- ಕಾರನ್ನು ನಿಲ್ಲಿಸುವಂತೆ ಧಮ್ಕಿ ಹಾಕಿದ ಇಬ್ಬರು ಆರೋಪಿಗಳು
- ಹೆಲ್ಮೆಟ್ನಿಂದ ಕಾರಿನ ಗಾಜುಗಳಿಗೆ ಹೊಡೆದು ಹಾನಿಗೊಳಿಸಿದ್ದಾರೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳಿನಿಂದ ನಿರ್ಜನ ಪ್ರದೇಶದಲ್ಲಿ ಕಾರುಗಳನ್ನು ಅಡ್ಡಗಟ್ಟಿ ಕೆಲವರು ದರೋಡೆ ಮಾಡಲು ಹೊಂಚು ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ಇಷ್ಟು ದಿನ ರಾತ್ರಿ ನಡೆಯುತ್ತಿದ್ದ ಘಟನೆಗಳು ಇದೀಗ ಹಗಲು ಹೊತ್ತಿನಲ್ಲೇ ಆರಂಭವಾಗಿವೆ.
ಬೆಂಗಳೂರಿನಲ್ಲಿ ಇಬ್ಬರು ಬೈಕ್ ಸವಾರರು ಹಾಡಹಗಲೇ ತಮ್ಮ ಕಾರನ್ನು ನಿಲ್ಲಿಸುವಂತೆ ಧಮ್ಕಿ ಹಾಕಿ, ಹೆಲ್ಮೆಟ್ನಿಂದ ಕಾರಿನ ಗಾಜುಗಳಿಗೆ ಹೊಡೆದು ಹಿಂಬಾಲಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ತಾವು ಎದುರಿಸಿದ ಭಯಾನಕ ಅನುಭವವನ್ನು ನೀಲೇಶ್ ಸಲಗಾಂವ್ಕರ್ ಎಂಬುವವರು ಟ್ವೀಟ್ ಮೂಲಕ ವಿವರಿಸಿದ್ದಾರೆ.
“ಏ. 29ರಂದು ಮಧ್ಯಾಹ್ನ 1:20 ರಿಂದ 1:35ರ ನಡುವೆ ಕಾರಿನಲ್ಲಿ ಸುರಂಜನ್ ದಾಸ್ ರಸ್ತೆಯಲ್ಲಿ ಬಿಇಎಂಎಲ್ ವೃತ್ತದ ದಾರಿಯಲ್ಲಿ ಹಳೆ ಮದ್ರಾಸ್ ರಸ್ತೆಯ ಕಡೆಗೆ ಹೋಗುತ್ತಿದ್ದೆವು. ಕಾರಿನಲ್ಲಿ ನಾನು (ನೀಲೇಶ್ ಸಲಗಾಂವ್ಕರ್), ನನ್ನ ಪತ್ನಿ ಹಾಗೂ ಮಗಳು ಮಾತ್ರ ಇದ್ದೆವು. ಮೊದಲ ಬಾರಿಗೆ ಈ ರಸ್ತೆಯ ಮೂಲಕ ಹಳೆ ಮದ್ರಾಸ್ ರಸ್ತೆ ಕಡೆಗೆ ಹೋಗುತ್ತಿದ್ದೆವು. ಆ ರಸ್ತೆಯಲ್ಲಿ ಟ್ರಾಫಿಕ್ ಇರಲಿಲ್ಲ” ಎಂದು ಹೇಳಿದ್ದಾರೆ.
