ತಮ್ಮ ಪತ್ನಿ ಸುನೀತಾ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುತ್ತಾರೆ ಎಂಬ ದಟ್ಟ ವದಂತಿಯನ್ನು ಕೇಜ್ರೀವಾಲ್ ಹುಸಿಗೊಳಿಸಿದ್ದಾರೆ. ಲಾಲೂಪ್ರಸಾದ್ ಯಾದವ್ ಅವರು ಜೈಲಿಗೆ ಹೋಗುವ ಮುನ್ನ ತಮ್ಮ ಪತ್ನಿ ರಬ್ಡೀದೇವಿಯನ್ನು ಮುಖ್ಯಮಂತ್ರಿ ಮಾಡಿ ವಂಶಾಡಳಿತದ ತೀಕ್ಷ್ಣ ಟೀಕೆಗೆ ಗುರಿಯಾಗಿದ್ದರು. ಅಂತಹ ಆರೋಪಗಳಿಂದ ದೂರ ಇರ ಬಯಸಿದ್ದಾರೆ ಕೇಜ್ರೀವಾಲ್
ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಅಚ್ಚರಿಯ ಆಘಾತ ನೀಡುವುದು ಮೋದಿ-ಶಾ ಜೋಡಿಯ ಆಡಳಿತ ವೈಖರಿ. ಈ ತಂತ್ರದಲ್ಲಿ ಇವರನ್ನು ಸರಿಗಟ್ಟಿದವರು ಮತ್ತೊಬ್ಬರಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ರಾಹುಲ್ ಅವರನ್ನು ಅಮೇಠಿಗೆ ಬದಲಾಗಿ ರಾಯಬರೇಲಿಯಿಂದ ಕಣಕ್ಕಿಳಿಸಿ, ಅಮೇಠಿಯಲ್ಲಿ ಸ್ಮೃತಿ ಇರಾನಿ ಅವರನ್ನು ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತರೊಬ್ಬರಿಂದ ಸೋಲಿಸಿತ್ತು ಕಾಂಗ್ರೆಸ್ ಪಕ್ಷ. ಮೋ-ಶಾ ಜೋಡಿಗೆ ಅಚ್ಚರಿ-ಆಘಾತ ನೀಡಿದ್ದ ನಡೆಯಿದು.
ಇದೀಗ ಮೋ-ಶಾ ಬಂಧನದ ಬಲೆಯನ್ನು ಹರಿದೊಗೆದು ಹೊರಬಿದ್ದ ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಹಠಾತ್ತನೆ ರಾಜೀನಾಮೆ ನೀಡುವ ಮೂಲಕ ಆಮ್ ಆದ್ಮೀ ಪಾರ್ಟಿಯ ಅರವಿಂದ ಕೇಜ್ರೀವಾಲ್ ಮೋ-ಶಾಗೆ ಮತ್ತೊಂದು ಅಚ್ಚರಿ-ಆಘಾತ ನೀಡಿದ್ದಾರೆ. ಮೋದಿಯವರ ಹುಟ್ಟಹಬ್ಬದ ಸಿಹಿದಿನವನ್ನು ಕಹಿ ಆಗಿಸಿದರು ಕೇಜ್ರೀವಾಲ್.
ತಮ್ಮ ಸ್ಥಾನಕ್ಕೆ ತಮ್ಮದೇ ಸಚಿವ ಸಂಪುಟದ ಕಿರಿಯ ಸದಸ್ಯೆ ಆತಿಶಿ ಮಾರ್ಲೆನಾ ಅವರನ್ನು ಆರಿಸಿದ್ದಾರೆ. ಹೊಳೆ ಹೊಳೆವ ಶೈಕ್ಷಣಿಕ ಅರ್ಹತೆಗಳ ಮಾಲೆಯನ್ನೇ ಧರಿಸಿರುವ ಆತಿಶಿ ವಯಸ್ಸು 43. ವಿಧಾನಸಭೆಗೆ ಆಯ್ಕೆಯಾದ ಮೊದಲ ಅವಧಿಯಲ್ಲೇ ಮುಖ್ಯಮಂತ್ರಿ ಆಗಲಿದ್ದಾರೆ.
