ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 108 ಆ್ಯಂಬುಲೆನ್ಸ್ ಸಿಬ್ಬಂದಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಗೆ ಸೇರಿದ್ದ ಚಿನ್ನ ಹಾಗೂ ಮೊಬೈಲ್ ಅನ್ನು ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಹಾರೊಗೆರಿಯ ಗ್ರಾಮದ ಶಿವಾನಂದ ಚೌಗಲಾ ರಸ್ತೆಯ ಮಧ್ಯದಲ್ಲಿ ಅಪಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯರು ಅಥಣಿಯ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿದ್ದಕ್ಕೆ ತಕ್ಷಣವೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ, ಅಪಘಾತಕ್ಕಿಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಸಿಬ್ಬಂದಿಗಳಾದ ನಿರ್ಮಲಾ ಬನಸೋಡೆ ಹಾಗೂ ಯಲ್ಲಾಲಿಂಗ ಇವರು ವ್ಯಕ್ತಿಯ ಹತ್ತಿರವಿದ್ದ 10 ಗ್ರಾಮ ಚಿನ್ನದ ಸರ ಒಂದು ಮೊಬೈಲ್ ಮತ್ತು ಹಣವನ್ನು ಕುಟುಂಬದವರಿಗೆ ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಆಪಘಾತಕ್ಕಿಡಾದ ವ್ಯಕ್ತಿಯ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿಬ್ಬಂದಿ ನಿರ್ಮಲಾ ಬನಸೋಡೆ, “ಈ ಹಿಂದೆಯೂ ಇಂತಹ ಅನೇಕ ಘಟನೆಗಳು ನಡೆದಿತ್ತು. ಗಾಯಾಳುಗಳಾದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಅವರ ಅಮೂಲ್ಯ ವಸ್ತುಗಳನ್ನು ಜೋಪಾನವಾಗಿಟ್ಟು, ಮರಳಿಸಿದ್ದೇವೆ” ಎಂದು ತಿಳಿಸಿದರು.
