ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯಸ್ಥರು ಎನ್ನುವ ʼಸಾಂವಿಧಾನಿಕ ಮಾನ್ಯತೆʼ ಯನ್ನು ವೈಭವೀಕರಿಸುವ ಮೂಲಕ ರಾಜ್ಯದ ಜನರಿಂದ ಚುನಾಯಿತವಾದ ಸರಕಾರವನ್ನೇ ನಿಯಂತ್ರಿಸುವುದು ಸರಿಯಲ್ಲ. ಕೇಂದ್ರ ಸರ್ಕಾರದ ಅಧಿಕಾರದ ಹಪಾಹಪಿ ಪ್ರಜಾಪ್ರಭುತ್ವದ ಮೌಲ್ಯಗಳ ವಿಸ್ತರಣೆಯ ದೃಷ್ಟಿಯಿಂದಲೂ ಒಪ್ಪತಕ್ಕ ವಿಷಯವಲ್ಲ.
ಭಾರತೀಯ ಉಪಖಂಡದಲ್ಲಿರುವ ವೈವಿಧ್ಯ ಈ ನೆಲಮೂಲದ ಸಂಸ್ಕೃತಿಯ ಸೊಬಗು ಕೂಡಾ. ಆಧುನಿಕತೆಯ ಅಗತ್ಯವಾಗಿ, ನಾಗರಿಕತೆಯ ವಿಕಾಸದ ಹಂತದಲ್ಲಿ ಈ ವೈವಿಧ್ಯದಲ್ಲಿ ಆದಂತಹ ಹಲವು ಬದಲಾವಣೆಗಳು ಸ್ವಾಭಾವಿಕ ಮತ್ತು ಸಹಜ ಕೂಡಾ. ವಸಾಹತೀಕರಣ ತರುವಾಯ ಬ್ರಿಟಿಷ್ ಆಡಳಿತದಲ್ಲಿ ಭಾಷೆ, ಶಿಕ್ಷಣ, ವ್ಯಾಪಾರ ಮತ್ತು ಆಡಳಿತದ ಕಾರಣದಿಂದ ಉಪಖಂಡದ ಉದ್ದಗಲಕ್ಕೂ (ಮೊದಲಿಗೆ ಪಾಕಿಸ್ತಾನ, ಬರ್ಮಾ, ಮಲಯಗಳೂ ಸೇರಿದಂತೆ) ಇಂತಹ ಹಿನ್ನಲೆಯಲ್ಲಿ ಕೆಲವು ಅಂಶಗಳಲ್ಲಿ ಸಮಾನತೆ ಹುಟ್ಟಿಕೊಂಡಿತು. ಮುಂದೆ ಇದು ಬೇರುಬಿಟ್ಟು ಬಲವಾಗಿ ಬೆಳೆದು ರಾಷ್ಟ್ರೀಯ ಚಳವಳಿಯ ಸ್ವರೂಪ ಪಡೆದಾಗ ನಾವೆಲ್ಲ “ಸ್ವ” ರಾಜ್ಯವಾಗಬೇಕು ಎನ್ನುವ ಕಾರಣಕ್ಕಾಗಿ ಒಟ್ಟಾದೆವು. ಹೀಗೆ ಒಟ್ಟಾಗುವಾಗ ವೈವಿಧ್ಯಮಯವಾಗಿದ್ದ ನಮ್ಮ ಸಂಸ್ಕೃತಿ, ಭಾಷೆ, ಪರಂಪರೆ ಇವುಗಳನ್ನೇ ಶಕ್ತಿಯಾಗಿಸಿದೆವು. ಬಹುರೂಪಿ ಸಂಸ್ಕೃತಿ ನಮ್ಮ ಶಕ್ತಿಯಾಗಿದೆಯೇ ಹೊರತು ದೌರ್ಬಲ್ಯವಾಗಿರಲೇ ಇಲ್ಲ. ಹೆಚ್ಚು ನೋವುಂಡವರ ಕೂಗು ಗಟ್ಟಿಯಾಗಿದ್ದರೆ ಉಳಿದವರ ಧ್ವನಿಯೂ ಕಡಿಮೆ ಏನಿರಲಿಲ್ಲ.
