ಎಸ್ಎಫ್ಐ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಅಧಿಕಾರಿಗಳು, ಹಾಸನ ಜಿಲ್ಲೆಯ ಹೊಳೆನರಸೀಪುರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾರ್ಡನ್ ಚಂದ್ರಕಲಾ ಅವರನ್ನು ಕೆಲಸದಿಂದ ತೆಗೆದಿದ್ದು, ಬೇರೆಡೆಗೆ ವರ್ಗಾಯಿಸಿದ್ದಾರೆ.
ಸದರಿ ವಸತಿ ನಿಲಯ ಅವ್ಯವಸ್ಥೆಯಿಂದ ಕೂಡಿದ್ದು, ಮೂಲಸೌಕರ್ಯಗಳ ಮರೀಚಿಕೆಯಾಗಿದೆ. ಅಲ್ಲದೆ ಹಾಸ್ಟೆಲ್ ವಾರ್ಡನ್ ಕರ್ತವ್ಯದಲ್ಲಿ ಲೋಪದೋಷ ಕಂಡುಬಂದಿರುವುದಾಗಿ ಆರೋಪಗಳು ಕಂಡುಬಂದಿದ್ದವು.
ವಿದ್ಯಾರ್ಥಿಗಳ ಸಮಸ್ಯೆಯ ವಿಚಾರ ಕುರಿತು ಹಲವು ಸಂಘಟನೆಯವರು ಹೋರಾಟ ನಡೆಸಿದ್ದರಲ್ಲದೆ, ಪತ್ರಿಕಾಗೋಷ್ಠಿ ಕೂಡ ನಡೆಸಿದ್ದರು. ಅಲ್ಲದೇ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು.
ಅಲ್ಲದೇ, ಈ ಬಗ್ಗೆ ಈ ದಿನ.ಕಾಮ್ ಸೆಪ್ಟೆಂಬರ್ 10ರಂದು ಹಾಸನ | ವಸತಿ ನಿಲಯದ ಅವ್ಯವಸ್ಥೆ ಪ್ರಶ್ನಿಸಿದರೆ ಹಾಸ್ಟೆಲ್ ವಾರ್ಡನ್‌ನಿಂದ ಬೆದರಿಕೆ: ವಿದ್ಯಾರ್ಥಿನಿಯರ ಆರೋಪ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಕರ್ತವ್ಯಲೋಪ ಎಸಗಿದ್ದ ವಾರ್ಡನ್ ಚಂದ್ರಕಲಾ ಅವರನ್ನು ಕೆಲಸದಿಂದ ತೆಗೆಯಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೂದ್ ಪೀರ್ ಈ ದಿನ.ಕಾಮ್ ಜೊತೆ ಮಾತನಾಡಿ, “ಹೊಳೆನರಸೀಪುರದ ಮೆಟ್ರಿಕ್ ಪೂರ್ವ ಬಾಲಕಿಯ ವಸತಿನಿಲಯದಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಕಲಾ ಅವರನ್ನು ಕೆಲಸದಿಂದ ತೆಗೆದಿದ್ದು, ಆ ಜಾಗಕ್ಕೆ ಚಂದ್ರಿಕಾ ಅವರನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಿಸಿಕೊಡುವಂತೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಪೃಥ್ವಿ, ಸಿಪಿಐಎಂನ ಮುಖಂಡ ಧರ್ಮೇಶ್, ಕರ್ನಾಟಕ ಪ್ರಾಂತ ರೈತ ಸಂಘದ ನವೀನ್, ಹಾಗೂ ಮಾದಿಗ ದಂಡೋರ ಸಮಿತಿ ವಿಜಯ್ ಕುಮಾರ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಸ್ಟೆಲ್‌ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಸಮಸ್ಯೆಯನ್ನು ಆಲಿಸಿದ್ದರು. ನಂತರ ಈ ದಿನ.ಕಾಮ್ ಕೂಡ ಈ ಬಗ್ಗೆ ಸುದ್ದಿ ಮಾಡಿ ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ತಂದಿತ್ತು.
ಪ್ರಕರಣದ ಹಿನ್ನೆಲೆ
ಹಾಸ್ಟೆಲ್‌ನಲ್ಲಿ ತೀರಾ ಕಳಪೆ ಗುಣಮಟ್ಟದ ಆಹಾರವನ್ನು ತರಿಸುವುದು ಮತ್ತು ಸ್ವಚ್ಛತೆ ಇಲ್ಲದಿರುವುದರಿಂದ ಈಗಾಗಲೆ ನಾನಾ ರೋಗಗಳು ಹರಡಿ ವಿದ್ಯಾರ್ಥಿನಿಯರು ಆಸ್ಪತ್ರೆ ಸೇರಿದ್ದಾರೆ. ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಸಮುದಾಯದಿಂದ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್ ಇದಾಗಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಾತಾವರಣ ನಿರ್ಮಿಸಲು ಬೇಕಿರುವ ಯಾವುದೇ ಮೂಲಸೌಕರ್ಯಗಳಿಲ್ಲ.
ಈ ಸುದ್ದಿ ಓದಿದ್ದೀರಾ? ಗದಗ | ಸೌಲಭ್ಯಗಳಿಲ್ಲದೆ ಬದುಕುತ್ತಿರುವ ಅಲೆಮಾರಿ ಸಮುದಾಯ: ಇನ್ನೂ ಈಡೇರದ ಜನಪ್ರತಿನಿಧಿಗಳ ಭರವಸೆ
ವಿದ್ಯಾರ್ಥಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಯಾರಿಗೆ ದೂರು ಕೊಟ್ಟರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ವಾರ್ಡನ್ ಉಡಾಫೆ ಉತ್ತರ ನೀಡುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವ್ಯವಸ್ಥೆ ಬಗ್ಗೆ ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಧಮ್ಮಿ, ಬೆದರಿಕೆಗಳನ್ನು ಹಾಕುತ್ತ ದೌರ್ಜನ್ಯ ಮಾಡುತ್ತಿದ್ದರು ಎನ್ನಲಾಗಿತ್ತು.
ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಖಾಲಿ ಮಾಡಿಕೊಂಡು ಹೋಗಿರೆಂದು ಬೆದರಿಕೆ ಹಾಕುತ್ತಿರುವುದು, ವಿದ್ಯಾರ್ಥಿಗಳಲ್ಲಿ ದ್ವೇಷದ ಕಿಚ್ಚು ಹಚ್ಚಿ ಜಗಳ ತಂದಿಡುತ್ತಿದ್ದು, ಹಾಸ್ಟೆಲ್ ಬಿಟ್ಟು ಹೋಗುವುದಕ್ಕೂ ವಿದ್ಯಾರ್ಥಿಗಳಿಗೆ ತಲಾ ₹5000 ಹಣ ನೀಡುತ್ತೇನೆ. ಇಲ್ಲವೆಂದರೆ ಹಾಗೇ ಹೊರಗೆ ಹಾಕುತ್ತೇನೆಂದು ಬೆದರಿಕೆ ಒಡ್ಡುತ್ತಿದ್ದುದಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಈ ದಿನ.ಕಾಮ್ ಜೊತೆಗೆ ತಮ್ಮ ನೋವು ತೋಡಿಕೊಂಡಿದ್ದರು.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.