ರಾಜೀನಾಮೆಯಿಂದ ತಮ್ಮ ಚಾರಿತ್ರ್ಯಕ್ಕೆ ಬಿಜೆಪಿ ಅಂಟಿಸಿದ ಭ್ರಷ್ಟಾಚಾರದ ಕಳಂಕವನ್ನು ತೊಳೆದುಕೊಳ್ಳುವುದು ಕೇಜ್ರೀವಾಲ್ ಉದ್ದೇಶ. ಹಾಗೆಯೇ ಮಹಿಳೆಯೊಬ್ಬರನ್ನು ಅದರಲ್ಲಿಯೂ ಆತಿಶಿ ಅವರನ್ನು ತಮ್ಮ ಸ್ಥಾನಕ್ಕೆ ತಂದಿರುವುದರ ಹಿಂದೆಯೂ ಹಲವು ಲೆಕ್ಕಾಚಾರಗಳನ್ನು ಕಾಣಲಾಗಿದೆ.
ಕೇಜ್ರೀವಾಲ್ ಸಂಪುಟಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ ಎಂಬ ವ್ಯಾಪಕ ಟೀಕೆಯಿತ್ತು. ಆಮ್ ಆದ್ಮೀ ಪಾರ್ಟಿ ಮತ್ತು ಕೇಜ್ರೀವಾಲ್ ಸರ್ಕಾರವನ್ನು ‘ಬಾಯ್ಸ್ ಕ್ಲಬ್’ ಎಂದೂ ಮೂದಲಿಸಲಾಗುತ್ತಿತ್ತು. ಮಧ್ಯಪ್ರದೇಶದ ಬಿಜೆಪಿ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರಗಳು ಮಹಿಳೆಯರಿಗೆ ಮಾಸಿಕ ನಗದು ನೀಡುವ ಲಾಡ್ಲೀ ಬೆಹೆನ್ (ಮುದ್ದಿನ ಸೋದರಿ) ಮತ್ತು ಗೃಹಲಕ್ಷ್ಮೀ ಮಾದರಿಯ ಯೋಜನೆಯೊಂದನ್ನು ದೆಹಲಿಯಲ್ಲಿ ಜಾರಿಗೊಳಿಸುವ ಉದ್ದೇಶ ಕೇಜ್ರೀವಾಲ್ ಅವರಿಗಿದೆ. ಈ ನಿಟ್ಟಿನಲ್ಲಿ ಮಹಿಳೆಯೇ ಮುಖ್ಯಮಂತ್ರಿ ಆದರೆ ಮಹಿಳಾ ಮತದಾರರೊಂದಿಗೆ ಆಮ್ ಆದ್ಮೀ ಪಾರ್ಟಿಯ ಯಶಸ್ವೀ ಸೇತುವೆ ಕಟ್ಟುವುದು ಸಾಧ್ಯ.
ತಮ್ಮ ಪತ್ನಿ ಸುನೀತಾ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುತ್ತಾರೆ ಎಂಬ ದಟ್ಟ ವದಂತಿಯನ್ನು ಕೇಜ್ರೀವಾಲ್ ಹುಸಿಗೊಳಿಸಿದ್ದಾರೆ. ಲಾಲೂಪ್ರಸಾದ್ ಯಾದವ್ ಅವರು ಜೈಲಿಗೆ ಹೋಗುವ ಮುನ್ನ ತಮ್ಮ ಪತ್ನಿ ರಬ್ಡೀದೇವಿಯನ್ನು ಮುಖ್ಯಮಂತ್ರಿ ಮಾಡಿ ವಂಶಾಡಳಿತದ ತೀಕ್ಷ್ಣ ಟೀಕೆಗೆ ಗುರಿಯಾಗಿದ್ದರು. ಅಂತಹ ಆರೋಪಗಳಿಂದ ದೂರ ಇರ ಬಯಸಿದ್ದಾರೆ ಕೇಜ್ರೀವಾಲ್.
ಆತಿಶಿ ಸ್ವಚ್ಛ ವರ್ಚಸ್ಸಿನ, ಪ್ರತಿಭಾಶಾಲಿ ಮಾತ್ರವಲ್ಲ, ಕೇಜ್ರೀವಾಲ್ ಅವರಿಗೆ ನೂರಕ್ಕೆ ನೂರು ನಿಷ್ಠೆಯನ್ನು ತೋರುತ್ತ ಬಂದಿರುವವರು. ಕೇಜ್ರೀವಾಲ್ ಮತ್ತೆ ಬಯಸಿದಾಗ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡುವ ಕಡು ನಿಷ್ಠಾವಂತೆ. ಅದನ್ನು ಈಗಾಗಲೆ ಸಾರಿ ಹೇಳಿದ್ದಾರೆ ಆತಿಶಿ. ತಮ್ಮ ರಾಜಕೀಯ ಗುರು, ಹಿರಿಯಣ್ಣ ಕೇಜ್ರೀವಾಲ್ ಅವರು ಹಿಂತಿರುಗುವ ತನಕ ಮಾತ್ರವೇ ಮುಖ್ಯಮಂತ್ರಿ ಹುದ್ದೆಯನ್ನು ಸಂಭಾಳಿಸುವುದಾಗಿ ಘೋಷಿಸಿದ್ದಾರೆ. ಶ್ರೀರಾಮಚಂದ್ರ ವನವಾಸದಿಂದ ಹಿಂತಿರುಗಿ ಬರುವ ತನಕ ಆತನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ಆತನ ಹೆಸರಿನಲ್ಲಿ ರಾಜ್ಯಭಾರದ ಜವಾಬ್ದಾರಿ ನಿರ್ವಹಿಸಿದ ಭರತನೇ ತಮ್ಮ ಆದರ್ಶ ಮಾದರಿ ಎಂದು ಪಕ್ಷದ ಇತರೆ ನಾಯಕರು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಮಹಿಳೆಗಾಗಿ ತೆರವು ಮಾಡಬೇಕೆಂಬ ದೊಡ್ಡ ಮನಸ್ಸಿನಿಂದ ಕೇಜ್ರೀವಾಲ್ ಅವರು ಆತಿಶಿ ಅವರಿಗೆ ಕುರ್ಚಿ ಬಿಟ್ಟುಕೊಟ್ಟಿಲ್ಲ. ಜನ ತಮ್ಮನ್ನು ಪುನಃ ಆರಿಸಿ ಕಳಿಸುವ ತನಕ ಆತಿಶಿ ಈ ಹುದ್ದೆಯನ್ನು ನಿರ್ವಹಿಸುತ್ತಾರೆಂದು ನಿಚ್ಚಳವಾಗಿ ಹೇಳಿದ್ದಾರೆ.
ಹೇಮಂತ್ ಸೊರೇನ್ ಜೈಲಿನಿಂದ ಜಾಮೀನಿನ ಮೇಲೆ ಹೊರಬಿದ್ದ ನಂತರ ಝಾರ್ಖಂಡ್ ಮುಖ್ಯಮಂತ್ರಿ ಸ್ಥಾನವನ್ನು ಮನಸ್ಸಿಲ್ಲದ ಮನಸ್ಸಿನಿಂದ ತೆರವು ಮಾಡಿ, ಅಸಮಾಧಾನದಿಂದ ಕುದಿದು ಕಡೆಗೆ ಬಿಜೆಪಿಯನ್ನು ಸೇರಿದ ಚಂಪೈ ಸೊರೇನ್ ಉದಾಹರಣೆ ತೀರಾ ಇತ್ತೀಚಿನದು. ಈ ನಿದರ್ಶನ ಕೇಜ್ರೀವಾಲ್ ಕಣ್ಣ ಮುಂದಿದೆ.
ಕೆಲವೇ ತಿಂಗಳುಗಳ ಕಾಲವಾದರೂ ಸರಿ ಆತಿಶಿ ದೆಹಲಿಯ ಮುಖ್ಯಮಂತ್ರಿ ಆಗಲಿದ್ದಾರೆ. ಈ ಹಿಂದೆ ಕಾಂಗ್ರೆಸ್ಸಿನ ಶೀಲಾ ದೀಕ್ಷಿತ್ 15 ವರ್ಷಗಳ ಕಾಲ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ 52 ದಿನಗಳ ಕಾಲ ದೆಹಲಿಯ ಮುಖ್ಯಮಂತ್ರಿಗಳಾಗಿದ್ದರು. ಶೀಲಾ ಅವರು ಮುಖ್ಯಮಂತ್ರಿ ಆದಾಗ ಅವರ ವಯಸ್ಸು 60. ಸುಷ್ಮಾ ವಯಸ್ಸು 46. ಮುಖ್ಯಮಂತ್ರಿಯಾಗಿ ಆತಿಶಿ ಅವರದು ಏರುದಾರಿಯ ಪಯಣ. ಧರಿಸಲಿರುವುದು ಕಷ್ಟಕಾಲದ ಮುಳ್ಳಿನ ಮುಕುಟ. ಎದುರಿಸಬೇಕಿರುವುದು ಸವಾಲುಗಳ ಸರಮಾಲೆಯನ್ನು.
