ್, ದೂರದರ್ಶನಗಳನ್ನು ಹೊಂದಿದ್ದಾರೆಯೇ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ವರದಿಯಾಗಿದೆ.
ಮನೆಯ ಮಹಡಿ, ಗೋಡೆ ಮತ್ತು ಮೇಲ್ಛಾವಣಿಯ ಪ್ರಧಾನ ವಸ್ತು ಯಾವುದು, ಮನೆಯ ಸ್ಥಿತಿ ಹೇಗಿದೆ, ಕುಟುಂಬದಲ್ಲಿ ಸಾಮಾನ್ಯವಾಗಿ ವಾಸಿಸುವ ಒಟ್ಟು ವ್ಯಕ್ತಿಗಳ ಸಂಖ್ಯೆ ಎಷ್ಟು, ಕುಟುಂಬದ ಮುಖ್ಯಸ್ಥರು ಮಹಿಳೆಯೇ ಅಥವಾ ಪುರುಷರೇ ಎಂಬ ಬಗ್ಗೆಯೇ ಪ್ರಶ್ನಿಸಲಾಗುತ್ತದೆ ಎಂದು ಹೇಳಲಾಗಿದೆ.