‘ಬಾಹುಬಲಿ’ ಮತ್ತು ‘ಪುಷ್ಪ’ದಂತಹ ಭಾರೀ ಮೊತ್ತದ ಸಿನಿಮಾಗಳಿಗೆ ನೃತ್ಯ ಸಂಯೋಜನೆ (ಕೊರಿಯೋಗ್ರಫಿ) ಮಾಡಿದ್ದ ಜಾನಿ ಮಾಸ್ಟರ್ ಅವರನ್ನು ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ, 21 ವರ್ಷದ ಯುವತಿಯೊಬ್ಬರು ತಮ್ಮ ಮೇಲೆ ಜಾನಿ ಮಾಸ್ಟರ್ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಾವು ಅಪ್ರಾಪ್ತೆಯಾಗಿದ್ದಾಗಲೇ ತಮ್ಮ ಮೇಲೆ ಜಾನಿ ಮಾಸ್ಟರ್ ಮೊದಲ ಬಾರಿಗೆ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಜಾನಿ ಮಾಸ್ಟರ್‌ನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅವರನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
“ನಾನು ಜಾನಿ ಮಾಸ್ಟರ್‌ಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದೆ. ಆಗ, ವಿವಿಧ ನಗರಗಳಲ್ಲಿ ತಮ್ಮ ಚಿತ್ರೀಕರಣಕ್ಕೆ ತೆರಳಿದ್ದಾಗ ಅನೇಕ ಬಾರಿ ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಮಾತ್ರವಲ್ಲದೆ, ಬೇರೆಲ್ಲಿಯೂ ಉದ್ಯೋಗಾವಕಾಶ ಸಿಗದಂತೆ ಮಾಡುತ್ತೇನೆಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ” ಎಂದೂ ಯುವತಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
2017ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಗೆ ಜಾನಿ ಮಾಸ್ಟರ್ ಪರಿಚಯವಾಗಿತ್ತು. ಅದಾದ, ಎರಡು ವರ್ಷಗಳ ನಂತರ ಅವರು ನನ್ನನ್ನು ಸಹಾಯಕ ಕೊರಿಯೋಗ್ರಾಫರ್‌ಆಗಿ ನೇಮಿಸಿಕೊಂಡಿದ್ದರು. ಬಳಿಕ, ನನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದರು. ಘಟನೆ ಬಗ್ಗೆ, ದೂರು ನೀಡಿದರೆ ಬೇರೆಯದ್ದೇ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದದರು. ಫೋಟೋಶೂಟ್ ಮತ್ತು ರಿಹರ್ಸಲ್ ಸಮಯದಲ್ಲಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ” ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ಸಂತ್ರಸ್ತ ಯುವತಿ ತಲುವು ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಬೆನ್ನಲ್ಲೇ ಜಾನಿ ಮಾಸ್ಟರ್‌ರನ್ನು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಾರ್ಮಿಕರ ಸಂಘದಿಂದ ಅಮಾನತುಗೊಳಿಸಲಾಗಿತ್ತು.
ಜಾನಿ ಮಾಸ್ಟರ್ ಅವರು ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಪಕ್ಷದ ಸದಸ್ಯರಾಗಿದ್ದಾರೆ. ಜನಸೇನೆ, ಪ್ರಸ್ತುತ ಆಂಧ್ರಪ್ರದೇಶದಲ್ಲಿ ಸರ್ಕಾರ ರಚಿಸಿರುವ ಮೈತ್ರಿಕೂಟದ ಭಾಗವಾಗಿದೆ. ಪಕ್ಷದ ಕಾರ್ಯಕ್ರಮಗಳಿಂದ ದೂರ ಇರುವಂತೆ ಜಾನಿ ಮಾಸ್ಟರ್‌ಗೆ ತಿಳಿಸಲಾಗಿದೆ ಎಂದು ಜನಸೇನೆ ಹೇಳಿಕೊಂಡಿದೆ.