2013ರಲ್ಲಿ ಆರಂಭವಾದ ತಮ್ಮ ರಾಜಕೀಯ ಪಯಣ ಆತಿಶಿ ಅವರದು. 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಗಂಡಾಳಿಕೆಯು ಹೆಣ್ಣುಮಗಳೊಬ್ಬಳನ್ನು ಹಣಿಯಲು ಯಾವ್ಯಾವ ಸ್ತ್ರೀದ್ವೇಷಿ ದಾರಿಗಳನ್ನು ಹುಡುಕುತ್ತದೆಂಬ ದುಷ್ಟತನದ ಅರಿವು ಆಕೆಗೆ ಆಗಿತ್ತು. ಆಕೆಯ ವಿರುದ್ಧ ಅತ್ಯಂತ ಅಶ್ಲೀಲ ಭಾಷೆಯ ಕರಪತ್ರವೊಂದನ್ನು ಹರಿಯಬಿಡಲಾಗಿತ್ತು. ಗಂಭೀರ್ ತಮ್ಮ ಪಾತ್ರವನ್ನು ನಿರಾಕರಿಸಿದರು. ಆದರೆ, ಕರಪತ್ರ ಕೃತ್ಯವನ್ನು ಖಂಡಿಸಲಿಲ್ಲ.
ಆತಿಶಿ ಮಾರ್ಲೆನಾ ತಂದೆ ತಾಯಿ ಎಡಪಂಥೀಯ ವಿಚಾರಧಾರೆಯವರು. ಮಗಳ ಹೆಸರಿನಲ್ಲಿ ಮಾರ್ಕ್ಸ್ ಮತ್ತು ಲೆನಿನ್ ಇರಬೇಕೆಂದು ಮಾರ್ಲೆನಾ ಎಂದು ಕರೆದರು. ಈಕೆ ಕ್ರೈಸ್ತಳೆಂದೂ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ್ದರು. ಹೆಸರಿನಿಂದ ಮಾರ್ಲೆನಾ ಪದವನ್ನು ತ್ಯಜಿಸಿ ಆತಿಶಿ ಎಂದಷ್ಟು ಉಳಿಸಿಕೊಂಡರು.
ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮೀ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು. ಓರೆಕೋರೆಗಳನ್ನು ತಿದ್ದಿಕೊಂಡರೆ ಈಗಲೂ ಈ ಪ್ರಯೋಗ ಸತ್ವಭರಿತ ಎನಿಸಿಕೊಂಡೀತು. 2015ರಲ್ಲಿ ಪ್ರಚಂಡ ಬಹುಮತ ಗಳಿಸಿದ ಕೇಜ್ರೀವಾಲ್ ಮತ್ತು ಸಂಗಾತಿಗಳ ಚುನಾವಣಾ ಯಶಸ್ಸಿನ ಕುರಿತ ಕುತೂಹಲ ದಶದಿಕ್ಕುಗಳಿಗೆ ಹಬ್ಬಿತ್ತು. ಈ ಪಕ್ಷದ ಜನಪ್ರಿಯತೆ ದೆಹಲಿಯ ಗಡಿಗಳ ದಾಟಿ ದೇಶದ ಉದ್ದಗಲಕ್ಕೆ ಹಬ್ಬಿದರೆ ಗತಿಯೇನು ಎಂದು ಮೋದಿ-ಅಮಿತ್ ಶಾ ಜೋಡಿ ಕೂಡ ಚಿಂತಾಕ್ರಾಂತವಾಗಿದ್ದ ದಿನಗಳೂ ಇದ್ದವು. ಕೇಜ್ರೀವಾಲ್ ಪಾರ್ಟಿಯ ರೆಕ್ಕ ಪುಕ್ಕಗಳನ್ನು ಮೋದಿ ಸರ್ಕಾರ ಕತ್ತರಿಸಿ ಕುತ್ತಿಗೆಯನ್ನೂ ಅದುಮಿ ಇಟ್ಟದ್ದು ಅಂತಹ ಆ ದಿನಗಳಲ್ಲೇ. ಕೇಜ್ರೀವಾಲ್ ಸರ್ಕಾರದ ಅಧಿಕಾರಗಳನ್ನು ಕಿತ್ತುಕೊಂಡು ಉಪರಾಜ್ಯಪಾಲರಿಗೆ ನೀಡಲಾಯಿತು. ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯಸಿಂಗ್ ಅವರನ್ನು ಕಡೆಗೆ ಮುಖ್ಯಮಂತ್ರಿ ಕೇಜ್ರೀವಾಲ್ ಅವರನ್ನು ಅಬಕಾರಿ ಹಗರಣದ ಆರೋಪ ಹೊರಿಸಿ ಜೈಲಿಗೆ ತಳ್ಳಲಾಯಿತು. ಆದರೂ ಆಮ್ ಆದ್ಮೀ ಪಾರ್ಟಿಯನ್ನು ಒಡೆಯುವ ತಂತ್ರ ಫಲಿಸಲಿಲ್ಲ. ಆಪ್ ಶಾಸಕರನ್ನು ಖರೀದಿಸಲಾಗಲಿಲ್ಲ.
ಕೇಜ್ರೀವಾಲ್ ಜೈಲಿನಿಂದ ಹೊರಬಿದ್ದು ರಾಜೀನಾಮೆ ನೀಡಿದ್ದೇಕೆ, ವಿಧಾನಸಭೆಯನ್ನು ವಿಸರ್ಜಿಸುವ ಶಿಫಾರಸು ಮಾಡಬಹುದಿತ್ತಲ್ಲ ಎನ್ನುವವರಿದ್ದಾರೆ. ಆದರೆ ಈ ಹಿಂದೆ ಕೇಜ್ರೀವಾಲ್ ವಿಧಾನಸಭೆಯನ್ನು ವಿಸರ್ಜಿಸಿದ್ದಾಗ ಮೋದಿ ಸರ್ಕಾರ ತ್ವರಿತವಾಗಿ ಚುನಾವಣೆ ನಡೆಸಲಿಲ್ಲ. ಒಂದೂಕಾಲು ವರ್ಷ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು.
ದೆಹಲಿ ವಿಧಾನಸಭಾ ಚುನಾವಣೆಗಳು ಮುಂಬರುವ ಫೆಬ್ರವರಿಯಲ್ಲಿ ನಡೆಯಲಿವೆ. ಇದೇ ನವೆಂಬರ್‌ನಲ್ಲಿ ನಡೆಯಬೇಕಿರುವ ಮಹಾರಾಷ್ಟ್ರ ಚುನಾವಣೆಗಳ ಜೊತೆಗೇ ದೆಹಲಿಯನ್ನೂ ಸೇರಿಸಿ ಎಂಬುದು ಕೇಜ್ರೀವಾಲ್ ಆಗ್ರಹ.
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಕೇಜ್ರೀವಾಲ್ ಹರಿಯಾಣದ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಆನಂತರ ದೆಹಲಿಯಲ್ಲಿ ನೂರಾರು ಚುನಾವಣಾ ಪ್ರಚಾರ ಸಭೆಗಳು ಮತ್ತು ಮನೆ ಮನೆಗೆ ತೆರಳಿ ರಭಸದ ಪ್ರಚಾರ ನಡೆಸಲಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋಲುವ ಸ್ಥಿತಿ ಎದುರಿಸಿದೆ. ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಆಪ್ ನಡುವೆ ಸೀಟು ಹಂಚಿಕೆಯ ಮಾತುಕತೆಗಳು ಮುರಿದು ಬಿದ್ದಿವೆ. ಒಟ್ಟು 90 ಸೀಟುಗಳ ಪೈಕಿ 89ರಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಆಪ್ ಪ್ರಕಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಜ್ರೀವಾಲ್ ಬಿಡುಗಡೆ ಮತ್ತು ಚುನಾವಣಾ ಪ್ರಚಾರ ಕಾಂಗ್ರೆಸ್ ಪಕ್ಷವನ್ನು ಚಿಂತೆಗೆ ತಳ್ಳಿದೆ. ಬಿಜೆಪಿ ವಿರೋಧಿ ಮತಗಳು ಒಡೆದು ಹಂಚಿ ಹೋಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. 2019ರ ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಕೇಜ್ರೀವಾಲ್ ಪಕ್ಷ ಒಂದು ಸೀಟನ್ನೂ ಗೆಲ್ಲಲಾಗಿರಲಿಲ್ಲ. ಶೇ.ಒಂದಕ್ಕಿಂತ ಕಡಿಮೆ ಮತಗಳನ್ನು ಗಳಿಸಿತ್ತು.