ಮುಂದೆ ನಮ್ಮ ಆಡಳಿತ ನಾವೇ ವಹಿಸುವ ಹೊತ್ತಿಗೆ ರಾಜ್ಯಗಳ ಒಕ್ಕೂಟವಾಗಿ ಭಾರತ ದೇಶ ಬಾಹ್ಯ ಒತ್ತಡದಿಂದ ಮುಕ್ತವಾಗಿ ಸ್ವತಂತ್ರ ರಾಷ್ಟ್ರವಾಯಿತು. ದೇಶದ ಸಂವಿಧಾನದ ಆಶಯವೂ ಇದನ್ನೇ ಧ್ವನಿಸುತ್ತದೆ. ಈ ರೀತಿಯ ಒಕ್ಕೂಟದ ಹಿಂದಿನ ಆಶಯಗಳಲ್ಲಿ ಮೂರು ಪ್ರಮುಖ ಅಂಶಗಳನ್ನು ಗಮನಿಸಬಹುದು.
- ಹಲವು ವೈವಿಧ್ಯಮಯ ಸಾಂಸ್ಕೃತಿಕ ಅಸ್ಮಿತೆಗಳ (ರಾಜ್ಯ) ಸಮಾಗಮವಾಗಿ ಭೌಗೋಳಿಕ ಗಡಿ ರೇಖೆಯೊಳಗೆ ಆಡಳಿತಾತ್ಮಕ ಕಾರಣಗಳಿಂದ ಅನನ್ಯತೆಯ ಸ್ವರೂಪದ ಪಡೆದ (ದೇಶ) ಮತ್ತೊಂದು ಅಸ್ಮಿತೆಯ ಜೊತೆಗೆ ಅನ್ಯೋನ್ಯವಾಗಿರುತ್ತದೆ.
- ಇಂತಹ ವೈವಿಧ್ಯಮಯ ಪ್ರಾದೇಶಿಕ ಸ್ವರೂಪದ ಅಸ್ಮಿತೆ ಮತ್ತು ದೇಶದ ನಾಗರಿಕ ಎನ್ನುವ ಅಸ್ಮಿತೆಯ ನಡುವೆ ಶ್ರೇಷ್ಠತೆಯ ವ್ಯಸನವಾಗಲಿ ಕನಿಷ್ಠತೆಯ ಕಾಯಿಲೆಯಾಗಲಿ ಇರಲು ಸಾಧ್ಯವಿಲ್ಲ. ಪ್ರಾದೇಶಿಕತೆಯ ನೆಲೆಗಳಲ್ಲಿ ವೈವಿಧ್ಯತೆಯ ಬೇರುಗಳಿರುವುದರಿಂದಲೇ ದೇಶ ಸುಭದ್ರವಾಗಬಲ್ಲದು. ಹಾಗಾಗಿ, ವಿವಿಧತೆಯನ್ನು ಒಪ್ಪುವ, ಅಪ್ಪುವ ಮನೋಭಾವ ಇದ್ದಾಗ ಮಾತ್ರ ಅನುಭವದ ಪರಿಧಿ ವಿಸ್ತರಿಸಿ ಅನನ್ಯತೆಯ ಅಸ್ತಿತ್ವ ಗಟ್ಟಿಯಾಗಲು ಸಾಧ್ಯ.
