ಅವಧಿಗೂ ಮುನ್ನವೇ ರಾಯಚೂರು ಉಪ ವಿಭಾಗಾಧಿಕಾರಿ ಮಹೆಬೂಬಿಯವರ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಜಗನ್ನಾಥ ಬಾಳೆ ಅವರು ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಮಹೆಬೂಬಿಯವರ ವರ್ಗಾವಣೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬಣಗಳ ಗುದ್ದಾಟವೇ ಕಾರಣ ಎಂಬ ಅಂಶ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಬಂದ ನಂತರ ಮುಸ್ಲಿಂ ಸಮಾಜ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿತ್ತು. ಆದರೆ, ಸರ್ಕಾರ ಬದಲಾದರೂ ಮುಸ್ಲಿಂ ಸಮಾಜದ ಸಮಸ್ಯೆಗಳು ಹಾಗೂ ಅಧಿಕಾರಿಗಳಿಗೆ ಕಿರುಕುಳ ನಿಂತಿಲ್ಲ ಎನ್ನುವುದು ಸೋಜಿಗದ ಸಂಗತಿಯಾಗಿದೆ.
ಕಳೆದ ಬಿಜೆಪಿ ಸರಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನಗತ್ಯ ಕಿರುಕುಳ ನೀಡಿದ್ದಲ್ಲದೇ, ಮುಸ್ಲಿಂ ಸಮುದಾಯದ ಅಧಿಕಾರಿಗಳನ್ನು ಸೂಕ್ತ ಹುದ್ದೆಗಳನ್ನು ನೀಡದೇ ವಂಚಿಸಿರುವ ಬಗ್ಗೆ ಆಗಾಗ್ಗೆ ಆರೋಪಗಳು ಕೇಳಿಬಂದಿತ್ತು. ಕಾಂಗ್ರೆಸ್ ಸರಕಾರ ಬಂದ ನಂತರ ಇಂತಹ ಕಿರುಕುಳ, ವಂಚನೆ ತಪ್ಪುತ್ತದೆ ಎನ್ನುವ ಭಾವನೆ ಸಮುದಾಯದಲ್ಲಿ ಇತ್ತು. ಆದರೆ, ದುರದೃಷ್ಟವಷಾತ್ ಕಾಂಗ್ರೆಸ್ ಪಕ್ಷದಲ್ಲಿ ಇರುವ ಬಿಜೆಪಿ ಮನಸ್ಥಿತಿಯ ನಾಯಕರಿಂದ ಮತ್ತೆ ಮತ್ತೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿದೆ. ಇದರ ಮುಂದುವರೆದ ಭಾಗವಾಗಿಯೇ ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಮಹೆಬೂಬಿಯವರನ್ನು ಅವಧಿ ಪೂರ್ವದಲ್ಲಿಯೇ ವರ್ಗಾವಣೆ ಮಾಡಲಾಗಿದೆ.

ಮೂಲತಃ ರಾಯಚೂರು ಜಿಲ್ಲೆಯವರಾದ ಮಹೆಬೂಬಿಯವರು ತವರು ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದರು. ಅವರನ್ನು ಈ ಮೊದಲು ಲೋಕಸಭಾ ಚುನಾವಣೆಯ ಅವಧಿಯಲ್ಲಿ ಬೇರೆಡೆಗೆ ವರ್ಗಾಯಿಸಲಾಗಿತ್ತು. ಚುನಾವಣೆಯ ಬಳಿಕ ಮತ್ತೆ ಉಪ ವಿಭಾಗಾಧಿಕಾರಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು.
ನ್ಯಾ.ರಾಜೇಂದ್ರ ಸಾಚಾರ್ ಸಮಿತಿಯ ಶಿಫಾರಸ್ಸಿನಂತೆ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಕನಿಷ್ಠ ಒಬ್ಬರಾದರೂ ಮುಸ್ಲಿಂ ಅಧಿಕಾರಿಗಳು ಸೇವೆಯಲ್ಲಿರಬೇಕು ಎನ್ನುವ ನಿಯಮವಿದೆ. ಇದು ಹಿಂದಿನ ಯುಪಿಎ ಸರಕಾರ ಕಟ್ಟುನಿಟ್ಟಿನ ಸೂಚನೆ ರಾಜ್ಯ ಸರಕಾರಗಳಿಗೆ ನೀಡಿದೆ. ಅದರಂತೆ ಕಳೆದ 20 ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ.
ರಾಯಚೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡಲಾಗುತ್ತಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ ಎಂದು ಸಮುದಾಯದ ಮುಖಂಡರು ನೆನಪಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರದಲ್ಲಿಯೂ ಸಹ ರಾಯಚೂರು ನಗರದಲ್ಲಿ ಇಬ್ಬರು ಮುಸ್ಲಿಂ ಪೋಲಿಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಸರಕಾರ ಬಂದ ನಂತರ ರಾಯಚೂರು ನಗರದಲ್ಲಿ ಒಬ್ಬರೂ ಮುಸ್ಲಿಂ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿಯೂ ಇದೆ ಸ್ಥಿತಿ ಇದೆ.
ಇದು ಸ್ಥಳೀಯ ಕಾಂಗ್ರೆಸ್ ನಾಯಕರು ಹೊಂದಿರುವ ಮುಸ್ಲಿಂ ದ್ವೇಷದ ನಿಲುವು ಇದಕ್ಕೆ ಕಾರಣ ಎಂಬ ಮಾತುಗಳೂ ಕೂಡ ಜಿಲ್ಲೆಯಲ್ಲಿ ಕೇಳಿಬಂದಿದೆ. ಮುಸ್ಲಿಮರನ್ನು ರಾಜಕೀಯವಾಗಿ ಬೆಳೆಯಲು ಅಡ್ಡಗಾಲು ಹಾಕುವ ಹಿರಿಯ ನಾಯಕರು ಈಗ ಅಧಿಕಾರಿಗಳಿಗೂ ಸರಿಯಾಗಿ ಕರ್ತವ್ಯ ನಿರ್ವಹಿಸಲು ಬಿಡದೆ ಅಸಹಿಷ್ಣುತೆ ಹೊಂದಿದ್ದಾರೆ ಎಂದು ದೂರಿದ್ದಾರೆ.
ಸಿರವಾರ ತಾಲೂಕು ಪಂಚಾಯತ್‌ನಲ್ಲಿ ಉದ್ಯೋಗ ಖಾತ್ರಿ ವಿಭಾಗದ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಂ ಮಹಿಳಾ ಅಧಿಕಾರಿಯನ್ನು ಅವಧಿ ಪೂರ್ಣ ವರ್ಗಾವಣೆಗೊಳಿಸಲಾಯಿತು. ಈಗ ಸಹಾಯಕ ಆಯುಕ್ತೆ ಮಹಿಬೂಬಿ ಅವರ ವರ್ಗಾವಣೆ. ಇದು ಬಿಜೆಪಿ ಸರಕಾರಕ್ಕಿಂತಲೂ ಘನಘೋರ ದೌರ್ಜನ್ಯ ಕಾಂಗ್ರೆಸ್ ಸರಕಾರದಲ್ಲಿ ಆಗುತ್ತಿದೆ ಎಂದು ಜಿಲ್ಲೆಯ ಮುಸ್ಲಿಂ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಮಹಿಬೂಬಿ ಅವರು ಗ್ರಾಮೀಣ ಭಾಗದ ಮುಸ್ಲಿಂ ಮಹಿಳೆ. ತನ್ನ ಸಾಮರ್ಥ್ಯದ ಮೇಲೆ ಕೆಎಎಸ್ ಪರೀಕ್ಷೆ ಬರೆದು ಸಹಾಯಕ ಆಯುಕ್ತರಾಗಿದ್ದಾರೆ ಹಾಗೂ ದೇಶದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದವರು ಎನ್ನುವುದು ವಿಶೇಷ.
ಇವರು ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಬಂದ ನಂತರ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಹಿಂಬಾಲಕರು ನಡೆಸುತ್ತಿದ್ದ ಅಕ್ರಮ ಮರಳು, ಪಡಿತರ ಅಕ್ಕಿ ಅಕ್ರಮ ಸರಬರಾಜು, ಅಕ್ರಮ ಗೋಡಾನುಗಳ ಮೇಲೆ ದಾಳಿ ಮಾಡಿ ಹಲವು ಪ್ರಕರಣ ದಾಖಲು ಮಾಡಿರುತ್ತಾರೆ.
