ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟು ತೆರಿಗೆ ರಿಯಾಯಿತಿಯನ್ನು ಏಪ್ರಿಲ್ ನಂತರ ವಿಸ್ತರಣೆ ಮಾಡದಿರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.
ಸೋಮವಾರದಿಂದ (ಮೇ 1) ತೆರಿಗೆ ಪಾವತಿದಾರರಿಗೆ ರಿಯಾಯಿತಿ ಸಿಗುವುದಿಲ್ಲ. ಇದಕ್ಕೆ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯೇ ಕಾರಣ ಎಂದು ಬಿಬಿಎಂಪಿ ಹೇಳಿದೆ.
ತೆರಿಗೆ ರಿಯಾಯಿತಿ ವಿಸ್ತರಣೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಬಿಬಿಎಂಪಿ ಮೂಲಗಳು ತಿಳಿಸಿವೆ. ಮನವಿಗೆ ಸ್ಪಂದನೆ ಸಿಗದ ಕಾರಣ ರಿಯಾಯಿತಿ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮೇ ತಿಂಗಳಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ತೆರಿಗೆ ರಿಯಾಯಿತಿಯನ್ನು ವಿಸ್ತರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.