ಸರಕಾರಿ ಸೌಲಭ್ಯಗಳು ಹಾಗೂ ಹಲವಾರು ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಿದ್ದು, ನಾಗರೀಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ತಾಲೂಕಿನ ಪೈಪಾಳ್ಯ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲೂಕು ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಸ್ಪಂದನಾ ಕಾರ್ಯಕ್ರಮದ ಮೂಲಕ ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುತ್ತಾರೆ. ಹಾಗಾಗಿ ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.
600 ಕ್ಕೂ ಹೆಚ್ಚು ಅರ್ಜಿಗಳ ಸಲ್ಲಿಕೆ :
ಜನಸ್ಪಂದನಾ ಕಾರ್ಯಕ್ರಮದಲ್ಲಿ ಪೋಲನಾಯಕನಹಳ್ಳಿ ಮತ್ತು ಜೂಲಪಾಳ್ಯ ಗ್ರಾಪಂ ವ್ಯಾಪ್ತಿಯ ಸಾವಿರಾರು ಜನರು ಭಾಗವಹಿಸಿದ್ದು, 600ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾದವು. ಗ್ಯಾರಂಟಿ ಯೋಜನೆಗಳು, ರಸ್ತೆ, ನಿವೇಶನ, ವಸತಿ, ಪಡಿತರ ಚೀಟಿ, ಸಾರಿಗೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.
ನಾನಾ ಸೌಲಭ್ಯಗಳ 1130 ಆದೇಶ ಪತ್ರಗಳ ವಿತರಣೆ :
ಇದೇ ವೇಳೆ ಕಂದಾಯ ಇಲಾಖೆ ವ್ಯಾಪ್ತಿಯ 300 ಕ್ಕೂ ಹೆಚ್ಚು ಪಿಂಚಣಿ, ಭಾಗ್ಯಲಕ್ಷ್ಮಿ ಬಾಂಡ್ , 90 ಮಂದಿಗೆ ಹಕ್ಕು ಪತ್ರ, 21 ಗ್ರಾಮಗಳಿಗೆ ಸ್ಮಶಾನ ಮಂಜುರಾತಿ ಪತ್ರಗಳು, ಸಾಗುವಳಿ ಚೀಟಿ, ಖಾತೆಗಳು, ಮನೆ ಹಾನಿ, ಆಕಸ್ಮಿಕವಾಗಿ ಮರಣ ಹೊಂದಿದವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ಗಳು, ತಾಲೂಕು ಪಂಚಾಯತಿ ವತಿಯಿಂದ ನರೇಗಾ ಜಾಬ್ ಕಾರ್ಡ್, ಎನ್ಆರ್ ಎಲ್ಎಮ್ ಯೋಜನೆ ಸೇರಿದಂತೆ ನಾನಾ ಯೋಜನೆಗಳ 1130 ಫಲಾನುಭವಿಗಳಿಗೆ ಸೌಲಭ್ಯಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಮಂಜುನಾಥ ರೆಡ್ಡಿ, ತಹಶೀಲ್ದಾರ್ ಮನಿಷಾ ಮಹೇಶ್.ಎಸ್.ಪತ್ರಿ, ಇಓ ರಮೇಶ್, ಬಿಇಓ ಎನ್.ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ, ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್ ವರ್ಣಿ, ಸಿಡಿಪಿಓ ರಾಮಚಂದ್ರ, ಮುಖಂಡರಾದ ಬೂರಗಮಡುಗು ನರಸಿಂಹಪ್ಪ, ಪಿ.ಮಂಜುನಾಥರೆಡ್ಡಿ, ಜೂಲಪಾಳ್ಯ ಮತ್ತು ಪೋಲನಾಯಕನಹಳ್ಳಿ ಗ್ರಾಮ ಪಂಚಾಯತಿಗಳ ಪಿಡಿಓ, ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.