ಸ್ವಾತಂತ್ರ್ಯಾ ನಂತರದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕವಿರಿಸಿಕೊಳ್ಳುವ ಮೂಲಕ ಅವರ ಆಶಯಗಳನ್ನು ಅರಿಯುವ ಮತ್ತು ದೇಶದ ಸಂಕಲ್ಪಗಳನ್ನು ತಿಳಿಸುವ ಪ್ರಯತ್ನಗಳನ್ನು ಮಾಡುತ್ತಾ ಬಂದಿರುವ ಸಂಗತಿ, ರಾಜಕೀಯ ವಲಯದಲ್ಲಿ ಚರ್ಚೆಗೆ ಬರಬೇಕು. ಕನಿಷ್ಠ ಕಾಂಗ್ರೆಸ್ ಪಕ್ಷವಾದರೂ ಈ ಬಗ್ಗೆ ಆಲೋಚಿಸುವ ಅಗತ್ಯವಿದೆ. ಕೊಡು ಕೊಳ್ಳುವಿಕೆಯ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕುರಿತು ನೆಹರೂ ಅನುಸರಿಸಿದ ವಿಷಯ ನಮಗಿಂದು ಮರೆತೇ ಹೋಗಿದೆ. ಕೇರಳದ ಮೊದಲ ಕಾಂಗ್ರೆಸೇತರ ಸರ್ಕಾರವನ್ನು ವಜಾಗೊಳಿಸಿದ ಅಪವಾದವನ್ನು ಹೊರುವುದರ ಜೊತೆಗೆ ರಾಜ್ಯ ಮತ್ತು ಕೇಂದ್ರಗಳನ್ನು ನಡೆಸಿದ ರೀತಿಗಳ ಬಗ್ಗೆಯೂ ಚರ್ಚೆ ನಡೆದು ರಾಜ್ಯ ಮತ್ತು ದೇಶಗಳು ಒಟ್ಟಾಗಿ ಬೆಳೆಯುವ ಸಂಕಲ್ಪವಾಗಬೇಕಿದೆ. ಆದರೆ ಯಾಕೋ ಪರಿಸ್ಥಿತಿ ಹಾಗಿಲ್ಲ.
ವಿಶೇಷವಾಗಿ 2014ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು, ದೇಶದ ಹಿತಾಸಕ್ತಿಗಿಂತಲೂ ಪಕ್ಷದ ಬೆಳವಣಿಗೆಗೆ ಅಡ್ಡಿಯಾಗಿ ಕಾಣತೊಡಗಿವೆ. ಅವುಗಳನ್ನು ಭಿನ್ನ ರಾಜಕೀಯ ನಿಲುವುಗಳು, ಸಿದ್ಧಾಂತಗಳು ಎಂದು ತಿಳಿದು, ಭಿನ್ನತೆಯಲ್ಲಿರಬಹುದಾದ ಬಹುತ್ವವನ್ನು ಹುಡುಕಿ ದೇಶ ಮುನ್ನಡೆಸುವ ಬದಲಿಗೆ ಯಾವ ರೀತಿಯಿಂದಲಾದರೂ ಅಂತಹ ವಿಪಕ್ಷಗಳ ನಾಯಕ್ವವಿರುವ ಸರಕಾರಗಳನ್ನು ಅಸ್ಥಿರಗೊಳಿಸುವ ಮೂಲಕ ರಾಜಕೀಯ ನೆಲೆ ವಿಸ್ತರಿಸಿಕೊಳ್ಳುವ ಮನೋಭಾವವನ್ನು ಗಮನಿಸಬಹುದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು ಗೌರವಿಸುವಲ್ಲಿ ಎಡವಟ್ಟಾಗುತ್ತಿದೆ ಅನಿಸತೊಡಗಿದೆ. ಪ್ರಜ್ಞಾವಂತರಾದ ನಾಗರಿಕರನ್ನು ಬೆಳೆಸುವ ಬದಲಿಗೆ ತಪ್ಪು ಒಪ್ಪುಗಳ ವಿಮರ್ಶೆ ಇಲ್ಲದೆ ತಾನು ಹೇಳಿದ್ದೆಲ್ಲಾ ಒಪ್ಪುವ ಭಕ್ತರ ಸೇನೆಗಳನ್ನು ತಯಾರು ಮಾಡುವ ಪ್ರವೃತ್ತಿ ಬೆಳೆಯುತ್ತಿರುವುದು ಮುಂದಿನ ಜನಾಂಗದ ಹಿತದೃಷ್ಟಿಯಿಂದ ಖಂಡಿತಾ ಒಳ್ಳೆಯದಲ್ಲ. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಿನ ಸಂಬಂಧ ಸೌಹಾರ್ದದ ದಾರಿಬಿಟ್ಟು ಸಂಘರ್ಷದ ಹಾದಿ ಹಿಡಿದಿರುವುದಕ್ಕೆ ನಿದರ್ಶನಗಳು ಸ್ಪಷ್ಟ.
