ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನುಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವಕಾಶ ನೀಡಿದ್ದಾರೆ. ಅವರ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಹೈಕೋರ್ಟ್ ತೀರ್ಪು ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ನಡುವಿನ ಕದನಕ್ಕೆ ತಾತ್ಕಾಲಿಕ ವಿರಾಮ ನೀಡಿದೆ.
ಕಳೆದ ಎರಡು ತಿಂಗಳಿಂದ ರಾಜ್ಯಪಾಲ ಗೆಹ್ಲೋಟ್ ಅವರಿಗೆ ಕೆಲಸಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಮತ್ತು ವಿಪಕ್ಷಗಳ ಕಾರ್ಯಕರ್ತರು ದಶಕಗಳಷ್ಟು ಹಿಂದಿನ ಅವ್ಯವಹಾರ, ಅಕ್ರಮ, ಹಗರಣಗಳ ಆರೋಪಗಳ ಮೇಲೆ ನಾನಾ ಅರ್ಜಿಗಳನ್ನು ರಾಜ್ಯಪಾಲರಿಗೆ ಸಲ್ಲಿಸುತ್ತಿದ್ದಾರೆ. ಅವುಗಳಲ್ಲಿ ಯಾರ ಮೇಲಿನ ಆರೋಪಗಳನ್ನು ಕಾನೂನು ತನಿಖೆ/ಕ್ರಮಕ್ಕೆ ನೀಡಬೇಕು. ಯಾವುದನ್ನು ಬದಿಗಿಡಬೇಕು ಎಂದು ಪರಿಶೀಲಿಸುವುದರಲ್ಲಿ ಗೆಹ್ಲೋಟ್ ನಿರತರಾಗಿದ್ದಾರೆ.
ಇತ್ತೀಚೆಗೆ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಮೂವರು ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಮುಡಾದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ 14 ಪರ್ಯಾಯ ನಿವೇಶನ ಮಂಜೂರು ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಅನುಮತಿ ಕೋರಿದ್ದರು. ಅವರು ದೂರು ನೀಡಿದ ದಿನವೇ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿ, ಆದೇಶಿಸಿದರು.
ಇನ್ನು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ ಕಲಬುರಗಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಅಕ್ರಮವಾಗಿ ಭೂಮಿ ಪಡೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಶಿಕ್ಷಣ ಸಂಸ್ಥೆ ನಡೆಸಲು ಮಂಜೂರಾಗಿದ್ದ ನಿವೇಶನ ಮತ್ತು ಎರಡು ಎಕರೆ ಜಾಗವನ್ನು ವಿಧಾನ ಪರಿಷತ್‌ನ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಬಿರಿಯಾನಿ ಜಾಯಿಂಟ್ ನಿರ್ಮಾಣಕ್ಕಾಗಿ ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತನಿಖೆಗಾಗಿ ರಾಜ್ಯಪಾಲರಿಗೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಇಂತಹ ಹಲವಾರು ದೂರುಗಳು ರಾಜಭವನಕ್ಕೆ ರವಾನೆಯಾಗುತ್ತಿವೆ.
ಅಂದಹಾಗೆ, ಲೋಕಸಭೆ ಚುನಾವಣೆಯ ನಂತರ ಭೂ ವ್ಯವಹಾರಗಳಿಗೆ ಬಿಜೆಪಿ ಹಗರಣದ ಟ್ಯಾಗ್ ನೀಡಲು ಆರಂಭಿಸಿತು. ಈಗ, ಅದು ಬಿಜೆಪಿಯ ಬುಡಕ್ಕೂ ಬಂದು ನಿಂತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸುತ್ತಿದೆ.
ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದ್ದ ಎಲ್ಲ ಹಗರಣಗಳ ತನಿಖೆಗೆ ಗೃಹ ಸಚಿವ ಜಿ ಪರಮೇಶ್ವರ್ ನೇತೃತ್ವದಲ್ಲಿ ಐವರು ಸದಸ್ಯರ ಸಂಪುಟ ಉಪ ಸಮಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 10ರಂದು ರಚಿಸಿದ್ದಾರೆ. 2019ರ ಜುಲೈನಿಂದ 2021ರ ಜುಲೈವರೆಗೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೆ, 2021ರ ಜುಲೈನಿಂದ 2023ರ ಮೇವರೆಗೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.
ಇವರಿಬ್ಬರ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಸರಿಸುಮಾರು 20ರಿಂದ 25 ಹಗರಣಗಳು ನಡೆದಿವೆ. ಆ ಎಲ್ಲ ಹಗರಣಗಳ ಬಗ್ಗೆ ತಮ್ಮ ಸಮಿತಿ ಪರಿಶೀಲಿಸಿ ಸಂಪುಟಕ್ಕೆ ವರದಿ ಸಲ್ಲಿಸಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಪ್ರಕರಣಗಳು ಧೂಳು ಹಿಡಿಯಬಾರದು. ಅವುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದೂ ಅವರು ಹೇಳಿಕೊಂಡಿದ್ದಾರೆ.
ಸರ್ಕಾರ ಸಮಿತಿ ರಚಿಸಿರುವುದನ್ನು ಸೇಡಿನ ರಾಜಕಾರಣ ಎಂದು ಬಿಜೆಪಿ ಕರೆದಿದೆ. ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ‘ಬಿಜೆಪಿ ಮಾಡುತ್ತಿರುವುದು ಮತ್ತೇನು?’ ಎಂದಿದ್ದಾರೆ.
”ನನ್ನ ವಿರುದ್ಧದ ಮುಡಾ ಪ್ರಕರಣದಲ್ಲಿ ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ. ನಾವು ಸೇಡಿನ ರಾಜಕಾರಣ ಮಾಡುವುದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದರತ್ತ ನಮ್ಮ ಗಮನವಿದೆ” ಎಂದು ಸೇಡಿನ ರಾಜಕಾರಣದ ಬಗೆಗಿನ ಬಿಜೆಪಿಯ ಆರೋಪವನ್ನು ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ.
ಸಂಪುಟ ಉಪಸಮಿತಿಯಲ್ಲದೆ, ಕೊರೋನ ನಿರ್ವಹಣೆಯಲ್ಲಿನ ಅವ್ಯವಹಾರ, ಪಿಎಸ್‌ಐ ನೇಮಕಾತಿ ಹಗರಣ, ಗುತ್ತಿಗೆದಾರರ ದೂರುಗಳ ಕುರಿತು ತನಿಖೆ ನಡೆಸಲು ಸರ್ಕಾರವು ತನಿಖಾ ಆಯೋಗಗಳನ್ನು ಕೂಡ ರಚಿಸಿದೆ. 40% ಕಮಿಷನ್ ಆರೋಪ, ಆಪಾದಿತ ಬಿಟ್ ಕಾಯಿನ್ ಹಗರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಈ ಎಲ್ಲ ಅವ್ಯವಹಾರಗಳು ಬಿಜೆಪಿಯ ದುರಾಡಳಿತದಲ್ಲಿ ನಡೆದಿವೆ ಎಂದು ಆರೋಪಿಸಲಾಗಿದೆ.
ರಾಜ್ಯದಲ್ಲಿ ಕೊರೋನ ಅವ್ಯವಹಾರದ ಬಗ್ಗೆ ಈಗಾಗಲೇ ತನಿಖೆ ನಡೆಸಿರುವ ತನಿಖಾ ಆಯೋಗ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಹಿಂದಿನ ಬಿಜೆಪಿ ಸರ್ಕಾರವು, ಕೋಟ್ಯಂತರ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ವರದಿಯಲ್ಲಿ ವಿವರಿಸಿರುವುದಾಗಿ ಸುದ್ದಿಯಾಗಿದೆ.
ಈ ವರದಿ ಓದಿದ್ದೀರಾ?: ಮುಡಾ ಪ್ರಕರಣ | ಅಂತಿಮ ಹಂತದ ವಿಚಾರಣೆ ವೇಳೆ ಪರಿಣಾಮಕಾರಿಯಾಗಿ ವಾದಿಸಿದ ಸಿಎಂ ಪರ ವಕೀಲರು
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಇದೇ ರೀತಿಯ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಬಾಕಿ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಮಾತ್ರವೇ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ರಾಜ್ಯಪಾಲರ ಮೂಲಕ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.
ಬಿಜೆಪಿ ಆಡಳಿತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಜೊಲ್ಲೆ, ಶಾಲಾ ಮಕ್ಕಳಿಗೆ ಮೊಟ್ಟೆ ಪೂರೈಕೆಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಕೇವಲ, ಆ ಕೋರಿಕೆಯನ್ನು ತಿರಸ್ಕರಿಸಲು ರಾಜ್ಯಪಾಲರು ಎರಡೂವರೆ ವರ್ಷ ತೆಗೆದುಕೊಂಡರು ಎಂದು ಸಿದ್ದರಾಮಯ್ಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಅಂದಹಾಗೆ, ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಜೊಲ್ಲೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಿಂದ ಬಯಲಿಗೆ ಬಂದಿತ್ತು. ಜೊಲ್ಲೆ ಪ್ರಕರಣ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ, ಆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲರು, 23 ವರ್ಷಗಳ ಹಿಂದಿನ ವಿಚಾರದಲ್ಲಿ ಸಿದ್ದರಾಮಯ್ಯರನ್ನು ಆರೋಪಿಯನ್ನಾಗಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇನ್ನು, ನಿರಾಣಿ ಪ್ರಕರಣದಲ್ಲಿ ಸ್ಪಷ್ಟನೆ ಕೇಳಲಾಗಿದ್ದು, ಕುಮಾರಸ್ವಾಮಿ ವಿರುದ್ಧದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹೈಕೋರ್ಟ್‌ಗೆ ಸಿಂಘ್ವಿ ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2023ರ ನವೆಂಬರ್‌ನಲ್ಲಿ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಲು ಲೋಕಾಯುಕ್ತ ವಿಶೇಷ ತನಿಖಾ ತಂಡ ಅನುಮತಿ ಕೋರಿತ್ತು.
ಇದೆಲ್ಲದರ ನಡುವೆ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದಿದ್ದ ಡಿನೋಟಿಫಿಕೇಷನ್ ಹಗರಣವನ್ನು ಈದಿನ.ಕಾಮ್ ಬಯಲಿಗೆಳೆದಿದೆ. ಬೆಂಗಳೂರಿನ ಗಂಗಾನಗರದಲ್ಲಿ ಹಿಂದುಳಿದ ವರ್ಗಗಳ ವಸತಿಗಾಗಿ ವಸತಿ ಸಮುಚ್ಚಯ ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳಲಾಗಿದ್ದ ಭೂಮಿಯನ್ನು ಎಚ್.ಡಿ ಕುಮಾರಸ್ವಾಮಿ ಅವರ ಸಂಬಂಧಿಕರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂಬುದು ದಾಖಲೆಗಳ ಸಮೇತ ಬಯಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.