ತೀರಾ ಇತ್ತೀಚಿಗೆ ದೇವದುರ್ಗ ತಾಲೂಕಿನಲ್ಲಿ ಸಚಿವರ ಮಗನ ಹಿಂಬಾಲಕರ ಅಕ್ರಮ ಮರಳು ಬ್ಲಾಕ್‌ಗಳ ಮೇಲೆ ದಾಳಿ ಮಾಡಿ ಏಳಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ, ಹಲವು ಮರಳು ಸಾಗಿಸುವ ಟಿಪ್ಪರ್‌ಗಳು, ಜೆಸಿಬಿಗಳು ಜಪ್ತಿ ಮಾಡಿರುವ ಕಾರಣ ಶ್ರೀಮತಿ ಮಹಿಬೂಬಿ ಇವರ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ರೈತ ಮುಖಂಡರು ಕೂಡ ತಿಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಇತ್ತೀಚೆಗೆ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಮುಖಂಡರು ಮಹೆಬೂಬಿ ಅವರ ವರ್ಗಾವಣೆಯನ್ನು ವಿರೋಧಿಸಿ ಪ್ರತಿಭಟಿಸಿದ್ದಲ್ಲದೇ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು.
ಕಾಂಗ್ರೆಸ್ ಸರಕಾರವು ಅಕ್ರಮ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಯೇ ಆಡಳಿತಕ್ಕೆ ಬಂದಿರುವಾಗ ಅಕ್ರಮಕ್ಕೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಓರ್ವ ಪ್ರಾಮಾಣಿಕ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡುವುದು ಎಷ್ಟು ಸರಿ? ಎಂದು ಕೇಳಿದ್ದರು.
ಕಾಂಗ್ರೆಸ್ ನಾಯಕರ ಒತ್ತಡದಿಂದ ಮಾಡಿರುವ ಶ್ರೀಮತಿ ಮಹಿಬೂಬಿ ಅವರ ವರ್ಗಾವಣೆಯನ್ನು ರದ್ದುಪಡಿಸಿ ರಾಯಚೂರು ಉಪ ವಿಭಾಗದಲ್ಲಿಯೇ ಸಹಾಯಕ ಆಯುಕ್ತರಾಗಿ ಮುಂದುವರೆಯಲು ಸೂಕ್ತ ಕ್ರಮ ಜರುಗಿಸಬೇಕೆಂದು ಅನೇಕರ ಒತ್ತಾಯವಾಗಿದೆ.
ಈ ಸಂಬಂಧ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಸಾಮಾಜಿಕ ಚಿಂತಕ ರಜಾಕ್ ಉಸ್ತಾದ್, “ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತೆ ಮಹೆಬೂಬಿಯವರ ಅವಧಿಪೂರ್ವ ವರ್ಗಾವಣೆ ದುರದೃಷ್ಟಕರ. ಜನರಲ್ಲಿ ದಕ್ಷ ಅಧುಕಾರಿಯೆಂದೇ ಹೆಸರು ಮಾಡಿದ್ದರೂ ಕೆಲವು ಪಟ್ಟಭದ್ರರ ಪರವಾಗಿ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ಸರಕಾರ ಅವರ ವರ್ಗಾವಣೆ ರದ್ದುಮಾಡಿ, ಇಲ್ಲಿಯೇ ಸೇವೆ ಸಲ್ಲಿಸಲು ಅವಕಾಶ ಒದಗಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಚರ್ಚಿಸುತ್ತೇವೆ” ಎಂದರು.

ಹೋರಾಟಗಾರ ಅಝೀಝ್ ಜಾಗೀರದಾರ್ ಮಾತನಾಡಿ, “ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಬಣಗಳ ಜಗಳ, ಮನಸ್ತಾಪದಿಂದ ಇವೆಲ್ಲಾ ಮುಸ್ಲಿಮರು ಮೇಲೆ ಪ್ರಭಾವ ಬೀಳುತ್ತಿದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ಕೊಡಬೇಕು ಎಂದು ಮುಸ್ಲಿಮರು ಪಟ್ಟು ಹಿಡಿದಿದ್ದರು. ಇದನ್ನು ತಿರಸ್ಕರಿಸಿ ಕಾಂಗ್ರೆಸ್ ಹಿರಿಯ ಮುಖಂಡರು, ತಮ್ಮ ಸ್ಥಾನ ಭದ್ರ ಬುನಾದಿ ಹಾಕಬೇಕು ಎಂದು ಕಾದಾಡಿದರು. ಅದು ತಪ್ಪಿದ ಕಾರಣಕ್ಕೆ ಮುಸ್ಲಿಮರ ಮೇಲೆ ಇಂತಹ ಸಂಚು ಹಾಕಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಉಪ ವಿಭಾಗಾಧಿಕಾರಿ ಮಹೆಬೂಬಿ ವರ್ಗಾವಣೆ ಹಿಂಪಡೆಯಲು ಸಂಘಟನೆಗಳ ಆಗ್ರಹ
“ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತೆ ಮಹೆಬೂಬಿಯವರ ಅವಧಿಪೂರ್ವ ವರ್ಗಾವಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಅಧಿಕಾರಿಗಳ ವರ್ಗಾವಣೆ ಮಾಡಿಸುವಲ್ಲಿ ತೋರಿಸುವ ಆಸಕ್ತಿ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿಲ್ಲ
ಉಪ ವಿಭಾಗಾಧಿಕಾರಿ ಮೆಹಬೂಬಿ ಅವರು ನೂತನ ಉಪ ವಿಭಾಗಾಧಿಕಾರಿ ಜಗನ್ನಾಥ ಬಾಳ ಅವರಿಗೆ ಈಗಾಗಲೇ ಅಧಿಕಾರ ಹಸ್ತಾಂತರಿಸಿದರು. ಯಾವುದೇ ಪೂರ್ವ ಮಾಹಿತಿ ಇಲ್ಲದೇ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಮೆಹಬೂಬಿ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷವೂ ಪೂರ್ಣಗೊಂಡಿರಲಿಲ್ಲ. ಹಠಾತ್ ವರ್ಗಾವಣೆ ಕಚೇರಿ ಸಿಬ್ಬಂದಿಗೂ ಶಾಕ್ ನೀಡಿದೆ.
2023ರ ಜುಲೈ 10ರಂದು ರಾಯಚೂರಿಗೆ ಉಪ ವಿಭಾಗಾಧಿಕಾರಿಯಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ 2024ರ ಜನವರಿ 30ರಂದು ಚಿಕ್ಕೋಡಿ ವಿಭಾಗಕ್ಕೆ ವರ್ಗಾವಣೆ ಮಾಡಿದರು. ಚುನಾವಣೆ ಮುಗಿದ ನಂತರ ಜೂನ್ 10ಕ್ಕೆ ಮತ್ತೆ ರಾಯಚೂರಿಗೆ ವರ್ಗ ಮಾಡಲಾಗಿತ್ತು. ಈಗ ನಾಲ್ಕು ತಿಂಗಳಲ್ಲೇ ಮತ್ತೆ ಬೆಂಗಳೂರಿನ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಸಹಾಯಕ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿರುವ ಕಾಂಗ್ರೆಸ್ ಮುಖಂಡರ ಬಣಗಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಲ್ಲಿ ತೋರಿಸುವ ಆಸಕ್ತಿ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ತೋರಿಸುತ್ತಿಲ್ಲ. ಉತ್ತಮವಾಗಿ ಕೆಲಸ ಮಾಡುತ್ತಿರುವಾಗಲೇ ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್
ಜಗನ್ನಾಥ ಬಾಳೆ ಅಲ್ಲಾ ಅವರು ನಮ್ಮೂರಿನ “ಗಜಾನನ ಬಾಲೆ”ಅವರು. ಸರಿಯಾದ ಹೆಸರು ಪ್ರಸ್ತಾಪಿಸಿ….
Such a scripted article .. no background check is done to see even if the new officer’s name is correct .. request to verify all the facts before you publish any news