ವಕ್ಫ್ ಮಸೂದೆ ವಿರೋಧಿಸಿ ಕನಕಗಿರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡರು ಹಿಂದೂ ಸಮಾಜದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮೂವರು ಎಸ್‌ಡಿಪಿಐ ಮುಖಂಡರ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.13ರಂದು ನಡೆಸಿದ ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ಮುಖಂಡ ಇಮ್ರಾನ್ ಭಾಷಣದಲ್ಲಿ ಮಾತನಾಡುವಾಗ ಹಿಂದೂಗಳ ವೀರ ಸಾವರ್ಕರ್ ಸಂತತಿ ಬಂದರೂ ಮುಸಲ್ಮಾನರ ವಕ್ಫ್ ಆಸ್ತಿಯನ್ನು ಮುಟ್ಟುಗೋಲು ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರು. ವೀರ ಸಾವರ್ಕರ್ ಸಂತತಿಯನ್ನು ಬುಡದಿಂದ ಕಿತ್ತು ಎಸೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.
ಸಂಘಟನೆಯ ಕಾರ್ಯದರ್ಶಿ ಇಮ್ರಾನ್, ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಮತ್ತು ಉಪಾಧ್ಯಕ್ಷ ದಾವೂದ್ ವಿರುದ್ಧ ಕಾರಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಕ್ಫ್ ಹೋರಾಟ ಕಾರಟಗಿಯಲ್ಲಿ ಸಣ್ಣ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರಬಹುದು. ದೇಶದಲ್ಲಿ ಎನ್‌ಆರ್‌ಸಿ ಕಾಯ್ದೆ ಬಂದಾಗ ನಮ್ಮ ಸಮುದಾಯದ ಹೆಣ್ಣು ಮಕ್ಕಳು ಬೀದಿಗಿಳಿದು ಅನಿರ್ದಿಷ್ಟ ಧರಣಿ ಮಾಡಿ ರದ್ದುಗೊಳಿಸಿದರು ಎಂದು ಹೇಳಿಕೆಗಳನ್ನು ನೀಡಿದ್ದರು.
ಇದನ್ನು ಓದಿದ್ದೀರಾ? ಕೊಪ್ಪಳ | ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ‘ಸಂಗನಹಾಲ ಚಲೋ’ ಕಾಲ್ನಡಿಗೆ ಜಾಥಾ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕಾರಟಗಿ ಮಂಡಲದ ಅಧ್ಯಕ್ಷ ಮಂಜುನಾಥ ಮಸ್ಕಿ ‘ಎಸ್‌ಡಿಪಿಐ ಕಾರ್ಯಕರ್ತರ ವಿವಾದಾತ್ಮಕ ಹೇಳಿಕೆ ನೀಡಿ ,ರಾಷ್ಟ್ರೀಯ ಏಕತೆ, ಧಾರ್ಮಿಕತೆ ಮತ್ತು ಸೌಹಾರ್ದತೆ ನಾಶ ಮಾಡುತ್ತದೆ. ಧರ್ಮದ ಹೆಸರಿನಲ್ಲಿ ಕೋಮು ಸೌಹಾರ್ದತೆ ಪ್ರಚೋದಿಸುತ್ತದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಮೂವರು ಎಸ್‌ಡಿಪಿಐ ಮುಖಂಡರ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
