- ನಾಗರಬಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ
- ಪೊಲೀಸರು ಯುವಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ
ಬೆಂಗಳೂರಿಗೆ ದುಡಿಮೆಗಾಗಿ ಚಿತ್ರದುರ್ಗದಿಂದ ಆಗಮಿಸಿ, ನಗರದಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನ ಮೃತದೇಹವು ನಾಗರಬಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಯುವಕನನ್ನು ನವೀನ್ (24) ಎಂದು ಗುರುತಿಸಲಾಗಿದೆ. ಈತ ಮೂಲತಃ ಚಿತ್ರದುರ್ಗದವನು. ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು.
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಗರಬಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯುವಕನ ಮೃತದೇಹ ಪತ್ತೆಯಾದ ಹಿನ್ನೆಲೆ, ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಲಾಟೆಗೆ ಸಂಬಂಧವಿಲ್ಲದವ ಜಗಳದಲ್ಲಿ ಜೋಶ್ ಬೇಕೆಂದು ಚಾಕು ಇರಿದ: ಬಂಧನ
ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಅನುಮಾನ ವ್ಯಕ್ತವಾಗಿದೆ. ಇನ್ನು ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಅಥವಾ ಇತರೆ ಮಾಹಿತಿ ಲಭ್ಯವಾಗಿಲ್ಲ. ಸ್ಥಳ ಮಹಜರ್ ನಂತರ ಪೊಲೀಸರು ಯುವಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.