ಉರುಸ್, ಗಂಧೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಮುಸಲ್ಮಾನ್ ಬಾಂಧವರು
ರಾಜ್ಯದ ಹಿಂದೂ ಮುಸ್ಲೀಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾಸ್ಥಳವಾಗಿರುವ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಗಂಧೋತ್ಸವ ಕಾರ್ಯಕ್ರಮವು ಶಾಂತಿಯುತವಾಗಿ ಸಡಗರ ಸಂಭ್ರಮದಿಂದ ನೆರವೇರಿತು.
ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರಿಂದ ಮೊದಲನೇ ದಿನ ಪಟೇಲ್ ಭಾಷು, ಹಾಜಿ ಅನ್ಸರ್ ಖಾನ್, ಫೈಯಾಜ್, ಜಂಗ್ಲಿಪೀರ್ ಬಾಬಾ ದರ್ಗಾ ಮುತವಲ್ಲಿ ಬಾಬಾ ಜಾನ್, ಲೇಟ್ ಅನ್ವರ್ ಸಾಬ್, ನೂರ್ ಜಾನ್ ರವರ ಮನೆಗಳಿಂದ ಗಂಧದ ಮೆರವಣಿಗೆ ಮಾಡಲಾಯಿತು. ಸಾವಿರಾರು ಭಕ್ತಾದಿಗಳು ಹಜರತ್ ಕೃಪೆಗೆ ಪಾತ್ರರಾದರು.
ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪವಾಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿದರು. ಮೊದಲನೇ ದಿನ ಉರುಸ್ ಪ್ರಯುಕ್ತ ವಕ್ಫ್ ಬೋರ್ಡ್ ಕಡೆಯಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

ಉರುಸ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಡಿಷನಲ್ ಎಸ್ಪಿ ಇಮಾಮ್ ರಾಜಾ ಖಾಸಿಂ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದರ್ಗಾ ಕಾರ್ಯದರ್ಶಿ ಆರೀಫ್ ಖಾನ್ ಮಾತನಾಡಿ, ಹಿಂದೂ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿದ್ದು, ಮುಂದಿನ ಕಾರ್ಯಕ್ರಮಗಳಲ್ಲೂ ಯಾವುದೇ ಅಹಿತಕರ ಘಟನೆಗಳಾಗದಂತೆ ಎಲ್ಲರೂ ಶಾಂತಿ, ಸೌಹಾರ್ಧತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?
ಮೊದಲನೇ ದಿನದ ಉರುಸ್ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್, ಉಪಾಧ್ಯಕ್ಷರಾದ ಟೊಮ್ಯಾಟೋ ಗೌಸ್, ಸದಸ್ಯರಾದ ಅಮೀರ್ ಜಾನ್, ಅಮಾನುಲ್ಲಾ, ನಜೀರ್, ಜಬಿವುಲ್ಲಾ, ಕಲೀಮ್ ಪಾಷಾ, ದರ್ಗಾ ಮೇಲ್ವಿಚಾರಕರಾದ ತಯುಬ್ ನವಾಜ್, ವಕ್ಫ್ ಬೋರ್ಡ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.