ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಮುಖ್ಯರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ. ಸುಮಾರು ನಾಲ್ಕೈದು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ನಿತ್ಯ ವಾಹನಗಳಲ್ಲಿ ಸಂಚರಿಸಲು ಹರಸಾಹಸಪಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಸ್ತೆಯು ಮಧ್ಯೆ ತಗ್ಗು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ನಿತ್ಯ ಜೀವ ಕೈಯಲ್ಲಿಡಿದು ಸಂಚರಿಸುತ್ತಿದ್ದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲಿ ಇತ್ತಕಡೆ ಗಮನ ಹರಿಸುತ್ತಿಲ್ಲ. ಇವರ ನಿರ್ಲಕ್ಷ್ಯದಿಂದ ಈವರೆಗೆ ರಸ್ತೆಯು ದುರಸ್ತಿಯಾಗದೆ ಉಳಿದಿದೆ” ಎಂದು ಆರೋಪಿಸುತ್ತಿದ್ದಾರೆ.

ಸ್ಥಳೀಯ ನಿವಾಸಿ ರಾಜು ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಸ್ತೆ ಮಧ್ಯೆ ತಗ್ಗು ಗುಂಡಿಗಳು ಬಿದ್ದಿವೆ. ಪಟ್ಟಣ ಪಂಚಾಯಿತಿಯವರು ಗರಸು ಮಣ್ಣು ಹಾಕಿ ತಗ್ಗು ಗುಂಡಿಗಳನ್ನು ಮುಚ್ಚುತ್ತಾರೆ. ಆದರೆ ಮಳೆ ಬಂದರೆ ಮತ್ತೆ ರಸ್ತೆ ಹಾಳಾಗುತ್ತದೆ ನಿತ್ಯ ಸಂಚರಿಸುವ ವಾಹನಗಳಿಂದ ದೂಳು ಬರುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮವಹಿಸಿ ರಸ್ತೆ ದುರಸ್ತಿ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಕುರಿತು ಮಾಹಿತಿ ಪಡೆಯಲು ಈ ದಿನ.ಕಾಮ್ ಘಟಪ್ರಭಾ ಪುರಸಭೆ ಕಚೇರಿಗೆ ಸಂಪರ್ಕಿಸಿದಾಗ ಪುರಸಭೆ ಸಿಬ್ಬಂದಿ ಮಾತನಾಡಿ, “ರಸ್ತೆ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ರಸ್ತೆ ಸರಿಪಡಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ʼಈ ದಿನʼ ವರದಿಗೆ ಎಚ್ಚೆತ್ತ ಅಧಿಕಾರಿಗಳು; ನ್ಯೂಮಂಡ್ಲಿ ಉರ್ದು ಶಾಲೆಗೆ ಬಿಇಒ ಭೇಟಿ, ಸಮಸ್ಯೆ ಬಗೆಹರಿಸುವ ಭರವಸೆ
“ಘಟಪ್ರಭಾದಲ್ಲಿ 1935ರಲ್ಲಿ ಪ್ರಾರಂಭವಾಗಿರುವ ಕರ್ನಾಟಕ ಆರೋಗ್ಯ ಧಾಮ ಆಸ್ಪತ್ರೆಗೆ ಬೇರೆ ಬೇರೆ ಹಳ್ಳಿಗಳಿಂದ ನಿತ್ಯವೂ ಸಾವಿರಾರು ಜನರು ಆಸ್ಪತ್ರೆಗೆ ಬರುತ್ತಾರೆ. ಇವರ ಸಂಚಾರಕ್ಕೂ ಅನಾನುಕೂಲವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕಿದೆ” ಎಂದು ಆಗ್ರಹಿಸಿದರು.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು