ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ‘ಎಕ್ಸ್’ನಲ್ಲಿ ಸುಳ್ಳು ಸುದ್ದಿಯನ್ನು ಹರಡಿದ್ದ ಆರೋಪದ ಮೇಲೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ನಾಗಮಂಗಲ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಟೌನ್ಹಾಲ್ ಮುಂಭಾಗ ಸಂಘಪರಿವಾರದ ಕಾರ್ಯಕರ್ತರು ಗಣೇಶನ ಮೂರ್ತಿಯನ್ನು ಇಟ್ಟುಕೊಂಡು ಪ್ರತಿಭಟಿಸುತ್ತಿದ್ದರು. ಆ ವೇಳೆ ಪೊಲೀಸರು ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ, ಈ ಫೋಟೋಗಳನ್ನು ತಮ್ಮ “ಎಕ್ಸ್” ವೇದಿಕೆಯಲ್ಲಿ ಹಂಚಿಕೊಂಡು ನಾಗಮಂಗದಲ್ಲಿ ಪೂಜಿಸುತ್ತಿದ್ದ ಗಣೇಶನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹಿಗಳು ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಬರಹವನ್ನು ಪೋಸ್ಟ್ ಮಾಡಿದ್ದರು.
ಈ ಬಗ್ಗೆ ಮಂಡ್ಯ ಪೊಲೀಸರು ಫೇಸ್ಬುಕ್ ಪೇಜ್ನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಸುಳ್ಳು ಸುದ್ದಿ ಹರಡಿದ್ದಕ್ಕೆ ಶೋಭಾ ಕರಂದ್ಲಾಜೆ ವಿರುದ್ಧ ಪೊಲೀಸ್ ಅಧಿಕಾರಿ ಎಂ.ರಮೇಶ್ ಎಂಬವರು ನೀಡಿದ ದೂರಿನ ಮೇರೆಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್), 2023(ಯು/ಎಸ್-169) ಪ್ರಕಾರ ಪ್ರಕರಣ ದಾಖಲಾಗಿದೆ.

ನಾಗಮಂಗಲದಲ್ಲಿ ನಡೆಯದ, ಎಲ್ಲೋ ನಡೆದಿರುವ ಘಟನೆಯ ಫೋಟೋಗಳನ್ನು ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ಸಮಯದಲ್ಲಿ ನಡೆದ ಘಟನೆಗಳನ್ನು ಬಿಂಬಿಸಿ ಸಮಾಜದಲ್ಲಿ ದೊಂಬಿ, ಗಲಭೆಯುಂಟು ಮಾಡುವ ದೃಷ್ಟಿಯಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿ ದೊಂಬಿಗೆ ಪ್ರಚೋದನೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಿರುದ್ಧವೂ ಎಫ್ಐಆರ್
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್), 2023(ಯು/ಎಸ್-169) ಪ್ರಕಾರ ನಾಗಮಂಗಲ ಪೊಲೀಸ್ ಟೌನ್ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಎಫ್ಐಆರ್ ದಾಖಲಾಗಿದೆ.
ಯುವಕನೊಬ್ಬ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಎರಡು ವಿಡಿಯೋಗಳನ್ನು ಆರ್ ಅಶೋಕ್ ಅವರು ತಮ್ಮ ಹೆಸರಿನ “ಎಕ್ಸ್” ವೇದಿಕೆಯಲ್ಲಿ ಹಂಚಿಕೊಂಡಿದ್ದರು.
ಇದನ್ನು ಓದಿದ್ದೀರಾ? ಉಡುಪಿ | ಜಿಲ್ಲೆಯಲ್ಲಿ ಕಾಲರಾ ಭೀತಿ: ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಕರೆ
ಅಲ್ಲದೇ, “ಈ ಘಟನೆ ನಾಗಮಂಗಲದ ಬದರಿಕೊಪ್ಪಲು ಗ್ರಾಮದಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದಿದೆ. ಪಾಕಿಸ್ತಾನ್ ಜಿಂದಾಬ್ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ” ಎಂಬ ಬರಹವನ್ನು ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋ ಕೂಡ ದಾವಣಗೆರೆಯದ್ದಾಗಿದ್ದು, ವಾಸ್ತವವಾಗಿ ನಾಗಮಂಗಲದ ವಿಡಿಯೋ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಳ್ಳು ಹರಡಿದ್ದಕ್ಕಾಗಿ ಆರ್ ಅಶೋಕ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ದಿಲ್ಲಿ ಜುಮ್ಲಾ ಬಾದಶಾಗಳನ್ನು ಮೆಚ್ಚಿಸಲು,, ತಮ್ಮ ಸ್ಥಾನದ ಜವಾಬ್ದಾರಿ ಪರಿವೇ ಇಲ್ಲದೆ,, ನಾಲಿಗೆ ಮೇಲೆ ನಿಯಂತ್ರಣ ಇಲ್ಲದೆ ಒಬ್ಬ ಸಾಮಾನ್ಯ ಕಾರ್ಯಕರ್ತನಿಗಿಂತಲೂ ಕೀಳು ಮಟ್ಟದಲ್ಲಿ ನಾಲಿಗೆ ಹರಿಬಿಡುವ ಇವರಿಗೆ ಜವಾಬ್ದಾರಿ ಹುದ್ದೆ ಕೊಡುವ ಪಕ್ಷದ ಮನಸ್ಥಿತಿ ಹೇಗಿರಬೇಕು,,,ದೇಶದ ಸ್ಥಿತಿ ನೆನಪಿಸಿಕೊಂಡರೆ ಭಯ ಆಗುವುದು