2018-2023ರ ಅವಧಿಯಲ್ಲಿ ಕೇಂದ್ರ ಸರ್ಕಾರ ಮೂರು ಪ್ರಮುಖ ಕೃಷಿ ಕಾನೂನುಗಳನ್ನು ಜಾರಿಗೆ ತರುವ ವೇಳೆ ಪ್ರಜಾಪ್ರಭುತ್ವದಲ್ಲಿ ಪಾಲಿಸಬೇಕಾದ ಕನಿಷ್ಠ ನಿಯಮಗಳನ್ನು ಉಲ್ಲಂಘಿಸಲಾಯಿತು. ಕೃಷಿ ವಿಶೇಷವಾಗಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯ, ರಾಜ್ಯ ಮತ್ತು ಕೇಂದ್ರಗಳೆರಡರ ಪಟ್ಟಿಯಲ್ಲಿ ಈ ವಿಷಯ ಇರಬಹುದಾದರೂ ಈ ಚಟುವಟಿಕೆಯ ತಾಯಿ ಬೇರಿರುವುದು ರಾಜ್ಯಗಳಲ್ಲಿ. ಹಾಗಾಗಿ ರಾಜ್ಯ ವಿಧಾನಸಭೆಗಳಲ್ಲಿ ಈ ಚರ್ಚೆಯನ್ನು ಮಾಡಬೇಕಿತ್ತು. ಹಾಗಾಗಲಿಲ್ಲ, ರೈತರ ಸಹಮತವಿಲ್ಲದೆ, ಅವರೊಂದಿಗೆ ಚರ್ಚೆಯನ್ನೇ ನಡೆಸದೆ ಜಾರಿ ಮಾಡಲುದ್ದೇಶಿಸಿದ ಕಾನೂನುಗಳ ವಿರುದ್ಧ ರೈತರು ವಿರೋಧ ವ್ಯಕ್ತಪಡಿಸಿ, ಬೀದಿಗಿಳಿದು ವರ್ಷಗಟ್ಟಲೆ ಹೋರಾಟ ಮಾಡಬೇಕಾಯಿತು. ಕೊನೆಗೂ ಸರ್ಕಾರ ಹಿಂದೆ ಸರಿಯುವಂತಾಯಿತು. ರೈತರ ಪಾಲಿಗೆ ಹೋರಾಟದ ಸಿಹಿಗಿಂತ ಸರ್ಕಾರ ಅನುಭವಿಸಿದ ಕಹಿಯೇ ಉಳಿದು ಹೋಗಿದೆ ಅನಿಸುತ್ತದೆ.

ರಾಜ್ಯಪಾಲರು ರಾಜ್ಯ ಸರ್ಕಾರದ ಮುಖ್ಯಸ್ಥರು ಎನ್ನುವ ʼಸಾಂವಿಧಾನಿಕ ಮಾನ್ಯತೆʼ ಯನ್ನು ವೈಭವೀಕರಿಸುವ ಮೂಲಕ ರಾಜ್ಯದ ಜನರಿಂದ ಚುನಾಯಿತವಾದ ಸರಕಾರವನ್ನೇ ನಿಯಂತ್ರಿಸುವ ಕೇಂದ್ರ ಸರ್ಕಾರದ ಅಧಿಕಾರದ ಹಪಾಹಪಿ, ರಾಜ್ಯದ ಜನರ ಪಾಲಿಗೆ ಅನಾನುಕೂಲ ಮಾತ್ರವಲ್ಲ ಪ್ರಜಾಪ್ರಭುತ್ವದ ಮೌಲ್ಯಗಳ ವಿಸ್ತರಣೆಯ ದೃಷ್ಟಿಯಿಂದಲೂ ಒಪ್ಪತಕ್ಕ ವಿಷಯವಲ್ಲ. ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕವೂ ಸೇರಿದಂತೆ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ನಡೆಸಿದ ಹಸ್ತಕ್ಷೇಪಗಳ ಬಗ್ಗೆ ವಿವರಿಸಿದರೆ ಅದೊಂದು ಆಧುನಿಕ ಮಹಾಭಾರತವಾದೀತು. ಕಳೆದ ಹತ್ತು ವರ್ಷದ ಬಿ.ಜೆ.ಪಿ. ಸರ್ಕಾರದ ಸಾಧನೆಗೆ ಹೋಲಿಸಿದರೆ ಈ ವಿಷಯದಲ್ಲಿ ಕಾಂಗ್ರೆಸ್‍ನ ಸಾಧನೆ ಏನೋನೂ ಸಾಲದು ಎಂದು ಕೆಲವರಿಗೆ ಅನಿಸುವುದು ಸಹಜವೇ.
ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಸಂಘರ್ಷಕ್ಕೆ ಸಿಕ್ಕಿ ನಲುಗಿ ಹೋಗಿರುವ ಕಾಶ್ಮೀರದ ರಾಜ್ಯ ಸ್ಥಾನಮಾನಗಳನ್ನು ಕಿತ್ತು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಯಿತು. ಹಿಂಸೆಯನ್ನು ತಡೆಯುವ, ಶಾಂತಿಯನ್ನು ನೆಲೆಗೊಳಿಸುವ ಜನರ ಮಾನ, ಪ್ರಾಣ, ಆಸ್ತಿ ಬದುಕು ಕಾಪಾಡುವ ಉದ್ದೇಶದಿಂದ ಇಂತಹ ಕ್ರಾಂತಿಕಾರಕ ಕ್ರಮಕ್ಕೆ ಸರಕಾರ ಮುಂದಾಯಿತು ಎಂದು ಹೇಳಲಾಯಿತು. ಆದರೆ ವರ್ಷಗಳು ಕಳೆದರೂ ನಿಯಂತ್ರಣ ಕ್ರಮಗಳ ಮೂಲಕವೇ ಆಡಳಿತ ಮುಂದುವರಿಯುತ್ತಿದೆ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜನ ತಮ್ಮ ಪ್ರತಿನಿಧಿಯನ್ನಾಗಿ ಯಾರನ್ನು ಚುನಾಯಿಸಿದರು ಎನ್ನುವ ಅಂಶ ನೋಡಿದರೆ ವಾಸ್ತವ ಬೇರೇನೋ ಇದೆ ಅನಿಸುತ್ತಿದೆ. ಜನರನ್ನು ಬಲವಂತವಾಗಿ ಬಹಳ ದಿನ ನಿಯಂತ್ರಿಸುವುದು ಕಷ್ಟ ಅವರನ್ನು ತಿಳಿವಳಿಕೆಯ ಮೂಲಕ ಬದಲಿಸಬೇಕಿದೆ ಎನ್ನುವ ಸತ್ಯವನ್ನು ಸರಕಾರಗಳು ತಿಳಿಯದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗದು.
ತೊಂಭತ್ತರ ದಶಕದ ನಂತರ ಆರ್ಥಿಕ ಅಭಿವೃದ್ಧಿಯಲ್ಲಿ ದಕ್ಷಿಣದ ರಾಜ್ಯಗಳು ಉತ್ತಮ ರೀತಿಯಲ್ಲಿ ರಾಜಕೀಯ ಆಡಳಿತ, ಆರ್ಥಿಕ ಸುಧಾರಣೆ, ಸಾಕಷ್ಟು ಮುಂದಾಲೋಚನೆಯ ಆರ್ಥಿಕ ಅಭಿವೃದ್ಧಿ ನೀತಿಗಳನ್ನು ಅನುಸರಿಸುವ ಮೂಲಕ ಜನರ ಜೀವನಮಟ್ಟ ಏರಿಸುವಲ್ಲಿ ಸಫಲವಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಆದರೆ ಹೊಸ ಮಾದರಿಯ ತೆರಿಗೆ ನೀತಿಯ ಮೂಲಕ ಈ ರಾಜ್ಯಗಳು ಅಭಿವೃದ್ಧಿ ಹೊಂದಿರುವ ಕಾರಣ ದುಬಾರಿ ಬೆಲೆ ತೆರುವ ಪರಿಸ್ಥಿತಿ ಇದೆ. ಕರ್ನಾಟಕ ರಾಜ್ಯ ಕೇಂದ್ರಕ್ಕೆ ನೀಡುವ ಒಂದು ರೂಪಾಯಿ ತೆರಿಗೆಯಲ್ಲಿ ಕೇವಲ ಹದಿನೈದು ಪೈಸೆ ಮಾತ್ರ ವಾಪಸ್ಸು