2022ರ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ 182ರ ಪೈಕಿ 156 ಸೀಟುಗಳನ್ನು ಗೆದ್ದುಕೊಂಡಿತ್ತು. ಆಮ್ ಆದ್ಮೀ ಪಾರ್ಟಿ ಐದು ಸೀಟುಗಳನ್ನು ಗೆದ್ದರೂ ಶೇ.13ರಷ್ಟು ಮತ ಗಳಿಸಿತ್ತು. ಆಪ್ ನ ಈ ಸ್ಪರ್ಧೆಯಿಂದ ಬಿಜೆಪಿಗೆ 33 ಹೆಚ್ಚುವರಿ ಸೀಟುಗಳ ಲಾಭವಾಗಿತ್ತು. ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು.
ಬಿಗ್ ಬ್ರೇಕಿಂಗ್ ನ್ಯೂಸ್ | ಎಚ್‌ಡಿಕೆ-ಬಿಎಸ್‌ವೈ ಜಂಟಿ ಹಗರಣ: ನಾಳೆ ನ್ಯಾಯಾಧೀಶರ ಮುಂದೆ ಅಧಿಕಾರಿಗಳಿಂದ 164 ನಿಯಮದಡಿ ಹೇಳಿಕೆ
ಹರಿಯಾಣದಲ್ಲಿ ಸೋಲುತ್ತಿರುವ ಬಿಜೆಪಿಗೆ ಆಪ್ ಸ್ಪರ್ಧೆ ಪರೋಕ್ಷವಾಗಿ ಪ್ರಾಣವಾಯು ತುಂಬೀತು ಎಂಬ ಆತಂಕ ರಾಜಕೀಯ ವಲಯಗಳಲ್ಲಿ ಕಾಡಿದೆ. ದೆಹಲಿಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡರೆ ಆಮ್ ಆದ್ಮೀ ಪಾರ್ಟಿಯ ಸೀಟುಗಳು ತಗ್ಗಲಿವೆ. ಇದೇ ರೀತಿ ಹರಿಯಾಣದಲ್ಲಿ ಆಪ್ ಚೇತರಿಸಿಕೊಂಡರೆ ಕಾಂಗ್ರೆಸ್ ಗೆ ಏಟು ಬೀಳಲಿದೆ.
ಬಿಜೆಪಿಯನ್ನು ಸಮಾನಶತ್ರು ಎಂದು ಭಾವಿಸುವ ಕಾಂಗ್ರೆಸ್ ಮತ್ತು ಆಪ್ ಹರಿಯಾಣದಲ್ಲಿ ಪರಸ್ಪರ ಸಹಕರಿಸದೆ ಹೋದರೆ ದೆಹಲಿಯ ಭದ್ರಕೋಟೆಯಲ್ಲೂ ಬಿಜೆಪಿ ಬಿರುಕು ಮೂಡಿಸುವುದು ಅಸಾಧ್ಯವೇನೂ ಅಲ್ಲ. ಸವಾಲೆಸೆದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಕೇಜ್ರೀವಾಲ್ ಮತ್ತು ಕಾಂಗ್ರೆಸ್ ಹರಿಯಾಣದ ನಡೆಯ ಕುರಿತು ಪುನರಾಲೋಚನೆ ಮಾಡಬೇಕಿದೆ. ಬಿಜೆಪಿಯ ಸೋಲುಗಳು ಗೆಲುವುಗಳಾಗದ ರಾಜಕಾರಣ ನಡೆಸಬೇಕಿದೆ.
