ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ಆತನಿಗೆ ಶೂ ನೆಕ್ಕುವಂತೆ ಮಾಡಿ ಪ್ರಬಲ ಜಾತಿಗರು ಜಾತಿ ದೌರ್ಜನ್ಯ ಎಸಗಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 15 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವೈರಲ್ ವೀಡಿಯೋದಲ್ಲಿ ಜಾತಿ ದೌರ್ಜನ್ಯಕ್ಕೆ ಒಳಗಾಗಿರುವ ಯುವಕನನ್ನು ರಾಯ್‌ಬರೇಲಿ ಬಳಿಯ ಉಂಚಾಹರ್ ಕೊತ್ವಾಲಿ ಪ್ರದೇಶದ ಸವಯ್ಯ ರಾಜೇ ಗ್ರಾಮದ ನಿವಾಸಿ ಅಮನ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಕೆಲವರು ಅಮಾನುಷವಾಗಿ ಥಳಿಸಿ ಶೂ ನೆಕ್ಕುವಂತೆ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ಸಂಬಂಧ ಸಾಮಾಜಿಕ ಜಾಲತಾನದಲ್ಲಿ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಡಾಲ್ಮೌ ಅರುಣ್ ನೌಹರ್, “ಈ ಘಟನೆ ಹಳೆಯದು. ಉಂಚಹಾರ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತ ಯುವಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 12 ಮಂದಿ ಮತ್ತು 3 ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ” ಎಂದು ಹೇಳಿದ್ದಾರೆ.
ಒಂದೆಡೆ, ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ‘ಬುಲ್ಡೋಜರ್ ಆಕ್ಷನ್’ ಹೆಸರಿನಲ್ಲಿ ಹಿಂದುಳಿದ, ದಲಿತ ಸಮುದಾಯಕ್ಕೆ ಸೇರಿದ ಆರೋಪಿಗಳ ಮನೆ, ಅಂಗಡಿ, ಆಸ್ತಿಗಳನ್ನು ಕೆಡವುತ್ತಿದೆ. ಇನ್ನೊಂದೆಡೆ, ದಲಿತರ ಮೇಲೆ ಜಾತಿ ದೌರ್ಜನ್ಯಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ದಲಿತರಿಗೆ ರಕ್ಷಣೆ ಮರೀಚಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಆಗಸ್ಟ್ 21 ರಂದು ಘಟನೆ ನಡೆದಿದೆ. ಸಂತ್ರಸ್ತ ಅಮನ್ ಸಿಂಗ್ ಅವರು ಕೆಲಸದ ನಿಮಿತ್ತ ಉಂಚಹಾರ್‌ಗೆ ಬೈಕ್‌ನಲ್ಲಿ ತೆರಳಿದ್ದರು. ಅಲ್ಲಿ, ಅವರ ಬೈಕ್‌ಗೆ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ಡಿಕ್ಕಿ ಹೊಡೆದು, ಅಪಹರಿಸಿ ಹಲ್ಲೆಗೈದು, ಮತ್ತೆ ಸುಂಕದಕಟ್ಟೆ ಬಳಿ ಎಸೆದು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.