ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿವಿ ಪದವಿ ಘಟಕ ಕಾಲೇಜುಗಳನ್ನು ರಾಜ್ಯ ಸರ್ಕಾರದ ಅಧೀನಕ್ಕೆ ಪಡೆಯಲು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಹೋರಾಟ ಸಮಿತಿಯಿಂದ ಮಂಜನಾಡಿ, ಸಜಿಪನಡು ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದರು.
ಪ್ರಬಲ ಜನಾಭಿಪ್ರಾಯದಿಂದಾಗಿ ವಿವಿಗಳನ್ನು ಮುಚ್ಚುವ ನಿರ್ಧಾರವನ್ನು ಸಡಿಲಿಸಿ, ಅಡ್ಮಿಷನ್ ಆರಂಭಿಸಲಾಗಿದ್ದ ಮಂಗಳೂರು ವಿವಿಯ ನಾಲ್ಕು ಘಟಕ ಪದವಿ ಕಾಲೇಜುಗಳನ್ನು ಮುಚ್ಚುವ ಪ್ರಕ್ರಿಯೆ ಮತ್ತೆ ಆರಂಭಗೊಂಡಿವೆ. ಕೊಣಾಜೆಯ ಮಂಗಳೂರು ವಿವಿ ಆವರಣದಲ್ಲಿರುವ ಪದವಿ ಕಾಲೇಜು ಹಾಗೂ ನೆಲ್ಯಾಡಿ ಪದವಿ ಕಾಲೇಜುಗಳಲ್ಲಿ ಬಿಕಾಂ ಪದವಿ ಹೊರತುಪಡಿಸಿ ಉಳಿದ ವಿಭಾಗಗಳಲ್ಲಿ ದಾಖಲಾತಿ ತಡೆಹಿಡಿದು ಪ್ರಥಮ ವರ್ಷದ ತರಗತಿಗಳನ್ನು ರದ್ದುಗೊಳಿಸಲಾಗುತ್ತಿದೆ.
ಇನ್ನುಳಿದ ಎರಡು ಘಟಕ ಪದವಿ ಕಾಲೇಜುಗಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಈ ಹಿನ್ನಲೆಯಲ್ಲಿ ವಿವಿ ಘಟಕ ಪದವಿ ಕಾಲೇಜುಗಳನ್ನು ರಾಜ್ಯ ಸರ್ಕಾರದ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯಿಂದಲೇ ನಡೆಸಬೇಕೆಂಬ ಬೇಡಿಕೆಯನ್ನು ಬಲಗೊಳಿಸಲು, ಘಟಕ ಕಾಲೇಜುಗಳನ್ನು ಉಳಿಸುವ ಹೋರಾಟವನ್ನು ತೀವ್ರಗೊಳಿಸಲು ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ.
ಅದರ ಭಾಗವಾಗಿ ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು “ಘಟಕ ಪದವಿ ಕಾಲೇಜುಗಳನ್ನು ರಾಜ್ಯ ಸರ್ಕಾರವೇ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯ ಮೂಲಕ ನಡೆಸಬೇಕು” ಎಂಬ ನಿರ್ಣಯವನ್ನು ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಲು ತೀರ್ಮಾನಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪ್ರತಿಯೊಂದು ಮಗುವಿಗೂ ಗುಣಾತ್ಮಕ, ಸಮಾನ ಶಿಕ್ಷಣದ ಅವಶ್ಯವಿದೆ: ನಿವೃತ್ತ ನ್ಯಾ. ನಾಗಮೋಹನ ದಾಸ್
ಸಜಿಪನಡು ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಇಸ್ಮಾಯಿಲ್ ಸಮ್ಮುಖದಲ್ಲಿ ಮನವಿ ಪತ್ರ ನೀಡಿದರು. ಹಾಗೂ ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿಯವರಿಗೂ ಮನವಿ ಪತ್ರ ನೀಡಲಾಯಿತು. ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮಂಗಳೂರು ವಿವಿ ಪದವಿ ಘಟಕ ಕಾಲೇಜುಗಳ ಉಳಿಸಿ ಹೋರಾಟ ಸಮಿತಿಯ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಹೋರಾಟ ಸಮಿತಿಯ ನಿಯೋಗದಲ್ಲಿ ಸಂಚಾಲಕ ರಿಝ್ವಾನ್ ಹರೇಕಳ, ರಝಾಕ್ ಮೊಂಟೆಪದವು, ರಝಾಕ್ ಮುಡಿಪು ಸೇರಿದಂತೆ ಮುಂತಾದವರು ಇದ್ದರು.