“ಇದ್ದಕ್ಕಿದ್ದಂತೆ, ನಮ್ಮ ಕಾರಿನ ಪಕ್ಕದಲ್ಲಿ ಬೈಕಿನಲ್ಲಿ ವ್ಯಕ್ತಿಯೊಬ್ಬರು ಕಾರು ನಿಲ್ಲಿಸಲು ಕೈ ಬೀಸಿದರು. ನಾವು ಕಾರನ್ನು ನಿಲ್ಲಿಸದೆ ರಸ್ತೆಯಲ್ಲಿ ಸಾಗಿದೆವು. ಆ ವ್ಯಕ್ತಿ ನಮ್ಮನ್ನು ಬೆನ್ನಟ್ಟಲು ಪ್ರಾರಂಭಿಸಿದನು. ಅವನು ನಮ್ಮ ಬಳಿ ಸನ್ನೆ ಮಾಡಲು ಪ್ರಾರಂಭಿಸಿದನು. ಇದು 2-3 ನಿಮಿಷಗಳ ಕಾಲ ಮುಂದುವರೆಯಿತು. ಈತನ ಜೊತೆ ಇನ್ನೋರ್ವ ಬೈಕ್ ಸವಾರ ಸೇರಿಕೊಂಡು, ಇಬ್ಬರೂ ನಮ್ಮನ್ನು ಹಿಂಬಾಲಿಸಲು ಪ್ರಾರಂಭಿಸಿದರು” ಎಂದಿದ್ದಾರೆ.
“ನಂತರ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ (ರಾಮನ್ ಗೇಟ್) ಎದುರು ಆ ಇಬ್ಬರು ಬೈಕ್ನವರು ತಮ್ಮ ಬೈಕ್ನ ವೇಗ ಹೆಚ್ಚಿಸಿದರು. ಥಟ್ಟನೆ ತಮ್ಮ ಬೈಕುಗಳನ್ನು ಕಾರಿನ ಮುಂದೆ ನಿಲ್ಲಿಸಿದರು. ನಮ್ಮನ್ನು ಕಾರು ನಿಲ್ಲಿಸುವಂತೆ ಒತ್ತಾಯಿಸಿದರು. ಇಬ್ಬರೂ ಬೈಕಿನಿಂದ ಇಳಿದು ನಮ್ಮ ಕಾರಿನ ಕಡೆಗೆ ಬರತೊಡಗಿದರು. ಅವರಲ್ಲಿ ಒಬ್ಬರು ಚಾಲಕನ ಬದಿಗೆ ಬಂದರು. ಇನ್ನೊಬ್ಬರು ಕಾರಿನ ಬಾನೆಟ್ ಮೇಲೆ ಕೈ ಹಾಕಿದನು. ಕಾರಿನಲ್ಲಿದ್ದ ನಾವು ಮೂವರು ಗಾಬರಿಗೊಂಡೆವು. ನಾವು ಅಪಾಯದಲ್ಲಿದ್ದೇವೆ. ನಮಗೆ ಏನಾದರೂ ಅನಾಹುತ ಸಂಭವಿಸಬಹುದು ಎಂದು ಗ್ರಹಿಸಿದ ನಾನು ಕಾರನ್ನು ಹಿಮ್ಮುಖವಾಗಿ ತಿರುಗಿಸಿ, ಎಡಕ್ಕಿಂದ ಮತ್ತೊಂದು ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದೆ” ಎಂದು ತಿಳಿಸಿದ್ದಾರೆ.
