ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ದೇಶದ ‘ನಂಬರ್ 1 ಭಯೋತ್ಪಾದಕ’ ಎಂದು ಕರೆದ ಆರೋಪದ ಮೇಲೆ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ವಿರುದ್ಧ ಕಾಂಗ್ರೆಸ್ ಮುಖಂಡ ಅಜಯ್ ಮಕೆನ್ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿ (ಎಐಎಂಸಿಸಿ) ಮುಖ್ಯಸ್ಥೆ, ಕಾಂಗ್ರೆಸ್ ಖಜಾಂಚಿ ಅಲ್ಕಾ ಲಂಬಾ ಅವರೂ ಕೂಡಾ ಕೇಂದ್ರ ಸಚಿವ ರವನೀತ್ ಮತ್ತು ಇತರ ಮೂವರು ರಾಜಕೀಯ ನಾಯಕರ ವಿರುದ್ಧ ದೆಹಲಿಯ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರವನೀತ್ ಸಿಂಗ್ ಹೊರತುಪಡಿಸಿ ಕಾಂಗ್ರೆಸ್ ಮುಖಂಡರ ದೂರಿನಲ್ಲಿ ಬಿಜೆಪಿ ನಾಯಕ ತರ್ವಿಂದರ್ ಸಿಂಗ್ ಮರ್ವಾ, ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಮತ್ತು ಉತ್ತರ ಪ್ರದೇಶದ ಸಚಿವ ರಘುರಾಜ್ ಸಿಂಗ್ ಅವರ ಹೆಸರೂ ಇದೆ. ದೂರಿನ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೂ ಕಳುಹಿಸಲಾಗಿದೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ ಬಹುಮಾನ: ಶಿವಸೇನಾ ನಾಯಕ
“ಸೆಪ್ಟೆಂಬರ್ 15ರಂದು ರವನೀತ್ ಬಿಟ್ಟು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ರಾಹುಲ್ ಗಾಂಧಿ ಅವರನ್ನು ‘ದೇಶದ ನಂಬರ್ ಒನ್ ಭಯೋತ್ಪಾದಕ’ ಎಂದು ಕರೆದಿದ್ದಾರೆ. ಹಿಂಸಾಚಾರ ಪ್ರಚೋದಿಸುವ ಮತ್ತು ಶಾಂತಿ ಭಂಗ ಮಾಡುವ ಉದ್ದೇಶದಿಂದ ರವನೀತ್ ಅವರು ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ವಿರುದ್ಧ ದ್ವೇಷ ಮತ್ತು ಆಕ್ರೋಶವನ್ನು ಕೆರಳಿಸಲು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಟಿವಿ ಚಾನೆಲ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ” ಎಂದು ಅಜಯ್ ಮಕೆನ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಾಗೆಯೇ ಸೆಪ್ಟೆಂಬರ್ 11ರಂದು ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಮತ್ತೋರ್ವ ನಾಯಕ ತರ್ವಿಂದರ್ ಸಿಂಗ್ ಮರ್ವಾ ಅವರು ರಾಹುಲ್ ಗಾಂಧಿ ಅವರಿಗೆ ಸಾರ್ವಜನಿಕವಾಗಿ ಹತ್ಯೆ ಬೆದರಿಕೆ ಹಾಕಿದ್ದಾರೆ ಎಂದು ಅಜಯ್ ಮಕೆನ್ ಆರೋಪಿಸಿದ್ದಾರೆ.
VIDEO | Congress leader Ajay Maken reaches Tughlak Road Police Station in Delhi to file a complaint against Union Minister Ravneet Singh Bittu over him calling Lok Sabha LoP and Congress leader Rahul Gandhi 'No 1 terrorist'. pic.twitter.com/df15P71Izx
— Press Trust of India (@PTI_News) September 18, 2024
ತರ್ವಿಂದರ್ ಸಿಂಗ್ ಮರ್ವಾ ತನ್ನ ಭಾಷಣದಲ್ಲಿ “ನೀವು ಉತ್ತಮವಾಗಿ ವರ್ತನೆ ಮಾಡಿ, ಇಲ್ಲವಾದರೆ ನಿಮ್ಮ ಅಜ್ಜಿಯಂತೆಯೇ (ಇಂದಿರಾ ಗಾಂಧಿ) ನಿಮ್ಮ ಗತಿಯಾಗುತ್ತದೆ” ಎಂದು ಹೇಳಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಇನ್ನು ಸೆಪ್ಟೆಂಬರ್ 16ರಂದು ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಅವರು ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಸಚಿವ ರಘುರಾಜ್ ಸಿಂಗ್ ಕೂಡ ರಾಹುಲ್ ಗಾಂಧಿಯನ್ನು ‘ಭಾರತದ ನಂಬರ್ ಒನ್ ಭಯೋತ್ಪಾದಕ’ ಎಂದು ಹೇಳಿದ್ದಾರೆ.
