ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪೂರ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರ ದುರುಪಯೋಗಪಡಿಸಿಕೊಂಡು ಪತಿಯ ಭೂಮಿಯಲ್ಲಿ ಕೃಷಿ ಹೊಂಡ ನಿರ್ಮಿಸಿರುವ ಆರೋಪ ಕೇಳಿಬಂದಿದೆ.
ಸರ್ಜಾಪೂರ ಗ್ರಾಮ ಪಂಚಾಯಿತಿ ಪಿಡಿಒ ಶೋಭಾರಾಣಿ, ತಮ್ಮ ಪತಿ ಮಹಾಬಲೇಶ್ವರ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಕೃಷಿ ಹೊಂಡ ನಿರ್ಮಿಸಿ ಅಧಿಕಾರ ದುರಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಲಿಂಗಸಗೂರು ತಾಲೂಕು, ಲಿಂಗಸೂರು ಹೋಬಳಿ, ಸರ್ಜಾಪೂರ ಗ್ರಾಮದ ವ್ಯಾಪ್ತಿಯ ಸರ್ವೇ ನಂಬರ್ 97/3ರ ಕೃಷಿ ಜಮೀನು ಮಹಾಬಲೇಶ್ವರ ಇವರ ಹೆಸರಲ್ಲಿದೆ. ಮಹಾಬಲೇಶ್ವರ ಅವರು ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಅಲ್ಲದೇ, ಆದಾಯ ತೆರಿಗೆಯನ್ನೂ ಕೂಡ ಕಟ್ಟುತ್ತಿದ್ದಾರೆ.

2023-24ನೇ ಸಾಲಿನ ಅವಧಿಯಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಶೋಭಾರಾಣಿ ಅವರು ತಮ್ಮ ಗಂಡನ ಹೆಸರಿನ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಲ್ಲದೆ, ಇದಕ್ಕೆ ಸಂಬಂಧಿಸದಂತೆ ಒಟ್ಟು ₹43, 470 ರೂಗಳನ್ನು ಹಣವನ್ನು ಪಾವತಿಸಿದ್ದಾರೆ. ಪಿಡಿಒ ಅವರು ಸ್ಥಳೀಯವಾಗಿದ್ದುಕೊಂಡು, ಸ್ಥಳೀಯ ಪಂಚಾಯಿತಿಯಲ್ಲೇ ಕೆಲಸ ಮಾಡುತ್ತಾ, ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ನೆಪದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಸರ್ಕಾರದ ಯೋಜನೆಯೊಂದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ಮುಖಂಡರು ದೂರಿದ್ದಾರೆ.
ಇದನ್ನು ಓದಿದ್ದೀರಾ? ಕಾರ್ಕಳ ಪರಶುರಾಮ ಪ್ರತಿಮೆ ವಿವಾದ | ಶಾಸಕ ಸುನಿಲ್ ಪ್ರಚಂಡ ಸುಳ್ಳುಗಾರ: ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ
ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಪಿಡಿಒ ಶೋಭಾರಾಣಿ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಅಮಾನತು ಮಾಡಬೇಕು ಹಾಗೂ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಮರುಪಾವತಿಸಿಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ತಪ್ಪಿದಲ್ಲಿ ತಾಲೂಕು ಪಂಚಾಯಿತಿ ಮುಂದೆ ಧರಣಿ ಮಾಡಲಾಗುವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘ ಲಿಂಗಸುಗೂರು ಘಟಕದ ಮುಖಂಡ ಗುಂಡಪ್ಪ ಯರಡೋಣ ಎಚ್ಚರಿಕೆ ನೀಡಿದ್ದಾರೆ.