“ನನ್ನ ಹೆಂಡತಿ ‘100’ಕ್ಕೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ವೇಳೆ, ಇಬ್ಬರೂ ಹೆಲ್ಮೆಟ್ನಿಂದ ನಮ್ಮ ಕಾರಿನ ಗಾಜುಗಳಿಗೆ ಹೊಡೆದರು. ನಾವು ಆ ಸ್ಥಳದಿಂದ ಹೊರಟು ಬಿಇಎಂಎಲ್ ಸಿಗ್ನಲ್ ತಲುಪಿದೆವು. ಆ ರಸ್ತೆಯಲ್ಲಿ ಟ್ರಾಫಿಕ್ ಇತ್ತು. ಸುಮಾರು 4 ಟ್ರಾಫಿಕ್ ಪೊಲೀಸರು ಇದ್ದರು. ಆ ವ್ಯಕ್ತಿಗಳು ಬಿಇಎಮ್ಎಲ್ ಸಿಗ್ನಲ್ ವರೆಗೂ ನಮ್ಮನ್ನು ಹಿಂಬಾಲಿಸಿದರು. ಬಹುಶಃ ಪೊಲೀಸರನ್ನು ನೋಡಿದ ನಂತರ ಅವರು ವಾಪಸ್ ಹೋಗಿದ್ದಾರೆಂದು ನಾವು ಭಾವಿಸಿದೆವು. ನಾವು ಅತ್ಯಂತ ಭಯಭೀತರಾಗಿದ್ದರಿಂದ ಯಾವುದೇ ಫೋಟೋಗಳು ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಇಳೆಗೆ ತಂಪೆರೆದ ಮಳೆ; ಇನ್ನೂ ಎರಡು ದಿನ ಮಳೆ ಬರುವ ಸಾಧ್ಯತೆ
“ಬೆಂಗಳೂರಿನಲ್ಲಿ ತಂಗಿದ್ದ 15 ವರ್ಷಗಳ ನಂತರ ಹಗಲು ಹೊತ್ತಿನಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲು. ನನ್ನ ಮಗಳು ಮತ್ತು ಹೆಂಡತಿ ತುಂಬಾ ಭಯಭೀತರಾಗಿದ್ದರು. ಬಿಇಎಂಎಲ್ ಸರ್ಕಲ್ ತಲುಪಿದ ನಂತರ ಇಡೀ ಘಟನೆಯನ್ನು ಸಂಚಾರ ಪೊಲೀಸರಿಗೆ ವಿವರಿಸಿದೆವು. ಜೀವನ್ ಬಿಮಾ ನಗರ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದರು. ನಾವು ಪೊಲೀಸ್ ಠಾಣೆಗೆ ಹೋದೆವು. ಪೊಲೀಸರು ನಮ್ಮನ್ನು ಕಾಯಲು ಹೇಳಿದರು. ನಾವು ಸುಮಾರು 1 ಗಂಟೆ ಕಾದೆವು” ಎಂದು ತಿಳಿಸಿದ್ದಾರೆ.
“ಅದರ ನಂತರ ಆ ಸ್ಥಳವು ಅವರ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಸ್ಥಳವನ್ನು ತೋರಿಸಲು ನಮ್ಮೊಂದಿಗೆ ಒಬ್ಬ ಪೊಲೀಸರನ್ನು ಕಳುಹಿಸಿದರು. ಅಲ್ಲಿಗೆ ತಲುಪಿದ ಅವರು ಆ ಸ್ಥಳವು ಮತ್ತೊಂದು ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳುವಂತೆ ಹೇಳಿದರು” ಎಂದು ವಿವರಿಸಿದ್ದಾರೆ.
“ಬೇರೆ ಪೊಲೀಸ್ ಠಾಣೆಗೆ ಹೋಗಲು ನಮಲ್ಲಿ ಯಾವುದೇ ಶಕ್ತಿ ಉಳಿದಿರಲಿಲ್ಲ. ಮಾನಸಿಕ ಸ್ಥಿತಿಯಲ್ಲಿರಲಿಲ್ಲ. ಈ ಘಟನೆ ಹಗಲಿನಲ್ಲಿ ಅನುಭವಿಸಿದ ನಂತರ, ಈಗ ಇದು ಯಾರಿಗಾದರೂ, ಎಲ್ಲಿಯಾದರೂ, ಯಾವಾಗ ಬೇಕಾದರೂ ಸಂಭವಿಸಬಹುದು. ನಮ್ಮದೇ ಆದ “ನಮ್ಮ ಬೆಂಗಳೂರು” ನಗರವು ಎಲ್ಲ ತಪ್ಪು ಕಾರಣಗಳಿಗಾಗಿ ಪ್ರಸಿದ್ಧವಾಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ” ಎಂದು ನೀಲೇಶ್ ಸಲಗಾಂವ್ಕರ್ ಹೇಳಿದ್ದಾರೆ.