ಕೋಲಾರ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸರಕಾರದಿಂದ 376 ಕೋಟಿ ಅನುದಾನ ನೀಡಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರಕಾರ ಅನುದಾನ ಬಿಡುಗಡೆಗೊಳಿಸಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು.
ತಾಲೂಕಿನ ನರಸಾಪುರ ಗ್ರಾಮದಲ್ಲಿ ಗುರುವಾರ ನಾಲ್ಕು ಪಥದ ರಸ್ತೆಗೆ 7 ಕೋಟಿ, ರಾಷ್ಟ್ರೀಯ ಹೆದ್ದಾರಿಯಿಂದ ಖಾಜಿಕಲ್ಲಹಳ್ಳಿ ಮಾರ್ಗದ ರಸ್ತೆಗೆ 5 ಕೋಟಿ ಹಾಗೂ ನರಸಾಪುರ ಸೊಸೈಟಿಯ ನೂತನ ಕಟ್ಟಡಕ್ಕೆ 1.5 ಕೋಟಿ ಸೇರಿದಂತೆ ಒಟ್ಟು 13.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಸರಮಾಲೆಯೇ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನುದಾನ ನೀಡಲು ಸರಕಾರದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಸರಕಾರದ ಅಭಿವೃದ್ಧಿ ಜನರ ಕಣ್ಣಮುಂದಿದೆ ಎಂದು ಹೇಳಿದರು.

ಹಿಂದಿನ ಬಿಜೆಪಿ ಸರಕಾರದಲ್ಲಿ 40% ಕಮಿಷನ್ ನಿಂದ ಅಭಿವೃದ್ಧಿ ಶೂನ್ಯವಾಗಿತ್ತು. ನಮ್ಮ ಸರಕಾರವು ಯಾರಪ್ಪನ ಮನೆಯಿಂದ ಕೂಡ ಹಣ ತಂದಿಲ್ಲ. ಜನರ ದುಡ್ಡನ್ನೇ ಜನರಿಗೆ ಕೊಡುತ್ತಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದಲ್ಲಿ ಅವರಿಗೆ ತಿನ್ನಲು ಸಾಕಾಗಲಿಲ್ಲ, ಅದಕ್ಕೆ ಅಭಿವೃದ್ಧಿ ಶೂನ್ಯವಾಗಿತ್ತು. ನಾವು ರಾಜಕಾರಣವನ್ನು ಹೊಟ್ಟೆಪಾಡಿಗೆ, ವ್ಯಾಪಾರಕ್ಕೆ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದು, ಅಭಿವೃದ್ಧಿಯೇ ನಮ್ಮ ಗುರಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಿದ್ದೇವೆ. ಬಡವರಿಗೆ ಸಾಮಾನ್ಯ ಜನರ ಏಳಿಗೆಗಾಗಿ ಐದು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಹೇಳಿದ ಸುಳ್ಳಿನ ಸರಪಳಿಯನ್ನು ತುಂಡರಿಸಿದ್ದೇವೆ. ಜನ 136 ಸ್ಥಾನ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಸರ್ಕಾರವು ಬಿದ್ದು ಹೋಗುತ್ತದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದ್ದಾರೆ. ಜನಕ್ಕೆ ಅಭಿವೃದ್ಧಿ ಯಾರ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಅಭಿವೃದ್ಧಿಯನ್ನು ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ. ಜನರೇ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಗುಣಮಟ್ಟದ ಪರೀಕ್ಷೆಯನ್ನು ಗಮನಿಸಬೇಕು. ಕಳಪೆ ಕೆಲಸವಾದರೆ ದೂರು ನೀಡಬೇಕು ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮತ್ತು ರಾಜಕೀಯ ಮಾಡಬಾರದು. ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡತ್ತಿದ್ದು ಇನ್ನೂ ಕೆಲವು ಕಡೆಗಳಲ್ಲಿ ಟೆಂಡರ್ ನಡೆದಿದ್ದು ಉಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮಂಜುನಾಥ್, ಎಂಟಿಬಿ ಶ್ರೀನಿವಾಸ್, ಶ್ರೀರಾಮಪ್ಪ, ಜಾಲಿ ಬಾಬು ಜನಪನಹಳ್ಳಿ ನವೀನ್ ಕುಮಾರ್, ಮುಂತಾದವರು ಇದ್ದರು.