ಪಡೆಯುವ ಪರಿಸ್ಥಿತಿ ಇದೆ. ಇತ್ತೀಚೆಗೆ ಹಣಕಾಸು ಆಯೋಗದ ಮುಂದೆ ರಾಜ್ಯದ ಮುಖ್ಯಮಂತ್ರಿಯವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತಂತೆ ಸಾಕಷ್ಟು ಸಮರ್ಥವಾಗಿಯೇ ವಾದ ಮಂಡಿಸಿದ್ದಾರೆ. ಸಮಿತಿಗೆ ಅರ್ಥವಾಗಿರಬಹುದು, ಆದರೆ ಈ ಕುರಿತು ಕೇಂದ್ರ ಸರಕಾರಕ್ಕೆ ಮುಕ್ತವಾದ ಮನೋಧರ್ಮ ಇಲ್ಲದಿದ್ದರೆ ರಾಜ್ಯಕ್ಕೆ ನ್ಯಾಯ ಸಿಗಲಾರದು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮೋಶಾ ಮಸಲತ್ತು- ಕೇಜ್ರೀವಾಲ್ ಸವಾಲು
ಎಂಭತ್ತರ ದಶಕದವರೆಗೆ ಏಕಪಕ್ಷಗಳು ಪ್ರಾದೇಶಿಕವಾಗಿ ನಾಯಕತ್ವ, ರಾಜ್ಯಗಳಲ್ಲಿರುವ ಜನವರ್ಗಗಳ ಹಿತಾಸಕ್ತಿಯ ಪ್ರಶ್ನೆಗಳನ್ನು ನಗಣ್ಯವಾಗಿಸಿದ ಕಾರಣ ಅಂತಹ ಎಲ್ಲಾ ಸಮುದಾಯಗಳು ತಮ್ಮ ಧ್ವನಿಗೆ ರಾಜಕೀಯ ಶಕ್ತಿ ಗಳಿಸಿಕೊಂಡಿವೆ. ಇದರ ಪರಿಣಾಮವಾಗಿ ರಾಜಕೀಯ ಪಕ್ಷಗಳ ಒಕ್ಕೂಟಗಳು ಒಟ್ಟಾಗಿ ರಾಜಕೀಯ ಅಧಿಕಾರ ನಡೆಸುವ ಸ್ಥಿತಿ ಉಂಟಾಗಿದೆ. ಬಿಜೆಪಿಯಂತಹ ಅತಿ ದೊಡ್ಡ ಪಕ್ಷ ಜನತಾದಳದಂತಹ ಪಕ್ಷದೊಡನೆ ಹೊಂದಿಕೊಂಡು ರಾಜಕೀಯ ಬಲ ಪಡೆಯಲು ಮುಂದಾಯಿತು. ಅಧಿಕಾರ ದೊರೆತರೂ ಆಡಳಿತ ವ್ಯವಸ್ಥೆಯನ್ನು ಜನಕೇಂದ್ರಿತ ಹಿತಾಸಕ್ತಿಯಿಂದ ಸಮರ್ಥವಾಗಿ ಮುನ್ನಡೆಸಲು ಎಲ್ಲ ಪಕ್ಷಗಳೂ ಎದುಸಿರು ಬಿಡುತ್ತಿವೆ. ಇಂತಹ ಹೊತ್ತಲ್ಲಿ ಸಂಪೂರ್ಣವಾಗಿ ಅಧಿಕಾರವನ್ನು ಕೇಂದ್ರಿಕರಿಸಿ ಅಧಿಕಾರ ನಡೆಸಬಹುದು, ಕೇವಲ ಕಲ್ಪಿತ ಸತ್ಯಗಳ ಬಲದಿಂದಲೇ ವಾಸ್ತವ ಸತ್ಯಗಳನ್ನು ಮರೆಮಾಡಬಹುದು ಎನ್ನುವ ಕೇಂದ್ರ ಸರಕಾರದ ಧೋರಣೆ, ಕೇಂದ್ರ ಮತ್ತು ರಾಜ್ಯಗಳೆರಡರ ಹಿತಾಸಕ್ತಿಗೂ ಮಾರಕವೇ ಆಗಿದೆ ಎನ್ನುವ ಗೋಡೆಯ ಮೇಲಿನ ಬರಹವನ್ನು ಅದಷ್ಟು ಬೇಗ ಓದಿದರೆ ಒಳ್ಳೆಯದು.

ಡಾ ಉದಯ್ ಕುಮಾರ್ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು